ADVERTISEMENT

ದೈವಿಕ ಪ್ರೇಮ ಸಿದ್ಧಾಂತ ಪರಿಚಯಿಸಿದವರು ಸೂಫಿಗಳು: ರಂಜಾನ್ ದರ್ಗಾ

ಕರ್ನಾಟಕ ದರ್ಶನ: ಅಧ್ಯಾತ್ಮ ಪರಂಪರೆ ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 15:58 IST
Last Updated 17 ನವೆಂಬರ್ 2018, 15:58 IST
ರಂಜಾನ್‌ ದರ್ಗಾ
ರಂಜಾನ್‌ ದರ್ಗಾ   

ಮೂಡುಬಿದಿರೆ: ಭಾರತೀಯ ಸೂಫಿ ಪರಂಪರೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಸೂಫಿಗಳು ಯಜಮಾನ ಸಂಸ್ಕೃತಿ, ವರ್ಣ ವ್ಯವಸ್ಥೆ, ಜಾತೀಯತೆ, ಅಜ್ಞಾನ, ಅಂಧಕಾರವನ್ನು ದೂರವಿರಿಸಿ, ತಮ್ಮ ಪ್ರೇಮತತ್ವದ ಮೂಲಕ ಜಗತ್ತನ್ನು ಪ್ರೀತಿಸಲು ತೋರಿಸಿಕೊಟ್ಟವರು ಎಂದು ಸಾಹಿತಿ ರಂಜಾನ್ ದರ್ಗಾ ಹೇಳಿದರು.

ಆಳ್ವಾಸ್ ನುಡಿಸಿರಿಯ ಎರಡನೇ ದಿನವಾದ ಶನಿವಾರ ರತ್ನಾಕರರ್ಣಿ ವೇದಿಕೆಯಲ್ಲಿ ಆಯೋಜಿಸಿದ್ದ ‘ಕರ್ನಾಟಕ ದರ್ಶನ: ಅಧ್ಯಾತ್ಮ ಪರಂಪರೆ' ವಿಷಯದ ಬಗ್ಗೆ ವಿಶೇಷೋಪನ್ಯಾಸ ನೀಡಿದ ಅವರು, ‘ಸೂಫೀ ಪಂಥ’ ಕುರಿತು ಮಾತನಾಡಿದರು.

‘ಭಕ್ತಿ ಪಂಥ, ಬೌದ್ಧ ಪಂಥ, ಬೌದ್ಧ, ಸಿದ್ಧ ಪಂಥ, ಅವಧೂತ ಪಂಥಗಳಿಂದ ಪ್ರಭಾವಿತರಾದ ಸೂಫಿಗಳ ಸಿದ್ಧಾಂತದ ತತ್ವಗಳು, ನಮ್ಮ ಮಣ್ಣಿನ ಮೇಲೆ ಪ್ರಭಾವ ಬೀರಿವೆ' ಎಂದರು.

ADVERTISEMENT

ಸೂಫಿಸಮ್‌ಗೆ ಪ್ರತ್ಯೇಕ ಆಕಾರವಿಲ್ಲ ಎಂದ ಅವರು, ಖಾದಿರಿಯ್ಯ, ಚಿಸ್ತಿಯ್ಯ, ಸುಹುರವದರಯ್ಯ, ರಿಫಾಯಿಯ್ಯ ಎಂಬ ನಾಲ್ಕು ಪಂಥಗಳು ಬಹಳ ಪ್ರಮುಖವಾದುದು. ಅಲ್ಲದೇ ಅವುಗಳು ಶರೀಅತ್, ಹಕೇಕತ್, ಮಅರಿಫತ್, ತ್ವರೀಖತ್ ಎಂಬ ನಾಲ್ಕು ಆಧಾರ ಸ್ತಂಭಗಳ ಮೇಲೆ ನಿರ್ಮಾಣಗೊಂಡಿವೆ ಎಂದು ಸೂಫಿ ತತ್ವಗಳ ಬಗ್ಗೆ ವಿವರಿಸಿದರು.

‘ಬಂದೇ ನವಾಜ್, ಕೊಡಕ್ಕಲ್ ಬಸವಣ್ಣ, ಯೂಸುಫ್ ಆದಿಲ್ ಖಾನ್‌ರಂತಹ ಆಧ್ಯಾತ್ಮಿಕ ತತ್ವ ಚಿಂತಕರು ಇದೇ ಹಾದಿಯನ್ನು ತುಳಿದರು. ದ್ವೈತ ಸಿದ್ದಾಂತವು ಬರೀ ತೋರಿಕೆಯಾಗಿದ್ದು, ಜಗತ್ತು ಅದ್ವೈತದಿಂದ ಉದಯಿಸಿದೆ ಎಂದು ಅವರು ತೋರಿಸಿಕೊಟ್ಟವರು' ಎಂದು ತಿಳಿಸಿದರು.

ಸೂಫಿ ಪರಂಪರೆಯಲ್ಲಿ ಶಾಂತಿ, ಪ್ರೀತಿ, ಮಾನವೀಯತೆ ಸಿದ್ಧಾಂತದ ಮೇಲಿದ್ದರೆ, ಶರಣರು ದಯೆಯೇ ಧರ್ಮದ ಮೂಲ ಎಂದು ನಂಬಿದವರು. ಸೂಫಿಗಳು ಯಜಮಾನತೆ, ಅಸ್ಪೃಶ್ಯತೆ, ಬಡತನದಂತಹ ಸಮಾಜದಲ್ಲಿದ್ದ ಅಸಮಾನತೆಯ ವಿರುದ್ಧ ದೊಡ್ಡ ರೀತಿಯಲ್ಲಿ ಸಂಘರ್ಷ ನಡೆಸಿದವರು ಎಂದು ತಿಳಿಸಿದರು.

ಜಗತ್ತಿನಲ್ಲಿಂದು ಹಿಂದೂಗಳನ್ನು ಕೋಮುವಾದಿಗಳೆಂದೂ, ಇಸ್ಲಾಮನ್ನು ಮೂಲಭೂತವಾದಿಗಳೆಂದೂ ಪ್ರತ್ಯೇಕಿಸಿ ಕಾಣಲಾಗುತ್ತಿದೆ. ಅತ್ಯಾಚಾರ, ಅನಾಚಾರಗಳು ನಿರಂತರವಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಈ ಮಣ್ಣಿನಲ್ಲಿ ಏಕತೆಯ ಬೀಜವನ್ನು ಬಿತ್ತಿ ಮರೆಯಾದ ಸೂಫಿಗಳ ತತ್ವಗಳನ್ನು ಪಾಲಿಸಿ ಬದುಕು ರೂಪಿಸಬೇಕು ಎಂದು ಸಲಹೆ ನೀಡಿದರು.

ಸಮ್ಮೇಳನದ ಅಧ್ಯಕ್ಷೆ ಡಾ. ಮಲ್ಲಿಕಾ ಎಸ್.ಘಂಟಿ, ನುಡಿಸಿರಿಯ ಸ್ವಾಗತ ಸಮಿತಿಯ ಉಪಾಧ್ಯಕ್ಷ ಡಾ.ನಾ.ದಾಮೋದರ ಶೆಟ್ಟಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.