ಬೆಂಗಳೂರು: ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿಗಳ ದತ್ತಾಂಶ ಸಂಗ್ರಹಕ್ಕೆ ನಡೆಸಲಿರುವ ಸಮೀಕ್ಷೆಯಲ್ಲಿ, ಜಾತಿ ತಾರತಮ್ಯ ಕುರಿತಾದ ಮಾಹಿತಿಗಳನ್ನೂ ಕಲೆ ಹಾಕಲಾಗುತ್ತದೆ.
ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗವು, ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ–2025ರ ರೂಪುರೇಷೆಗಳನ್ನು ಸಿದ್ಧಪಡಿಸಿದೆ. ಮನೆ–ಮನೆಗೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸಲು ಆ್ಯಂಡ್ರಾಯ್ಡ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಪರಿಶಿಷ್ಟ ಜಾತಿಗಳ ಜನರು, ಜಾತಿಯ ಕಾರಣಕ್ಕೆ ಸಾಮಾಜಿಕ ತಾರತಮ್ಯಕ್ಕೆ ಗುರಿಯಾದುದರ ಬಗ್ಗೆ ಮಾಹಿತಿ ಕಲೆ ಹಾಕಲೂ ಈ ಆ್ಯಪ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಆ್ಯಪ್‌ನ 16ನೇ ವಿಂಡೊವನ್ನು ಮೀಸಲಿಡಲಾಗಿದೆ.
ಸಮೀಕ್ಷೆಗೆ ಒಳಪಡುವವರು ಆಧಾರ್/ಪಡಿತರ ಚೀಟಿ ನೀಡಿ ನೋಂದಣಿ ಮಾಡಿಕೊಂಡ ನಂತರ ಅವರ ಮತ್ತು ಕುಟುಂಬದವರ ವೈಯಕ್ತಿಕ ವಿವರ ಸಂಗ್ರಹಿಸಲಾಗುತ್ತದೆ. ಕುಟುಂಬದ ಸದಸ್ಯರ ವಿವರ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ಸರ್ಕಾರಿ ಸವಲತ್ತುಗಳು, ಮೂಲಸೌಕರ್ಯಗಳು ಸೇರಿ ಸಮಗ್ರ ಮಾಹಿತಿಯನ್ನು ಕಲೆ ಹಾಕಲು ಈ ಆ್ಯಪ್‌ನಲ್ಲಿ ಒಟ್ಟು 17 ವಿಂಡೋಗಳನ್ನು ರೂಪಿಸಲಾಗಿದೆ.
16ನೇ ವಿಂಡೋವಿನಲ್ಲಿ ‘ಕುಟುಂಬವು ಯಾವುದಾದರೂ ಸಾಮಾಜಿಕ ತಾರತಮ್ಯಕ್ಕೆ ಗುರಿಯಾಗಿದೆಯೇ?’ ಎಂಬ ಪ್ರಶ್ನೆ ಇದೆ. ಸಮೀಕ್ಷೆ ನಡೆಸುವವರು ಈ ಪ್ರಶ್ನೆ ಕೇಳಿದಾಗ ಕುಟುಂಬದವರು ‘ಹೌದು’ ಎಂದು ಉತ್ತರಿಸಿದರೆ, ತಾರತಮ್ಯದ ಸ್ವರೂಪವನ್ನು ವಿವರಿಸುವ ಉಪವಿಂಡೋ ತೆರೆದುಕೊಳ್ಳುತ್ತದೆ. ಇದರಲ್ಲಿ 15 ಸ್ವರೂಪದ ತಾರತಮ್ಯಗಳನ್ನು ಆಯ್ಕೆ ಮಾಡಲು ಅವಕಾಶವಿದೆ.
ಸಮೀಕ್ಷೆಗೆ ಒಳಪಡುವವರು ತಾವು ಎದುರಿಸಿದ ತಾರತಮ್ಯದ ಸ್ವರೂಪವನ್ನು ಆಯ್ಕೆ ಮಾಡಬಹುದು. ಅದರ ಉಲ್ಲೇಖ ಉಪವಿಂಡೋವಿನ ಪಟ್ಟಿಯಲ್ಲಿ ಇಲ್ಲದಿದ್ದರೆ, ‘ಹೇಗೆ ತಾರತಮ್ಯಕ್ಕೆ ಗುರಿ ಮಾಡಲಾಯಿತು’ ಎಂಬುದನ್ನು ವಿವರಿಸಲೂ ಅವಕಾಶವಿದೆ.
ಸಮೀಕ್ಷೆ ನಡೆಸುವ ಶಿಕ್ಷಕರು ಮತ್ತು ಸ್ಥಳೀಯ ಸಂಸ್ಥೆಗಳ ಇತರ ಸಿಬ್ಬಂದಿಗೆ ಈಗಾಗಲೇ ತರಬೇತಿ ಹಾಗೂ ಆ್ಯಪ್ ಬಳಕೆ ಪ್ರಾತ್ಯಕ್ಷಿಕೆ ನೀಡಲಾಗಿದೆ.
