ADVERTISEMENT

ತಾರತಮ್ಯ ತೊಲಗಲಿ: ಸಿಜೆಐ ಚಂದ್ರಚೂಡ್

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿವಂಗತ ಇಎಸ್‌ವಿ ಜನ್ಮಶತಾಬ್ದಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 16:19 IST
Last Updated 17 ಡಿಸೆಂಬರ್ 2023, 16:19 IST
ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ (ಮಧ್ಯದಲ್ಲಿರುವವರು) ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಜೊತೆ ಗಹನ ಸಂಭಾಷಣೆ ನಡೆಸಿದರು. ಎನ್‌ಎಲ್‌ಎಸ್‌ಐಯು ಉಪ ಕುಲಪತಿ ಸುಧೀರ್‌ ಕೃಷ್ಣಸ್ವಾಮಿ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ
ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ (ಮಧ್ಯದಲ್ಲಿರುವವರು) ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಜೊತೆ ಗಹನ ಸಂಭಾಷಣೆ ನಡೆಸಿದರು. ಎನ್‌ಎಲ್‌ಎಸ್‌ಐಯು ಉಪ ಕುಲಪತಿ ಸುಧೀರ್‌ ಕೃಷ್ಣಸ್ವಾಮಿ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಾಂವಿಧಾನಿಕ ಆಡಳಿತವು ಸಮಾಜವನ್ನು ಸಾರ್ವಜನಿಕ ಮತ್ತು ಖಾಸಗಿ ಎಂಬ ಅವಳಿತನ ಮೀರಿ ತನ್ನದೇ ಆದ ವಿವೇಚಾನಾತ್ಮಕ ದೃಷ್ಟಿಯಿಂದ ನೋಡುವಂತಿರಬೇಕು’ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರು, ‘ನಮ್ಮಲ್ಲಿ ಮುಕ್ತ ಮನಸ್ಸು ಇದ್ದಾಗ ಮಾತ್ರವೇ ನ್ಯಾಯದ ತಾರ್ಕಿಕ ಅಂತ್ಯಗಳನ್ನು ಕಾಣಬಹುದು’ ಎಂದರು.

ಸುಪ್ರೀಂ ಕೋರ್ಟ್‌ನ 19ನೇ ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾದ ಮೊದಲ ಕನ್ನಡಿಗರು ಎಂಬ ಹೆಗ್ಗಳಿಕೆ ಹೊಂದಿರುವ ಇಂಗಳಗುಪ್ಪೆ ಸೀತಾರಾಮಯ್ಯ ವೆಂಕಟರಾಮಯ್ಯ ಅವರ ಜನ್ಮಶತಾಬ್ದಿ ಅಂಗವಾಗಿ; ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಸಹಯೋಗದಲ್ಲಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಸ್ಮಾರಕ ಉಪನ್ಯಾಸ ನೀಡಿದರು. 

‘ದಿವಂಗತ ಇ.ಎಸ್.ವೆಂಕಟರಾಮಯ್ಯ ಶಿಕ್ಷಕರು, ಶಿಕ್ಷಣವೇತ್ತರೂ ಆಗಿದ್ದರು. ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ನ್ಯಾಯಾಂಗ ಮತ್ತು ಮಾಧ್ಯಮ ಸ್ವಾತಂತ್ರ್ಯ ಮತ್ತು ನಿರ್ಭೀತ ಪತ್ರಿಕೋದ್ಯಮವನ್ನು ಎತ್ತಿ ಹಿಡಿದಿದ್ದ ಸರ್ವೋತ್ತಮರೆನಿಸಿದ್ದರು. ಇದನ್ನು ಅವರ ಮಹತ್ವದ ತೀರ್ಪುಗಳು ಮತ್ತು ಅವರ ಪ್ರಕಟಿತ ಕೃತಿಗಳಲ್ಲಿ ಕಾಣಬಹುದಾಗಿದೆ. ಪರಿಸರದ ಕಾಳಜಿ ಮತ್ತು ಭವಿಷ್ಯತ್ತಿನ ಭಾರತದ ಬಗ್ಗೆ ಅನನ್ಯ ಒಳನೋಟ ಹೊಂದಿದ್ದರು. ಶೈಕ್ಷಣಿಕ ಪಾಂಡಿತ್ಯ ಮತ್ತು ನ್ಯಾಯಾಂಗದ ಮಿಳಿತ ಅವರಲ್ಲಿ ಸದಾ ಎದ್ದು ಕಾಣುತ್ತಿತ್ತು’ ಎಂದರು.

