ADVERTISEMENT

ನಾಪತ್ತೆಯಾಗಿದ್ದ ಚಾರಣಿಗ ಸುರಕ್ಷಿತ

ದಾರಿ ತೋರಿದ ದೇಗುಲ ತೀರ್ಥದ ಪೈಪ್‌ಲೈನ್‌

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 19:48 IST
Last Updated 17 ಸೆಪ್ಟೆಂಬರ್ 2019, 19:48 IST
ಮಂಗಳವಾರ ದೇವರಗದ್ದೆಗೆ ಬಂದ ಸಂತೋಷ್‌ ಉಪಾಹಾರ ಸೇವಿಸಿದರು
ಮಂಗಳವಾರ ದೇವರಗದ್ದೆಗೆ ಬಂದ ಸಂತೋಷ್‌ ಉಪಾಹಾರ ಸೇವಿಸಿದರು   

ಸುಬ್ರಹ್ಮಣ್ಯ: ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಕುಮಾರ ಪರ್ವತದ ಚಾರಣಕ್ಕೆ ತೆರಳಿದ್ದ ತಂಡದಿಂದ ನಾಪತ್ತೆಯಾಗಿದ್ದ ಬೆಂಗಳೂರು ಗಾಯತ್ರಿನಗರದ ನಿವಾಸಿ ಸಂತೋಷ್, ಮಂಗಳವಾರ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಕುಕ್ಕೆಯಿಂದ ಚಾರಣಕ್ಕೆ ತೆರಳಿದ್ದ 12 ಮಂದಿ ತಂಡ, ಭಾನುವಾರ ಹಿಂತಿರುಗುತ್ತಿದ್ದ ವೇಳೆ ಸಂತೋಷ್‌ ನಾಪತ್ತೆಯಾಗಿದ್ದರು. ಕಾಡಿನಲ್ಲಿ ದಾರಿ ತಪ್ಪಿಸಿಕೊಂಡಿದ್ದ ಅವರು, ಕಾಡಿನಿಂದ ದೇಗುಲಕ್ಕೆ ನೀರು ಸರಬರಾಜಿಗೆ ಅಳವಡಿಸಿದ್ದ ಪೈಪ್‌ಲೈನ್‌ ಜತೆಗೆ ನಡೆದುಕೊಂಡು ಬಂದಿದ್ದು, ದೇವರಗದ್ದೆ ತಲುಪಿದ್ದಾರೆ.

‘ದಾರಿ ತಪ್ಪಿದ್ದರಿಂದ ಎರಡು ರಾತ್ರಿ ಕಾಡಿನಲ್ಲೇ ಕಳೆದೆ. ಬಂಡೆಕಲ್ಲುಗಳ ಮೇಲೆ ಮಲಗಿದ್ದೆ. ತೊರೆ ನೀರನ್ನು ಕುಡಿದು ಹಸಿವು ನೀಗಿಸಿಕೊಂಡಿದ್ದೆ. ಯಾವುದೇ ಕಾಡುಪ್ರಾಣಿ ಎದುರಾಗಲಿಲ್ಲ’ ಎಂದು ಸಂತೋಷ್‌ ತಿಳಿಸಿದರು.

ADVERTISEMENT

‘ದಾರಿ ಹುಡುಕುತ್ತಾ ಕಾಡಿನಲ್ಲಿ ಅಲೆದಾಡುವಾಗ ಪೈಪ್‌ಲೈನ್‌ ಕಾಣಿಸಿತು. ಇದು ಯಾವುದಾದರೂ ಊರಿಗೆ ಸೇರುತ್ತದೆ ಎಂಬ ನಂಬಿಕೆಯಿಂದ ಅದೇ ಪೈಪ್‌ಲೈನ್‌ ಅನ್ನು ಅನುಸರಿಸಿಕೊಂಡು ಬಂದೆ’ ಎಂದು ಹೇಳಿದರು.

ಸಂತೋಷ್‌ ನಾಪತ್ತೆ ಸುದ್ದಿ ತಿಳಿದಾಗಿನಿಂದ ಸ್ಥಳೀಯ ಪೊಲೀಸರು ಹಾಗೂ ಸಿಬ್ಬಂದಿ ಜತೆ ಕೊಡಗಿನ ಸೋಮವಾರಪೇಟೆ ಪೊಲೀಸರು, ಅರಣ್ಯ ಸಿಬ್ಬಂದಿ ಕೂಡ ಕಾರ್ಯಾಚರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.