‘ಪರಿಶಿಷ್ಟ ಜಾತಿಯ ಜನರ ಮೇಲೆ ನಡೆಯುವ ತಾರತಮ್ಯದ ಸ್ವರೂಪ, ಅದರ ತೀವ್ರತೆಯನ್ನು ಅರ್ಥಮಾಡಿಕೊಳ್ಳಲು ಇದು ನೆರವಾಗಲಿದೆ. ಹೀಗಾಗಿ ತಾರತಮ್ಯ ಕುರಿತಾದ ಪ್ರಶ್ನೆಗಳನ್ನು ಸರಿಯಾಗಿ ವಿವರಿಸಬೇಕು. ಸರಿಯಾದ ಮಾಹಿತಿಯನ್ನು ಕಲೆಹಾಕಬೇಕು. ಸಮೀಕ್ಷೆಗೆ ಒಳಪಡುವವರು ಈ ಮಾಹಿತಿ ಹಂಚಿಕೊಳ್ಳಲು ಹಿಂದೇಟು ಹಾಕಬಹುದು. ಅದರ ಮಹತ್ವವನ್ನು ಅರ್ಥಮಾಡಿಸಿ, ಮಾಹಿತಿಯನ್ನು ಕಲೆಹಾಕಬೇಕು ಎಂದು ತರಬೇತಿಯ ವೇಳೆ ಒತ್ತಿ ಹೇಳಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ಹಿಂದುಳಿದಿರುವಿಕೆಯ ವ್ಯಾಖ್ಯಾನಕ್ಕೆ ಅನುಕೂಲ’
‘ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ಹಿಂದುಳಿದಿರುವಿಕೆಯನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಹಿಂದುಳಿದಿರುವಿಕೆ ಅಂದರೆ ಏನು ಎಂದು ವ್ಯಾಖ್ಯಾನಿಸಿಲ್ಲ. ಆರ್ಥಿಕ ಶೈಕ್ಷಣಿಕ ಮತ್ತು ರಾಜಕೀಯ ಸ್ಥಿತಿಯಿಂದ ಮಾತ್ರ ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಸಾಧ್ಯವಿಲ್ಲ. ಸಾಮಾಜಿಕ ತಾರತಮ್ಯವು ಇದನ್ನು ಅತ್ಯಂತ ಸ್ಪಷ್ಟವಾಗಿ ತೋರಿಸಲಿದೆ. ಹೀಗಾಗಿ ಸಾಮಾಜಿಕ ತಾರತಮ್ಯ ಕುರಿತಾದ ಈ ಭಾಗವು ಸಮೀಕ್ಷೆ ಮತ್ತು ಅದನ್ನು ಆಧರಿಸಿದ ವರದಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ’ ಎಂದು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪರಿಶಿಷ್ಟ ಜಾತಿಗಳಲ್ಲೇ ಸ್ಪೃಶ್ಯ ಮತ್ತು ಅಸ್ಪೃಶ್ಯರು ಇದ್ದಾರೆ. ಈ ಸಮುದಾಯಗಳು ಒಂದೇ ಕೇರಿ ಅಥವಾ ಕಾಲೊನಿಯಲ್ಲಿ ವಾಸಿಸುವ ಪರಸ್ಪರ ಸಾಮಾಜಿಕ ಮತ್ತು ವೈವಾಹಿಕ ಸಂಬಂಧ ಇರಿಸಿಕೊಳ್ಳುವ ಉದಾಹರಣೆ ಇಲ್ಲವೇ ಇಲ್ಲ. ತಾರತಮ್ಯದ ಸ್ವರೂಪ ಕುರಿತು ದತ್ತಾಂಶ ಕಲೆಹಾಕಿದರೆ ಪರಿಶಿಷ್ಟ ಜಾತಿಗಳಲ್ಲೇ ಅತ್ಯಂತ ಹಿಂದುಳಿದಿರುವವರು ಯಾರು ಎಂಬುದು ಗೊತ್ತಾಗಲಿದೆ. ಜತೆಗೆ ಪ್ರಬಲ ಜಾತಿಗಳೆಂದು ಗುರುತಿಸಲಾಗುವ ಸಮುದಾಯಗಳಿಂದ ಎದುರಿಸುವ ತಾರತಮ್ಯದ ಸ್ವರೂಪವೂ ಗೊತ್ತಾಗಲಿದೆ’ ಎಂದು ವಿವರಿಸಿದರು. ‘ನಮ್ಮಲ್ಲಿ ಜಾತಿ ತಾರತಮ್ಯ ಇಲ್ಲ ಎಂದು ವಾದಿಸುವವರು ಇದ್ದಾರೆ. ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ತಾರತಮ್ಯ ಕಡಿಮೆ ಇದೆ. ಆದರೆ ಜೀವಂತವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ತಾರತಮ್ಯದ ಸ್ವರೂಪ ಒಂದಾದರೆ ನಗರಗಳಲ್ಲಿ ಮತ್ತೊಂದು. ನಗರದಲ್ಲಿ ನೀವು ಬಾಡಿಗೆಗೆ ಮನೆ ಹುಡುಕುತ್ತಾ ಹೋದರೆ ನಿಮ್ಮ ಆಹಾರ ಪದ್ಧತಿ ತಂದೆಯ ಹೆಸರು ಕೇಳಿ ಜಾತಿಯನ್ನು ಪತ್ತೆ ಮಾಡುತ್ತಾರೆ. ಮನೆ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ಜಾತಿ ಆಧಾರದಲ್ಲಿ ನಿರ್ಧರಿಸುತ್ತಾರೆ. ಈ ಎಲ್ಲ ರೀತಿಯ ತಾರತಮ್ಯವನ್ನು ಅರ್ಥಮಾಡಿಕೊಳ್ಳಲು ಸಮೀಕ್ಷೆಯ ಈ ಭಾಗ ನೆರವಾಗಲಿದೆ. ಒಳಮೀಸಲಾತಿ ಮತ್ತು ಇತರ ಕೆಲ ಸುಧಾರಣೆಗಳ ಕುರಿತಾದ ಶಿಫಾರಸುಗಳನ್ನು ಈ ಅಂಶ ಪ್ರಭಾವಿಸಲಿದೆ’ ಎಂದು ಮಾಹಿತಿ ನೀಡಿದರು.
