ADVERTISEMENT

ತಿಂಗಳೊಳಗೆ ರೈತರ ಸಾಲಮನ್ನಾ: ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿಕೆ

1.60 ಲಕ್ಷ ಅರ್ಜಿ ಬಾಕಿ, 1.18 ಲಕ್ಷ ರೈತರ ಅರ್ಜಿ ಅರ್ಹ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 1:52 IST
Last Updated 7 ಮಾರ್ಚ್ 2020, 1:52 IST
ಎಸ್.ಟಿ.ಸೋಮಶೇಖರ್
ಎಸ್.ಟಿ.ಸೋಮಶೇಖರ್   

ಬೆಂಗಳೂರು: ‘ಸಾಲ ಮನ್ನಾ ಯೋಜನೆಯಡಿ 1,60,493 ರೈತರ ಅರ್ಹತೆ ಗುರುತಿಸಲು ಬಾಕಿ ಇರುವುದರಿಂದ ಸಾಲ ಮನ್ನಾ ಸೌಲಭ್ಯ ನೀಡಲು ಸಾಧ್ಯವಾಗಿಲ್ಲ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ವಿಧಾನಸಭೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿ, ರೈತರ ಬಳಿ ಆಧಾರ್‌ ಸಂಖ್ಯೆ ಇಲ್ಲದಿರುವುದು, ಹೆಸರಿನಲ್ಲಿ ವ್ಯತ್ಯಾಸದಂತಹ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳೇ ವಿಳಂಬಕ್ಕೆ ಕಾರಣ ಎಂದು ಹೇಳಿದರು.

‘1,60,493 ರೈತರ ಅರ್ಜಿಗಳಲ್ಲಿ 41,867 ಅರ್ಜಿಗಳು ಅನರ್ಹಗೊಂಡಿವೆ. ಉಳಿದ 1,18,626 ರೈತರು ದಾಖಲೆಗಳನ್ನು ಸಲ್ಲಿಸಿದ ಬಳಿಕ ಸಾಲ ಮನ್ನಾ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದರು.

ADVERTISEMENT

ಈ ಎಲ್ಲ ಸಮಸ್ಯೆಗಳನ್ನು ಇದೇ ತಿಂಗಳ 31 ರೊಳಗೆ ಬಗೆಹರಿಸಿ ಸಾಲ ಮನ್ನಾ ಸೌಲಭ್ಯ ಸಿಗುವಂತೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

‘ಸಾಲ ಮನ್ನಾ ಯೋಜನೆಯಲ್ಲಿ 18.32 ಲಕ್ಷ ರೈತರ ಪೈಕಿ ಈಗಾಗಲೇ 16.01 ಲಕ್ಷ ರೈತರಿಗೆ ಸಾಲ ಮನ್ನಾ ಮೊತ್ತ ವಿತರಿಸಲು ₹7,434 ಕೋಟಿ ಬಿಡುಗಡೆ ಮಾಡಲಾಗಿತ್ತು. ಈ ಪೈಕಿ 15.70 ಲಕ್ಷ ರೈತರಿಗೆ ₹7,275 ಕೋಟಿಯನ್ನು ನಿಫ್ಟ್‌ ಮೂಲಕ ಅವರ ಉಳಿತಾಯ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ’ ಎಂದರು.

‘ಡಿಸಿಸಿ ಬ್ಯಾಂಕ್‌ಗಳು ರೈತರ ಉಳಿತಾಯ ಖಾತೆಗಳ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿರುವುದರಿಂದ ₹176 ಕೋಟಿ ಅಪೆಕ್ಸ್‌ ಬ್ಯಾಂಕಿಗೆ ತಪ್ಪಾಗಿ ನಿಫ್ಟ್‌ ಮೂಲಕ ಹೋಗಿದ್ದು, ಅದನ್ನು ಸರಿಪಡಿಸುವ ಕಾರ್ಯ ನಡೆದಿದೆ’ ಎಂದು ಸೋಮಶೇಖರ್‌ ಹೇಳಿದರು.

‘2,30,990 ರೈತರ ಪೈಕಿ 70,497 ರೈತರು ಅರ್ಹತೆ ಹೊಂದುವ ದಾಖಲಾತಿಗಳನ್ನು ಸಲ್ಲಿಸಿದ್ದು, ಸಾಲ ಮನ್ನಾ ನಿಗದಿಪಡಿಸಿ ಅನುದಾನ ಬಿಡುಗಡೆಗೆ ಕ್ರಮ ಜರುಗಿಸಲಾಗಿದೆ’ ಎಂದರು.

ನಿರ್ಬಂಧ ತೆಗೆಯಲು ಒತ್ತಾಯ: ‘ಸಾಲ ಮನ್ನಾ ಅರ್ಹತೆಗೆ ವಿಧಿಸಿರುವ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂದು ಹಲವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.