ADVERTISEMENT

ಪಿಡಬ್ಲ್ಯೂಡಿಗೆ ₹1,977 ಕೋಟಿ ಹೆಚ್ಚುವರಿ ಹಂಚಿಕೆ

ಧಾರವಾಡದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹6 ಕೋಟಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 20:28 IST
Last Updated 13 ಡಿಸೆಂಬರ್ 2018, 20:28 IST
   

ಬೆಳಗಾವಿ: ಲೋಕೋಪಯೋಗಿ ಇಲಾಖೆಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಬಾಕಿ ಬಿಲ್‌ಗಳ ಪಾವತಿಗಾಗಿ ಮೊದಲ ಕಂತಿನ ಪೂರಕ ಅಂದಾಜುಪಟ್ಟಿಯಲ್ಲಿ ₹1977 ಕೋಟಿ ಹೆಚ್ಚುವರಿಯಾಗಿ ನೀಡಲಾಗಿದೆ.

ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳಿನಲ್ಲೇ ₹6980 ಕೋಟಿ ಮೊತ್ತದ ಮೊದಲ ಕಂತಿನ ಪೂರಕ ಅಂದಾಜನ್ನು ಕೃಷ್ಣ ಬೈರೇಗೌಡ ಅವರು ವಿಧಾನಸಭೆಯಲ್ಲಿ ಗುರುವಾರ ಮಂಡಿಸಿದರು.

ಬಾಕಿ ಬಿಲ್‌ಗಳ ಪಾವತಿಗಾಗಿ ನೇರವಾಗಿ ಎಚ್‌.ಡಿ.ರೇವಣ್ಣ ಸಚಿವರಾಗಿರುವ ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ. ಈ ಪೈಕಿ ₹36 ಕೋಟಿಯನ್ನು ಹಾಸನ ನಗರದ ಚನ್ನಪಟ್ಟಣ ಕೆರೆ ಅಭಿವೃದ್ಧಿಗಾಗಿ ಕೆಆರ್‌ಡಿಸಿಎಲ್‌ಗೆ ನೀಡಲಾಗಿದೆ.

ADVERTISEMENT

ಶೃಂಗೇರಿ ಮಠಕ್ಕೆ ₹15 ಕೋಟಿ: ಜೆಡಿಎಸ್‌ ಪ್ರಮುಖರಾದ ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಎಚ್‌.ಡಿ. ರೇವಣ್ಣ ಅವರು ಗಾಢವಾಗಿ ನಂಬುವ ಶೃಂಗೇರಿ ಮಠಕ್ಕೆ ₹15 ಕೋಟಿ ನೀಡಲಾಗಿದೆ.

ಬೆಂಗಳೂರಿನಲ್ಲಿರುವ ಶಂಕರ ಮಠದ ಅಭಿವೃದ್ಧಿ ಕಾಮಗಾರಿಗಳಿಗೆ ₹4.95 ಕೋಟಿ ಹಾಗೂ ರಂಗದೊರೈ ಆಸ್ಪತ್ರೆಗೆ ₹10 ಕೋಟಿ ಕೊಡಲಾಗಿದೆ.

ನಾಗಮಂಗಲದಲ್ಲಿರುವ ಆದಿಚುಂಚನಗಿರಿ ಮಠದ ಆವರಣದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪಿಸಲು ₹5 ಕೋಟಿ ನೀಡಲಾಗಿದೆ.

ಶಾಸಕರಿಗೆ ನೆರವು: ಕಾರುಗಳು ಇಲ್ಲದ ಶಾಸಕರಿಗೆ ಹೊಸ ವಾಹನ ಖರೀದಿಗಾಗಿ ಮುಂಗಡ ಹಣ ನೀಡಲು ₹3.75 ಕೋಟಿ ಒದಗಿಸಲಾಗಿದೆ.

ದಸರಾಕ್ಕೆ ₹12 ಕೋಟಿ: ಮೈಸೂರು ದಸರಾಕ್ಕೆ ₹12 ಕೋಟಿ ನೀಡಲಾಗಿದೆ. ಧಾರವಾಡದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹6 ಕೋಟಿ ಒದಗಿಸಲಾಗಿದೆ. ಬೆಳಗಾವಿ ವಿಧಾನಮಂಡಲ ಅಧಿವೇಶನಕ್ಕೆ ಒಟ್ಟು ₹6.5 ಕೋಟಿ ನೀಡಲಾಗಿದೆ.

ಚುನಾವಣೆಗೆ ₹39 ಕೋಟಿ ವ್ಯಯ

ಲೋಕಸಭೆ ಹಾಗೂ ವಿಧಾನಸಭೆಯ ಒಟ್ಟು ಐದು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಗೆ ₹39 ಕೋಟಿ ವ್ಯಯವಾಗಿದೆ.

ವಿಧಾನಸಭೆಗೆ ಆಯ್ಕೆಯಾದ ಬಿ.ಎಸ್‌. ಯಡಿಯೂರಪ್ಪ, ಬಿ. ಶ್ರೀರಾಮುಲು ಹಾಗೂ ಸಿ.ಎಸ್‌. ಪುಟ್ಟರಾಜು ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಚನ್ನಪಟ್ಟಣ ಉಳಿಸಿಕೊಂಡು ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಸಿದ್ದು ನ್ಯಾಮಗೌಡ ನಿಧನದಿಂದ ಜಮಖಂಡಿ ಕ್ಷೇತ್ರ ತೆರವಾಗಿತ್ತು. ಲೋಕಸಭೆಯ ಮೂರು ಕ್ಷೇತ್ರಗಳಿಗೆ ₹36 ಕೋಟಿ ಹಾಗೂ ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ₹3 ಕೋಟಿ ಖರ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.