ತಾರತಮ್ಯದ ಸ್ವರೂಪ
* ಇತರ ಜಾತಿ ಸಮುದಾಯಗಳ ಸದಸ್ಯರೊಂದಿಗೆ ಆಹಾರ ಸೇವಿಸುವುದಕ್ಕೆ ನಿಷೇಧ * ಹಳ್ಳಿಗಳ ಟೀ ಸ್ಟಾಲ್‌ಗಳಲ್ಲಿ ಪ್ರತ್ಯೇಕ ಲೋಟ/ಕಪ್ ನೀಡುವುದು * ರೆಸ್ಟೋರೆಂಟ್‌ಗಳಲ್ಲಿ ಪ್ರತ್ಯೇಕ ಆಸನ ನೀಡಿ ಪ್ರತ್ಯೇಕತೆ ಮಾಡುವುದು * ಹಳ್ಳಿಗಳಲ್ಲಿ ಹಬ್ಬ ಕಾರ್ಯಕ್ರಮಗಳಲ್ಲಿ ಆಸನ ಮತ್ತು ಆಹಾರ ವ್ಯವಸ್ಥೆಯಲ್ಲಿ ಪ್ರತ್ಯೇಕತೆ * ಸಾರ್ವಜನಿಕ ಪೂಜಾ ಸ್ಥಳಗಳ ಪ್ರವೇಶಕ್ಕೆ ನಿಷೇಧ * ಉಚ್ಚ ಜಾತಿಯ ಸದಸ್ಯರ ಎದುರಿಗೆ ಚಪ್ಪಲಿ ಧರಿಸುವುದು ಅಥವಾ ಛತ್ರಿ ಉಪಯೋಗಿಸುವುದಕ್ಕೆ ಪ್ರತಿಬಂಧ * ಬೇರೆ ಜಾತಿಯವರ ಮನೆ ಪ್ರವೇಶಕ್ಕೆ ಪ್ರತಿಬಂಧ * ಸಾರ್ವಜನಿಕ ರಸ್ತೆಗಳ ಬಳಕೆಯ ಮೇಲೆ ಪ್ರತಿಬಂಧಗಳು * ಸಮಾಧಿ/ಸ್ಮಶಾನ ಸ್ಥಳಗಳಲ್ಲಿ ಪ್ರತ್ಯೇಕತೆ * ಸಾರ್ವಜನಿಕ ಸವಲತ್ತು/ಸಂಪನ್ಮೂಲಗಳ (ಬಾವಿ ಕೊಳ ದೇವಾಲಯ ಇತ್ಯಾದಿ) ಬಳಕೆಗೆ ಪ್ರತಿಬಂಧಗಳು * ಶಾಲೆಗಳಲ್ಲಿ ಆಸನಗಳ ವ್ಯವಸ್ಥೆಯಲ್ಲಿ ಭೇದಭಾವ ಹಾಗೂ ಪ್ರತ್ಯೇಕತೆ * ಜೀತ ಹಾಗೂ ಋಣಬಂಧಿತ ಕಾರ್ಮಿಕ ಪದ್ಧತಿ * ಬಲವಂತದ ಕರ್ತವ್ಯ ನಿರ್ವಹಿಸಲು ನಿರಾಕರಿಸಿದ್ದಕ್ಕೆ ಉಚ್ಚ ಸಮುದಾಯಗಳಿಂದ ಸಾಮಾಜಿಕ ಬಹಿಷ್ಕಾರ * ನೀವು ಯಾವುದಾದರೂ ವಿಮುಕ್ತ ಬುಡಕಟ್ಟು (ಅಪರಾಧಿಕ ಬುಡಕಟ್ಟು) ಸಮುದಾಯಕ್ಕೆ ಸೇರಿದವರೇ? * ಮೇಲಿನ ಯಾವುವೂ ಅಲ್ಲದಿದ್ದರೆ ತಾರತಮ್ಯದ ಇತರೆ ಸ್ವರೂಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.