ADVERTISEMENT

ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗಿದೆ, ಶ್ವೇತ ಪತ್ರ ಹೊರಡಿಸಲಿ: ಜಗದೀಶ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 11:04 IST
Last Updated 31 ಜನವರಿ 2019, 11:04 IST
   

ಹುಬ್ಬಳ್ಳಿ: ರಾಜ್ಯ ಸರ್ಕಾರ ಆರ್ಥಿಕ ಶಿಸ್ತನ್ನು ಮೀರಿ ಸಾಲ ಮಾಡಿದ್ದು, ದಿವಾಳಿ ಅಂಚಿಗೆ ತಲುಪಿದೆ. ಸಾಲದ ಪ್ರಮಾಣ 3 ಲಕ್ಷ ಕೋಟಿ ಮೀರಿದ್ದು, ಆರ್ಥಿಕ ಸ್ಥಿತಿಗತಿ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಈ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಶಾಸಕ ಜಗದೀಶ ಶೆಟ್ಟರ್ ಆಗ್ರಹಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಅವಧಿ ಕೊನೆಯ ಮೂರು ತಿಂಗಳಲ್ಲಿ ಘೋಷಿಸಿದ ಯೋಜನೆಗಳಿಗೆ ಹಣ ಹೊಂದಿಸಲು ಮುಖ್ಯಮಂತ್ರಿ ಹರಸಾಹಸಪಡುತ್ತಿದ್ದಾರೆ. ಈಗಾಗಲೇ ₹1,500 ಕೋಟಿಯನ್ನು ಬಾಂಡ್‌ ವಿತರಣೆ ಮೂಲಕ ಸಾಲ ಪಡೆದಿದ್ದಾರೆ. ಅಲ್ಲದೆ ₹80 ಸಾವಿರ ಕೋಟಿಯನ್ನು ಸಾಲ ಪಡೆಯಲು ಮುಂದಾಗಿದ್ದಾರೆ. ಸರ್ಕಾರದ ಆದಾಯದಲ್ಲಿ ಕೇವಲ ಶೇ12ರಷ್ಟು ಮಾತ್ರ ಅಭಿವೃದ್ಧಿ ಕೆಲಸಗಳಿಗೆ ಮೀಸಲಿಡಲಾಗಿದ್ದು, ಉಳಿದ ಮೊತ್ತ ಸಾಲ, ಬಡ್ಡಿ, ಸಂಬಳಕ್ಕೆ ವೆಚ್ಚವಾಗುತ್ತಿದೆ ಎಂದರು.

ಸರ್ಕಾರದ ಪಾಲುದಾರ ಪಕ್ಷಗಳ ಮಧ್ಯೆ ಒಳಜಗಳ ಮಿತಿ ಮೀರಿದ್ದು ಸರ್ಕಾರ ಪತನದ ಹಾದಿಯಲ್ಲಿದೆ. ಕಾಂಗ್ರೆಸ್ ಶಾಸಕರು ಮಾಡಿದ ಟೀಕೆಗೆ ಉತ್ತರ ನೀಡುವುದರಲ್ಲಿಯೇ ಮುಖ್ಯಮಂತ್ರಿ ಕಾಲ ಕಳೆಯುತ್ತಿದ್ದಾರೆ. ಜೆಡಿಎಸ್ ಅಧ್ಯಕ್ಷ ದೇವೇಗೌಡ ಅವರು ನೇರವಾಗಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿದ್ದಾರೆ. ಈ ಬೆಳವಣಿಗೆ ಗಮನಿಸಿದರ ಸಿದ್ದರಾಮಯ್ಯ ಅವರಿಂದಲೇ ಸರ್ಕಾರ ಪತನವಾಗಲಿದೆ. ಈ ಸರ್ಕಾರ ಕೆಡವಲು ಬಿಜೆಪಿ ಪ್ರಯತ್ನಿಸುವುದಿಲ್ಲ. ಅದೇ ಬೀಳಲಿದೆ (ಹಿಟ್‌ವಿಕೆಟ್) ಎಂದು ಭವಿಷ್ಯ ನುಡಿದರು.

ADVERTISEMENT

ಕಾಂಗ್ರೆಸ್– ಜೆಡಿಎಸ್ ಒಳಜಗಳ ಮಿತಿ ಮೀರಿದ ಕಾರಣ ಖುದ್ದು ರಾಹುಲ್ ಗಾಂಧಿ ಅವರೇ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಸಿದ್ದರಾಮಯ್ಯ ಅವರನ್ನು ಕರೆದು ಅಡ್ಜಸ್ಟ್‌ಮೆಂಟ್ ಮಾಡುವಂತೆ ಸೂಚನೆ ನೀಡಿದ್ದಾರೆ. ಚುನಾವಣೆಯ ನಂತರ ಖಂಡಿತ ಸರ್ಕಾರ ಇರುವುದಿಲ್ಲ. ದೊಂಬರಾಟದಲ್ಲಿ ಸರ್ಕಾರ ನಡೆಸುವ ಬದಲು ಕುಮಾರಸ್ವಾಮಿ ರಾಜೀನಾಮೆ ನೀಡಿ ಮನೆಗೆ ಹೋಗುವುದು ಒಳ್ಳೆಯದು ಎಂದರು. ಜೆಡಿಎಸ್‌ನವರು ನಮ್ಮನ್ನು ಭೇಟಿಯಾಗಿಲ್ಲ. ಯಡಿಯೂರಪ್ಪ ಅವರನ್ನು ರೇವಣ್ಣ ಭೇಟಿಯಾದ ವಿಷಯವನ್ನು ಅವರನ್ನೇ ಕೇಳಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಫೆಬ್ರುವರಿ 6ರಿಂದ ಜಂಟಿ ಅಧಿವೇಶನ ನಡೆಯಲಿದ್ದು, ಸರ್ಕಾರದ ವಿರುದ್ಧ ಯಾವ ರೀತಿ ಹೋರಾಟ ನಡೆಸಬೇಕು ಎಂಬುದರ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು. ನರೇಗಾ ಸೇರಿದಂತೆ ವಿವಿಧ ಯೋಜನೆಗಳ ಬಾಕಿ ಹಣವನ್ನು ಕೇಂದ್ರ ನೀಡಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ. ದಾಖಲೆಗಳನ್ನು ನೀಡಿದರೆ ಕೇಂದ್ರ ಹಣ ಬಿಡುಗಡೆ ಮಾಡಲಿದೆ. ಕೇಂದ್ರ ಸರ್ಕಾರ ಬರ ಪರಿಹಾರ ಮೊತ್ತ ₹949 ಕೋಟಿ ನೀಡಿದೆ. ರಾಜ್ಯ ಸಲ್ಲಿಸುವ ಪ್ರಸ್ತಾವದ ಮೇಲೆ ಬಿಡುಗಡೆ ಮಾಡಬೇಕಾದ ಮೊತ್ತ ಎಷ್ಟು ಎಂಬುದನ್ನು ಕೇಂದ್ರ ನಿರ್ಧರಿಸಲಿದೆ ಎಂದರು. ಬಿಜೆಪಿಯವರನ್ನು ಲಫಂಗರು ಎಂದು ಟೀಕಿಸಿದ್ದ ಸಿದ್ದರಾಮಯ್ಯ ಅವರು ದೂರು ಹೇಳಲು ಬಂದ ಮಹಿಳೆಯೊಂದಿಗೆ ಲಫಂಗನ ರೀತಿ ನಡೆದುಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.