ADVERTISEMENT

ಸುಳ್ವಾಡಿ ವಿಷ ಪ್ರಸಾದ ದುರಂತ: ಜಿಲ್ಲಾಡಳಿತದ ಕಾರ್ಯನಿರ್ವಹಣೆ ಮೈಸೂರಿಗೆ ವರ್ಗ

ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರ ಕಡೆಗೆ ಸಂಪೂರ್ಣ ಗಮನ

ಸೂರ್ಯನಾರಾಯಣ ವಿ
Published 18 ಡಿಸೆಂಬರ್ 2018, 19:35 IST
Last Updated 18 ಡಿಸೆಂಬರ್ 2018, 19:35 IST
ಬಿ.ಬಿ. ಕಾವೇರಿ
ಬಿ.ಬಿ. ಕಾವೇರಿ   

ಚಾಮರಾಜನಗರ: ಹನೂರು ತಾಲ್ಲೂಕಿನ ಸುಳ್ವಾಡಿ ಕಿಚ್ಚುಗುತ್ತು ಮಾರಮ್ಮನ ದೇವಾಲಯದಲ್ಲಿ ಕಳೆದ ಶುಕ್ರವಾರ ವಿಷ ಪ್ರಸಾದ ದುರಂತ ನಡೆದ ದಿನದಿಂದ ಜಿಲ್ಲಾಡಳಿತದ ಕಾರ್ಯನಿರ್ವಹಣೆ ಅಕ್ಷರಶಃ ಮೈಸೂರಿಗೆ ವರ್ಗಾವಣೆ ಆಗಿದೆ.ಜಿಲ್ಲಾ ಆಡಳಿತ ಯಂತ್ರ ಸದ್ಯಕ್ಕೆ ಈ ಪ್ರಕರಣದತ್ತಲೇ ಗಮನ ಹರಿಸಿದೆ.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ.ಕೆ. ಹರೀಶ್‌ ಕುಮಾರ್‌ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಮೈಸೂರಿನಲ್ಲಿ ಬೀಡು ಬಿಟ್ಟು, ಅಸ್ವಸ್ಥಗೊಂಡವರ ಚಿಕಿತ್ಸೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.

ಡಿಸೆಂಬರ್‌ 14ರಂದು ಮಧ್ಯಾಹ್ನ ದುರಂತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಖುದ್ದು ಜಿಲ್ಲಾಧಿಕಾರಿ ಹಾಗೂ ಸಿಇಒ, ಪೊಲೀಸ್‌ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿ ಅವರು ಕಾಮಗೆರೆ ಹಾಗೂ ಕೊಳ್ಳೇಗಾಲದ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಸ್ವಸ್ಥರನ್ನು ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳಲು ವ್ಯವಸ್ಥೆ ಮಾಡಿದ್ದರು. ತದನಂತರ ಇಡೀ ಜಿಲ್ಲಾಡಳಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಯೋಗಕ್ಷೇಮ ವಿಚಾರಿಸುವುದರಲ್ಲಿ ನಿರತವಾಗಿದೆ.

ADVERTISEMENT

‘ಇದೊಂದು ಅನಿರೀಕ್ಷಿತ ಘಟನೆ. ನಮ್ಮ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಲ್ಲ. ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಅಷ್ಟೂ ಜನರಿಗೆ ಜಿಲ್ಲೆಯಲ್ಲಿಚಿಕಿತ್ಸೆ ನೀಡುವುದು ಸಾಧ್ಯವಿರಲಿಲ್ಲ. ಮೈಸೂರು ಹತ್ತಿರದಲ್ಲಿರುವುದು ನಮಗೆ ನೆರವಾಯಿತು’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನೋಡೆಲ್‌ ಅಧಿಕಾರಿಗಳ ನೇಮಕ: ಕೆ.ಆರ್‌.ಆಸ್ಪತ್ರೆ ಸೇರಿದಂತೆ ಮೈಸೂರಿನ 12 ಆಸ್ಪತ್ರೆಗಳಲ್ಲಿ 100ಕ್ಕೂ ಹೆಚ್ಚು ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಯೋಗಕ್ಷೇಮ ವಿಚಾರಿಸಲು, ಆಸ್ಪತ್ರೆಗೆ ಬರುವ ಅವರ ಕುಟುಂಬದವರಿಗೆ ಸಹಾಯ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ಎಲ್ಲ ಆಸ್ಪತ್ರೆಗಳಿಗೆ ನೋಡೆಲ್‌ ಅಧಿಕಾರಿಗಳನ್ನು ನೇಮಿಸಿದೆ. ವಿವಿಧ ಇಲಾಖೆಗಳ ಜಿಲ್ಲಾ ಮುಖ್ಯಸ್ಥರನ್ನು ನೋಡೆಲ್‌ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಅವರ ಸಹಾಯಕ್ಕಾಗಿ ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನೂ ನೇಮಿಸಲಾಗಿದೆ.