ADVERTISEMENT

‘ರಾಜ್ಯದ ಸಾಂವಿಧಾನಿಕ ಅಗತ್ಯಗಳು–ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿನ ತಾರತಮ್ಯ’ ಎಂಬ ಅಂಶಗಳನ್ನು ಕೇಂದ್ರವಾಗಿಸಿಕೊಂಡು ಮಾತನಾಡಿದ ಅವರು, ‘ಸಾರ್ವಜನಿಕ ಮತ್ತು ಖಾಸಗಿತನ ಎಂಬುದರ ದ್ವಂದ್ವವು ಹಲವಾರು ವರ್ಷಗಳಿಂದ ನಮ್ಮ ಕಾನೂನುಗಳು ಸ್ತ್ರೀವಾದಿ ಮತ್ತು ಆರ್ಥಿಕ ವಿಮರ್ಶೆಯ ಆಧಾರಗಳಾಗಿವೆ. ಇವತ್ತು ತಂತ್ರಜ್ಞಾನ ಎಂಬುದು ಪ್ರಾದೇಶಿಕ ನಿರ್ಬಂಧಗಳನ್ನು ಕೊನೆಗೊಳಿಸಿದೆ. ಇವುಗಳ ಮಧ್ಯೆಯೇ, ನಮ್ಮ ಕಾನೂನುಗಳು ಸಾರ್ವಜನಿಕ ಮತ್ತು ಖಾಸಗಿತನದ ಚೌಕಟ್ಟುಗಳಲ್ಲಿರುವ ಲಿಂಗ, ಜಾತಿ, ಅಂಗವೈಕಲ್ಯದ ತಾರತಮ್ಯ ನಿವಾರಿಸಲು ಶ್ರಮಿಸುತ್ತಿವೆ’ ಎಂದರು.

‘ಗಂಡು ಅಥವಾ ಹೆಣ್ಣು ಮಗುವಿಗೆ ಶಿಕ್ಷಣ ನೀಡುವ ವಿಷಯದಲ್ಲಿ ಆರ್ಥಿಕ ಪ್ರಶ್ನೆ ಎದುರಾದಾಗ ಕುಟುಂಬವು ಗಂಡು ಮಗುವಿಗೆ ಆಯ್ಕೆಯ ಆದ್ಯತೆ ನೀಡುವುದನ್ನು ಹೆಚ್ಚಾಗಿ ನೋಡುತ್ತೇವೆ. ಸಾಮಾನ್ಯವಾಗಿ ಸಾಂವಿಧಾನಿಕ ಕಾನೂನಿನ ತತ್ವಗಳನ್ನು ಮನೆಯ ಮಿತಿಯೊಳಗೆ ಪರಿಚಯಿಸುವಾಗ ವಿವಾಹ ಎಂಬ ಸಂಸ್ಥೆ ದುರ್ಬಲಗೊಳ್ಳುವ ಅಪಾಯವಿದೆ. ಹೀಗಾಗಿ, ಸಮಾನತೆಯ ಪ್ರಜಾಪ್ರಭುತ್ವ ಎಂಬುದು ಸಾರ್ವಜನಿಕ ಸ್ಥಳಕ್ಕೆ ಮಾತ್ರವೇ ಸೀಮಿತವಾಗದೆ ಕುಟುಂಬದ ಒಳಗೂ ಗಟ್ಟಿಯಾಗಿ ಧ್ವನಿಸಬೇಕು’ ಎಂದರು. 

