ADVERTISEMENT

ಕೆಎಸ್‌ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ಡಾ. ಸುಧಾಕರ್ ನೇಮಕ ನಿಯಮಬಾಹಿರ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 20:15 IST
Last Updated 6 ಸೆಪ್ಟೆಂಬರ್ 2019, 20:15 IST
.
.   

ಬೆಂಗಳೂರು: ‘ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಸ್ಥಾನಕ್ಕೆ ಡಾ.ಕೆ.ಸುಧಾಕರ್‌ (ಸದ್ಯ ಅನರ್ಹಗೊಂಡಿರುವ ಶಾಸಕ) ಅವರನ್ನು ನೇಮಕ ಮಾಡಿರುವುದು ನಿಯಮ ಬಾಹಿರವಾಗಿದೆ’ ಎಂದು ಹೈಕೋರ್ಟ್‌ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಕುರಿತಂತೆ ಚಿಕ್ಕಬಳ್ಳಾಪುರದ ಪಟ್ರೇನಹಳ್ಳಿಯ ‘ಶಾಶ್ವತ ನೀರಾವರಿ ಹೋರಾಟ ಸಮಿತಿ’ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಅವರು, ಸುಧಾಕರ್ ನೇಮಕಕ್ಕೆ ಸಂಬಂಧಿಸಿದ ಕಡತಗಳನ್ನು ನ್ಯಾಯಪೀಠಕ್ಕೆ ನೀಡಿದರು. ಕಡತ ಪರಿಶೀಲಿಸಿದ ನ್ಯಾಯಪೀಠ, ‘2019ರ ಜೂನ್‌ 20ರಂದು ಸುಧಾಕರ್‌ ನೇಮಕ ಮಾಡಲಾಗಿದೆ. ಏತನ್ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ಕೋರ್ಟ್‌ಗೆ ಸಲ್ಲಿಸಿ ಎಂದು ಕಳೆದ ತಿಂಗಳ 30ರಂದು ಆದೇಶಿಸಲಾಗಿದೆ. ಆದರೆ, ಸೆಪ್ಟೆಂಬರ್‌ 3ರಂದು ಮುಖ್ಯಮಂತ್ರಿ ನೇಮಕಕ್ಕೆ ಅನುಮೋದನೆ ನೀಡಿರುವುದು ನಿಯಮ
ಬಾಹಿರ ಅಲ್ಲವೇ’ ಎಂದು ಪ್ರಶ್ನಿಸಿತು.

ADVERTISEMENT

‘ಕೋರ್ಟ್‌ ನೋಟಿಸ್ ಜಾರಿಯಾಗಿ ಪ್ರಕರಣ ವಿಚಾರಣೆ ಬಾಕಿ ಇರುವ ಹಂತದಲ್ಲಿ ನೇಮಕಕ್ಕೆ ಘಟನೋತ್ತರ ಅನುಮೋದನೆ ನೀಡಿರುವುದರಿಂದ ನೇಮಕ ಪಾರದರ್ಶಕವಾಗಿಲ್ಲ. ಹೀಗಾಗಿ ಈ ಕುರಿತು ವಿವರಣೆ ನೀಡಬೇಕು ಮತ್ತು ಇದೇ 20ರೊಳಗೆ ಆಕ್ಷೇಪಣೆ ಸಲ್ಲಿಸಬೇಕು’ ಎಂದು ಹೇಳಿತು.

ಇದೇ 23ಕ್ಕೆ ಅಂತಿಮ ವಿಚಾರಣೆ ನಿಗದಿಪಡಿಸಲಾಗಿದೆ. ಅರ್ಜಿದಾರರ ಪರ ಪ್ರಿನ್ಸ್ ಐಸಾಕ್‌ ವಾದ ಮಂಡಿಸಿದರು.

ಆಕ್ಷೇಪಣೆ ಏನು?: ‘ಕೆಎಸ್‌ಪಿಸಿಬಿ ಅಧ್ಯಕ್ಷರ ನೇಮಕದ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಮಾರ್ಗಸೂಚಿ ಪಾಲನೆಯಾಗಿಲ್ಲ. ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಆದ್ದರಿಂದ ಡಾ.ಕೆ.ಸುಧಾಕರ್ ನೇಮಕ ರದ್ದುಗೊಳಿಸಬೇಕು’ ಎಂಬುದು ಅರ್ಜಿದಾರರ ಆಕ್ಷೇಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.