ಇವರ ಕೆಲಸ ಏನು?

‘ಈ ಅಧಿಕಾರಿಗಳು ದಿನದ 24 ಗಂಟೆಗಳ ಕಾಲವೂ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿರುವವರ ಮೇಲೆ ನಿಗಾ ಇಡಬೇಕು. ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮಾಹಿತಿ ನೀಡಬೇಕಾಗುತ್ತದೆ’ ಎಂದು ಕಾವೇರಿ ಅವರು ತಿಳಿಸಿದರು.

‘ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ಈ ಅಧಿಕಾರಿಗಳು ಕಾಳಜಿ ತೋರಬೇಕು. ಅಲ್ಲದೆ, ಅವರ ಕುಟುಂಬದರಿಗೆ ಉಳಿದುಕೊಳ್ಳಲು ಹಾಗೂ ಆಹಾರದ ವ್ಯವಸ್ಥೆ ಮಾಡಬೇಕು. ಅಸ್ವಸ್ಥರು ಪೂರ್ಣಗುಣಮುಖರಾದ ಬಳಿಕ, ಅವರನ್ನು ಮನೆಗೆ ತಲುಪಿಸುವ ಹೊಣೆಯೂ ಇವರ ಮೇಲೆ ಇದೆ. ಒಂದು ವೇಳೆ ಚಿಕಿತ್ಸೆ ಪಡೆಯುತ್ತಿರುವವರು ಮೃತಪಟ್ಟರೆ ಮರಣೋತ್ತರ ಪರೀಕ್ಷೆ ಮಾಡಿಸಿ, ಮೃತದೇಹವನ್ನು ಅವರ ಕುಟುಂಬಕ್ಕೆ ತಲುಪಿಸುವ ಕೆಲಸ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ. ಹರೀಶ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲೇ ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತದ ವತಿಯಿಂದ ಭರಿಸುವುದಾಗಿ ಹೇಳಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ಕುಟುಂಬಸ್ಥರಿಗೆ ಅನುಕೂಲವಾಗಿದೆ

ಅಧಿಕಾರಿಗಳ ನಿಯೋಜನೆಯಿಂದ ಸಾಕಷ್ಟು‌ ಸಹಾಯವಾಗುತ್ತಿದೆ. ಚಿಕಿತ್ಸೆ ಪಡೆಯುತ್ತಿರುವವರ ವಿವರ, ಅವರ ಆರೋಗ್ಯ ಸ್ಥಿತಿಯ ಬಗ್ಗೆ ಸರ್ಕಾರಕ್ಕೆ, ಮಾಧ್ಯಮಗಳಿಗೆ ಹಾಗೂ ಕುಟುಂಬದ ಸದಸ್ಯರಿಗೆ ನೀಡಲು ಅನುಕೂಲವಾಗುತ್ತಿದೆ’ ಎಂದು ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ನೋಡೆಲ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ.ತಿರುಮಲೇಶ ಹೇಳಿದರು.

‘ಆಸ್ಪತ್ರೆಗಳು ಅಸ್ವಸ್ಥರಿಗೆ ಯಾವ ರೀತಿ ಚಿಕಿತ್ಸೆ ನೀಡುತ್ತಿವೆ ಎಂಬುದರ ಮೇಲೆ ನಿಗಾ ಇಡಲು ಸಾಧ್ಯವಾಗಿದೆ. ನಮ್ಮ ಉಪಸ್ಥಿತಿಯಿಂದ ಅವರ ಕುಟುಂಬದ ಸದಸ್ಯರಿಗೂ ಸ್ವಲ್ಪ ಧೈರ್ಯ ಬಂದಿದೆ. ಜಿಲ್ಲಾಡಳಿತ ನಮ್ಮ ಜೊತೆಗೆ ಇದೆ ಎಂಬ ಭಾವನೆಯೂ ಅವರಲ್ಲಿ ಬರುತ್ತದೆ’ ಎಂದು ವಿವರಿಸಿದರು.

