ADVERTISEMENT

ಆಸ್ತಿ: ಇದೇ 26ರಿಂದ ಡಿಜಿಟಲ್‌ ನೋಂದಣಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 23 ಮೇ 2025, 16:17 IST
Last Updated 23 ಮೇ 2025, 16:17 IST
   

ಬೆಂಗಳೂರು: ರಾಜ್ಯದ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ಮತ್ತು ಇತರೆ ನೋಂದಣಿ ಪ್ರಕ್ರಿಯೆ ಮೇ 26ರಿಂದ ಸಂಪೂರ್ಣ ಡಿಜಿಟಲೀಕರಣಗೊಳ್ಳಲಿದೆ.

ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ಮಸೂದೆ–2025 ಅನ್ನು ಅಧಿಕೃತವಾಗಿ ಜಾರಿಗೊಳಿಸಲು ಕಂದಾಯ ಇಲಾಖೆ ಆದೇಶ ಹೊರಡಿಸಿದ್ದು, ಇನ್ನು ಮಂದೆ ಸ್ವತ್ತು ಮತ್ತು ಇತರ ನೋಂದಣಿಗಳಲ್ಲಿ ಡಿಜಿಟಲ್‌ ಸಹಿ, ಡಿಜಿಟಲ್‌ ಇ–ಸ್ಟಾಂಪ್‌ ಬಳಕೆ ಜಾರಿ ಕಡ್ಡಾಯವಾಗಲಿದೆ. ಈ ಹಿಂದಿನಂತೆ ಅಂಟಿಸುವ ಅಥವಾ ಮುದ್ರೆ ಹಾಕುವ ಸ್ಟಾಂಪ್‌ಗಳ ಬಳಕೆಯನ್ನು ನಿಲ್ಲಿಸಲಾಗುತ್ತದೆ.

ಇ–ಸ್ಟಾಂಪ್‌ ದುರುಪಯೋಗವನ್ನು ತಡೆಯಲು ಸ್ಟಾಂಪ್‌ ಮೊತ್ತವನ್ನು ವಿದ್ಯುನ್ಮಾನ ಪಾವತಿ ಮಾಡಬೇಕಿದೆ. ಸಿಬ್ಬಂದಿ ಮೂಲಕ (ಮ್ಯಾನ್ಯುವಲ್) ಸ್ಟಾಂಪ್‌ ವಿತರಿಸುವುದು ಸಂಪೂರ್ಣ ಸ್ಥಗಿತವಾಗಲಿದೆ.

ADVERTISEMENT

ಡಿಜಿಟಲ್‌ ಸಹಿ ದುರುಪಯೋಗ ಆಗದಂತೆ ಮಾಡಲು ಜಿಲ್ಲಾಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರದ ಅಧಿಕಾರಿಯ ಸಹಿಯನ್ನು ಆಧಾರ್‌ಗೆ ಜೋಡಣೆ ಮಾಡಲಾಗಿರುತ್ತದೆ. ಸಹಿ ದೃಢೀಕರಣಗೊಂಡರೆ ಮಾತ್ರ ಸಹಿ ಸಾಧ್ಯ. ಡಿಜಿಟಲ್‌ ಸಹಿಯಲ್ಲಿ ಬಯೊಮೆಟ್ರಿಕ್‌ ಕೂಡ ಇರುತ್ತದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.