ಆಂಧ್ರಪ್ರದೇಶದ ರಾಜ್ಯಪಾಲರೂ ಆದ ನ್ಯಾಯಮೂರ್ತಿ ಎಸ್‌. ನಜೀರ್ ಅಹ್ಮದ್‌, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಹೃಷಿಕೇಶ ರಾಯ್‌ ಮತ್ತು ರಾಜೇಶ್‌ ಬಿಂದಾಲ್‌, ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ, ಹಿಮಾಚಲ ಪ್ರದೇಶದ ಮುಖ್ಯ ನ್ಯಾಯಮೂರ್ತಿ ಎಂ.ಎಸ್‌. ರಾಮಚಂದ್ರ ರಾವ್‌ ಮತ್ತು ಕಲ್ಕತ್ತಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌.ಶಿವಜ್ಞಾನಂ, ಕರ್ನಾಟಕ ಹೈಕೋರ್ಟ್‌ನ ಎಲ್ಲ ಹಾಲಿ ನ್ಯಾಯಮೂರ್ತಿಗಳು, ಅನೇಕ ನಿವೃತ್ತರು, ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ ಶೆಟ್ಟಿ, ಬೆಂಗಳೂರು ವಕೀಲರ ಸಂಘ, ರಾಜ್ಯ ವಕೀಲರ ಪರಿಷತ್‌ ಪದಾಧಿಕಾರಿಗಳು, ಹಿರಿಯ ವಕೀಲರು, ವಿವಿಧ ಜಿಲ್ಲೆಗಳ ಮತ್ತು ವಿಚಾರಣಾ ನ್ಯಾಯಾಲಯಗಳ ನ್ಯಾಯಾಯಾಧೀಶರು, ಕಾನೂನು ವಿದ್ಯಾರ್ಥಿಗಳು ‘ಜ್ಞಾನಜ್ಯೋತಿ’ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದರು.

‘ಅವರ ಬೆನ್ನಿಗೆ ತಾಯಿ ಬಂಡೆಯಂತೆ ನಿಂತಿದ್ದರು’

ವೆಂಕಟರಾಮಯ್ಯ ಅವರ ಪುತ್ರಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮಾತನಾಡಿ ‘ಕಾಯಕವೇ ಕೈಲಾಸ ಎಂದು ನಂಬಿದ್ದ ನ್ಯಾಯಮೂರ್ತಿ ಇ.ಎಸ್. ವೆಂಕಟರಾಮಯ್ಯ ಬದುಕಿನುದ್ದಕ್ಕೂ ತಮ್ಮ ಕರ್ತವ್ಯಕ್ಕೆ ಬದ್ಧರಾಗಿದ್ದರು. ನೇರ ನಡೆ ನುಡಿ ಮತ್ತು ವಾಸ್ತವದ ಅರಿವು ಹೊಂದಿದ್ದರು. ಅವರ ಏಳ್ಗೆಯಲ್ಲಿ ನಮ್ಮ ತಾಯಿ ಅವರ ಬೆನ್ನಿಗೆ ಬಂಡೆಯಂತೆ ನಿಂತಿದ್ದರು’ ಎಂದರು. ‘ಸಾಮಾಜಿಕವಾಗಿ ಅವರು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ತಮ್ಮ ಊರು ಹಳ್ಳಿಯನ್ನು ಸದಾ ಸ್ಮರಿಸಿಕೊಳ್ಳುತ್ತಿದ್ದರು. ಮಂಡ್ಯದ ಮಣ್ಣಿನ ಬಗ್ಗೆ ಅವರಿಗೆ ವಿಶೇಷ ಸೆಳೆತವಿತ್ತು. ತಮ್ಮ ಕೊನೆಯ ದಿನಗಳಲ್ಲಿ ಮಾತನಾಡುವ ಶಕ್ತಿ ಕಳೆದುಕೊಂಡಾಗ ನಾನು ಭಾರತಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಕೈಯಲ್ಲಿ ಬರೆದು ತೋರಿಸುತ್ತಿದ್ದರು’ ಎಂದು ನೆನಪುಗಳ ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.