ADVERTISEMENT

ವೈಯಕ್ತಿಕವಾಗಿ ಅಪಮಾನ ಮಾಡಿಲ್ಲ: ಸುಮಲತಾ ಉತ್ತರ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 19:30 IST
Last Updated 30 ಮಾರ್ಚ್ 2019, 19:30 IST
   

ಮಂಡ್ಯ: ಪಕ್ಷೇತರ ಅಭ್ಯರ್ಥಿಯ ಹೇಳಿಕೆ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುಶ್ರೀ ಶುಕ್ರವಾರ ಕಾರಣ ಕೇಳಿ ನೀಡಿದ್ದ ನೋಟಿಸ್‌ಗೆ ಶನಿವಾರ ಸುಮಲತಾ ಉತ್ತರ ನೀಡಿದ್ದಾರೆ. ‘ನಾವು ನೀಡಿರುವ ಹೇಳಿಕೆಗಳೆಲ್ಲವೂ ವಾಸ್ತವಾಂಶದಿಂದ ಕೂಡಿವೆ’ ಎಂದು ತಿಳಿಸಿದ್ದಾರೆ.

‘ಅಧಿಕಾರಿಗಳನ್ನು ವೈಯಕ್ತಿಕವಾಗಿ ಅಪಮಾನಗೊಳಿಸುವ ಉದ್ದೇಶದಿಂದ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಮೊದಲಿನಿಂದಲೂ ನೀವು ಹಾಗೂ ನಿಮ್ಮ ನಿಬ್ಬಂದಿ ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿ ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ತಿಳಿಸಿದ್ದೇನೆ. ಈಗಾಗಲೇ ಈ ಕುರಿತು ನಮ್ಮ ಏಜೆಂಟರು ಲಿಖಿತ ರೂಪದಲ್ಲಿ ದೂರು ನೀಡಿದ್ದಾರೆ. ನಿಖಿಲ್‌ ಉಮೇದುವಾರಿಕೆ ಸಿಂಧುಗೊಳಿಸುವಾಗ ಸಕಾಲದಲ್ಲಿ ನಮ್ಮ ಏಜೆಂಟರು ಆಕ್ಷೇಪಣೆ ಸಲ್ಲಿಸಿದ್ದಾರೆ. ಆದರೆ, ತಕರಾರಿನ ಕುರಿತು ಯಾವುದೇ ಕ್ರಮ ಕೈಗೊಳ್ಳದೆ, ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೊ ಮಾಡದೆ ಲೋಪ ಎಸಗಿದ್ದೀರಿ’ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.

‘ನೀವು ಮಾಡಿರುವ ತಪ್ಪನ್ನು ಮರೆಮಾಚುವ ದೃಷ್ಟಿಯಿಂದ, ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ನೋಟಿಸ್‌ ನೀಡಿದ್ದೀರಿ. ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ನಾನು ಹೇಳಿಕೆ ನೀಡುವುದು ನನ್ನ ಹಕ್ಕು. ನಾಮಪತ್ರ ಪರಿಶೀಲನೆ ವೇಳೆ ನೀವು ಹಾಗೂ ನಿಮ್ಮ ಸಿಬ್ಬಂದಿ ನಡೆದುಕೊಂಡುವ ರೀತಿಯಿಂದ ಆ ರೀತಿ ಹೇಳಿಕೆ ನೀಡಿದ್ದೇನೆ. ಭಾರತೀಯ ದಂಡ ಸಂಹಿತೆ ಕಲಂ 189ರ ಅಡಿ ಕ್ರಮ ಕೈಗೊಳ್ಳುವ ಅಪರಾಧ ಮಾಡಿಲ್ಲ. ಆ ಕುರಿತು ಯಾವುದೇ ಸಕಾರಣ ಇಲ್ಲ. ನೋಟಿಸ್‌ ಕೈಬಿಟ್ಟು ನ್ಯಾಯ ಪರಿಪಾಲನೆ ಮಾಡಬೇಕು’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.