ADVERTISEMENT

ಬೆಂಗಳೂರಲ್ಲಿರುವ ಅನ್ಯ ರಾಜ್ಯಗಳ ಕಾರ್ಮಿಕರ ಹಿತ ಕಾಯಲು ‌ಬದ್ಧ: ಸುರೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 2 ಮೇ 2020, 6:35 IST
Last Updated 2 ಮೇ 2020, 6:35 IST
ಸುರೇಶ್‌ ಕುಮಾರ್‌
ಸುರೇಶ್‌ ಕುಮಾರ್‌   

ಬೆಂಗಳೂರು:ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಕೆಲಸವಿಲ್ಲದೇ ಅತಂತ್ರರಾಗಿರುವ ಒಂದು ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಇಂದು ಸಚಿವ ಸುರೇಶ್ ಕುಮಾರ್ ಭೇಟಿ ಮಾಡಿದರು.

ಯಶವಂತಪುರದ ಎಪಿಎಂಸಿ ಹಾಗೂ ಮಾಗಡಿ‌ ರಸ್ತೆಯ ಕಾವೇರಿಪುರ ಗುಡ್ಡದಲ್ಲಿ‌ ಬಹುವಸತಿ ಸಮುಚ್ಛಯ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರನ್ನು ಭೇಟಿ ಮಾಡಿದ ಸಚಿವರು ಇಷ್ಟರಲ್ಲಿಯೇ ಬೆಂಗಳೂರು ನಗರದಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲಾ ಬೃಹತ್ ನಿರ್ಮಾಣ ಚಟುವಟಿಕೆಗಳು ಆರಂಭವಾಗುವುದಿದ್ದು, ಯಾವುದೇ ಆತಂಕಕ್ಕೊಳಗಾಗದೇ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಆಗ್ರಹಿಸಿದರು.

ಸರ್ಕಾರವು ತಮ್ಮೆಲ್ಲರ ಹಿತ ಕಾಯಲು ಸದಾ ಬದ್ಧರಾಗಿರುವುದಾಗಿ ಹೇಳಿದ ಸಚಿವ ಸುರೇಶ್ ಕುಮಾರ್, ಕಟ್ಟಡ ಕಾರ್ಮಿಕರ ಮಾಲೀಕರೊಂದಿಗೆ ಸ್ಥಳದಲ್ಲಿಯೇ ಮಾತನಾಡಿ ಎಲ್ಲಾ ಕಾರ್ಮಿಕರಿಗೆ ನೀಡಬೇಕಿರುವ ಬಾಕಿ‌ಯನ್ನ ಕೂಡಲೇ ನೀಡಲು ಸೂಚಿಸಿದರಲ್ಲದೇ, ತಕ್ಷಣದಿಂದಲೇ ಕಾಮಗಾರಿಗಳು ಆರಂಭಿಸುವಂತೆ ಎಲ್ಲ ಪೂರ್ವಭಾವಿ ಕ್ರಮಗಳಿಗೆ ಆಗ್ರಹಿಸಿದರು.

ADVERTISEMENT

ಕಾರ್ಮಿಕರಿಗೆ ಆಹಾರ ಧಾನ್ಯಗಳನ್ನು ವಿತರಿಸಿ ಮಾತನಾಡಿದ ಸಚಿವರು, ಬೆಂಗಳೂರು ನಗರದ ಹಲವಾರು ಸ್ಥಳಗಳಲ್ಲಿ ಹೀಗೆ ಹಲವು ದಿನಗಳಿಂದ ನೆಲೆಸಿರುವ, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳ ಸಾವಿರಾರು ಕೂಲಿ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಆತಂಕದಿಂದ ಸಿದ್ಧರಾಗುತ್ತಿದ್ದು, ಇವರುಗಳು ಇಲ್ಲಿಯೇ ನೆಲೆಸುವಂತೆ ಸರ್ಕಾರದ ಪರವಾಗಿ ತಾವು ಖುದ್ದಾಗಿ ತೆರಳಿ ಮನವಿ ಮಾಡುತ್ತಿದ್ದು, ಇವರುಗಳಿಗೆ ನಿರಂತರವಾದ ಕೆಲಸ ದೊರಕಿಸುವಲ್ಲಿ ಕ್ರಿಯಾ ಯೋಜನೆಯನ್ನು ರೂಪಿಸುವ ಬಗ್ಗೆ ತಾವು ಇಂದು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದರು.

ಸಚಿವರೊಂದಿಗೆ ಹಿರಿಯ ಐ ಎ ಎಸ್ ಅಧಿಕಾರಿ ಕುಮಾರ್ ನಾಯಕ್, ಸೇರಿದಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.