ಆಸ್ಪತ್ರೆಗಳಿಗೆ ಸೌಲಭ್ಯ: ವರದಿಗೆ ಸೂಚನೆ

ಈ ಮಧ್ಯೆ, ತುರ್ತು ಸಂದರ್ಭಗಳಲ್ಲಿ ಅವಶ್ಯಕವಾಗಿರುವ ವೆಂಟಿಲೇಟರ್‌ ಹಾಗೂ ಇನ್ನಿತರ ಸೌಕರ್ಯಗಳುಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಇಲ್ಲ ಎಂದು ಕೇಳಿ ಬಂದಿರುವ ಆರೋಪಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು, ‘‌ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಸೌಲಭ್ಯಗಳ ಬಗ್ಗೆ ನಾವು ಅವಲೋಕನ ಮಾಡಬೇಕಾಗಿದೆ. ಮೊನ್ನೆ ನಡೆದಂತಹ ಪ್ರಕರಣಗಳ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಎರಡು ಮೂರು ವೆಂಟಿಲೇಟರ್‌ಗಳಿದ್ದರೂ ಏನೂ ಪ್ರಯೋಜನ ಆಗುವುದಿಲ್ಲ. ನಮ್ಮ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಕೊರತೆ ಇದೆ’ ಎಂದು ಹೇಳಿದರು.

‘ವೆಂಟಿಲೇಟರ್‌, ವೆಂಟಿಲೇಟರ್‌ಗಳು ಇರುವ ಆಂಬುಲೆನ್ಸ್‌ಗಳು ಸೇರಿದಂತೆನಮ್ಮ ಆಸ್ಪತ್ರೆಗಳಲ್ಲಿ ಏನೇನು ಸೌಲಭ್ಯಗಳ ಕೊರತೆ ಇದೆ ಎಂಬುದರ ಬಗ್ಗೆ ವರದಿ ಸಿದ್ಧಪಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ‌ ಅವರಿಗೆ ಸೂಚಿಸಲಾಗಿದೆ. ನಂತರ ಅದನ್ನು ಪರಿಶೀಲಿಸಿ ಆರೋಗ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

ವಿಷದ ತೀವ್ರತೆಗೆ ಅನುಗುಣವಾಗಿ ಸಾವು

ಮಾರಮ್ಮ ದೇವಾಲಯದಲ್ಲಿ ವಿತರಿಸಲಾದ ಪ್ರಸಾದದಲ್ಲಿ ಇದ್ದ ವಿಷದ ಪ್ರಮಾಣಕ್ಕೆ ಅನುಗುಣವಾಗಿ ಜನರು ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

‘ಪ್ರಸಾದ ತಯಾರಿಸಿದ್ದ ಪಾತ್ರೆಯಮೇಲ್ಭಾಗದಲ್ಲಿದ್ದ (ಮೇಲಿನ ಪದರ) ಪ್ರಸಾದವನ್ನು ಸೇವಿಸಿದವರು ತೀವ್ರವಾಗಿ ಅಸ್ವಸ್ಥರಾಗಿ ಅಂದೇ ಮೃತಪಟ್ಟಿದ್ದಾರೆ. ಅದರ ಕೆಳಗಿನ ಭಾಗದ (ನಂತರದ ಹಂತ) ಪ್ರಸಾದ ಸೇವಿಸಿದವರು ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ. ಪಾತ್ರೆಯ ತಳಭಾಗದಲ್ಲಿದ್ದ ಪ್ರಸಾದ ಸೇವಿಸಿದರು ಅಸ್ವಸ್ಥಗೊಂಡಿದ್ದರೂ, ಅಪಾಯದಿಂದ ಪಾರಾಗಿದ್ದಾರೆ’ ಎಂದು ಉನ್ನತ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

*ಮೈಸೂರಿನ ಜಿಲ್ಲಾಡಳಿತದಿಂದ ನಮಗೆ ಸಂಪೂರ್ಣ ಸಹಕಾರ ಸಿಕ್ಕಿದೆ. ಖಾಸಗಿ ಆಸ್ಪತ್ರೆಗಳು ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಿವೆ

–ಡಾ.ಕೆ. ಹರೀಶ್‌ ಕುಮಾರ್‌, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.