ADVERTISEMENT

ಕಾರಿನಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ: ಮರಣ ಪತ್ರ- ಲಿಂಬಾವಳಿ ಸೇರಿ 6 ಹೆಸರು

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 19:45 IST
Last Updated 1 ಜನವರಿ 2023, 19:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಮನಗರ: ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲೀಪುರ ಸಮೀಪದ ನೆಟ್ಟಗೆರೆ ಬಳಿ ಕಾರಿನಲ್ಲೇ ತಲೆಗೆ ಗುಂಡು ಹಾರಿಸಿಕೊಂಡು ಪ್ರದೀಪ್ (47) ಎಂಬುವರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರದೀಪ್ ಬರೆದಿದ್ದಾರೆ ಎನ್ನಲಾದ 8 ಪುಟಗಳ ಮರಣ ಪತ್ರ ಕಾರಿನಲ್ಲಿ ಸಿಕ್ಕಿದೆ. ಶಾಸಕ ಅರವಿಂದ ಲಿಂಬಾವಳಿ, ಉದ್ಯಮಿಗಳಾದ ಕೆ. ಗೋಪಿ, ಸೋಮಯ್ಯ, ರಮೇಶ್ ರೆಡ್ಡಿ, ಜಯ ರಾಮ್ ರೆಡ್ಡಿ ಹಾಗೂ ರಾಘವ ಭಟ್‌ ಎಂಬುವರ ಹೆಸರುಗಳನ್ನು ಮೊಬೈಲ್‌ ಸಂಖ್ಯೆ ಸಹಿತವಾಗಿ ಉಲ್ಲೇಖಿಸಲಾಗಿದೆ.

‘ಆರು ಜನರಿಂದ ನನಗೆ ಅನ್ಯಾಯವಾಗಿದೆ. ಇವರಿಗೆ ಶಿಕ್ಷೆ ಕೊಟ್ಟು, ನನಗೆ ನ್ಯಾಯ ಒದಗಿಸಬೇಕು’ ಎಂಬುದು ಪತ್ರದಲ್ಲಿದೆ. ಇದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

‘ಬೆಂಗಳೂರಿನ ಎಚ್ಎಸ್‌ಆರ್ ಲೇಔಟ್ ಬಳಿಯ ಅಮಲೀಪುರದ ನಿವಾಸಿ ಪ್ರದೀಪ್, ಹೊಸ ವರ್ಷಾಚರಣೆ ಅಂಗವಾಗಿ ನೆಟ್ಟಗೆರೆ ಬಳಿಯ ರೆಸಾರ್ಟ್‌ಗೆ ಶನಿವಾರ ರಾತ್ರಿ ಕುಟುಂಬದೊಂದಿಗೆ ಬಂದಿದ್ದರು. ಭಾನುವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬದವರ ಹೇಳಿಕೆ ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಹಣ ಪಡೆದು ವಂಚನೆ: ‘ಎಚ್ಎಸ್ಆರ್ ಲೇಔಟ್ ಬಳಿ ರೆಸಾರ್ಟ್‌ವೊಂದನ್ನು ನಿರ್ಮಿಸಲಾಗುತ್ತಿತ್ತು. ನನ್ನನ್ನು ಪಾಲುದಾರರರಾಗಿ ಮಾಡಿಕೊಳ್ಳುವುದಾಗಿ ಹೇಳಿದ್ದ ಉದ್ಯಮಿಗಳು, ₹ 1.5 ಕೋಟಿ ಪಡೆದಿದ್ದರು. ಮನೆ ಮಾರಿ, ಸಾಲ ಮಾಡಿ ಹಣ ಕೊಟ್ಟಿದ್ದೆ. ಆದರೆ, ಪಾಲುದಾರಿಕೆ ಹೆಸರಿನಲ್ಲಿ ವಂಚನೆ ಮಾಡಿದ್ದು, ನನಗೆ ಒಟ್ಟು ₹ 2.25 ಕೋಟಿ ಬರಬೇಕಿದೆ’ ಎಂಬುದಾಗಿ ಪ್ರದೀಪ್ ಮರಣಪತ್ರದಲ್ಲಿ ಬರೆದಿರುವುದಾಗಿ ಮೂಲಗಳು ಹೇಳಿವೆ.

‘ಅರವಿಂದ ಲಿಂಬಾವಳಿ ಉದ್ಯಮಿಗಳ ಪರವಾಗಿ ಸಂಧಾನಕ್ಕೆ ಪ್ರಯತ್ನ ಮಾಡಿದ್ದರು. ತಿಂಗಳಿಗೆ ಇಂತಿಷ್ಟು ಹಣ ನೀಡುವಂತೆ ಮಾತುಕತೆ ಆಗಿತ್ತು. ಆದರೆ, ನಂತರದಲ್ಲಿ ಒಂದಿಷ್ಟು ಹಣ ಮಾತ್ರ ಬಂತು. ಉಳಿದ ಹಣ ಬರಲಿಲ್ಲ. ಯಾರೂ ನನಗೆ ಸಹಾಯ ಮಾಡಲಿಲ್ಲ’ ಎಂದೂ ಪತ್ರದಲ್ಲಿ ಪ್ರದೀಪ್ ಬರೆದಿದ್ದಾರೆಂದು ಗೊತ್ತಾಗಿದೆ.

ಹೊಸ ವರ್ಷಾಚರಣೆಗೆ ಬಂದಿದ್ದ ಪ್ರದೀಪ್: ‘ಕಗ್ಗಲೀಪುರ ಸಮೀಪವಿರುವ ನೆಟ್ಟಗೆರೆ ಬಳಿ ಇರುವ ರೆಸಾರ್ಟ್‌ಗೆ ಶನಿವಾರ ರಾತ್ರಿ ಕುಟುಂಬದೊಂದಿಗೆ ಪ್ರದೀಪ್ ಬಂದಿದ್ದರು. ಬೆಳಿಗ್ಗೆ ಶಿರಾಗೆ ಹೋಗಬೇಕು ಎಂದು ರೆಸಾರ್ಟ್‌ನಿಂದ ಹೊರಹೋಗಿದ್ದ ಅವರು ಮನೆಯಲ್ಲಿ ಡೆತ್‌ನೋಟ್ ಬರೆದುಕೊಂಡಿದ್ದರು. ಪುನಃ ರೆಸಾರ್ಟ್‌ಗೆ ಬಂದು, ಭಾನು ವಾರ ಸಂಜೆ ಮನೆಗೆ ವಾಪಸ್‌ ಆಗುವಾಗ ಚಲಿಸುತ್ತಿದ್ದ ಕಾರಿನಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಕಾರು ರಸ್ತೆ ಬದಿಯ ಆವರಣದ ಗೋಡೆಗೆ ತಾಗಿ ನಿಂತಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.