ADVERTISEMENT

ಲಂಚ ಪಡೆದ ಮೂವರು ಅಧಿಕಾರಿಗಳು ಅಮಾನತು: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 19:18 IST
Last Updated 29 ಆಗಸ್ಟ್ 2020, 19:18 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಬೆಂಗಳೂರು: ಲಂಚ ಪಡೆದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿರುವ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ
ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಭೂ ಒಡೆತನ ಯೋಜನೆಯಲ್ಲಿ ಲಂಚ ಪಡೆದ ಆರೋಪದಡಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಎಸ್.ಎಸ್. ನಾಗೇಶ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಮಂಜುಳಾ ಮತ್ತು ಕಚೇರಿ ಅಧೀಕ್ಷಕ ಪಿ.ಡಿ.ಸುಬ್ಬಯ್ಯ ಅವರನ್ನು ಎಸಿಬಿ ಬಂಧಿಸಿದೆ.

ಕರ್ನಾಟಕ ನಾಗರಿಕ ಸೇವಾ ನಿಯಮದನ್ವಯ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದ್ದು, ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತು ಮಾಡಲಾಗಿದೆ. ಅಮಾನತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರಸ್ಥಾನ ಬಿಡದಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಭೂ ಒಡೆತನದ ಯೋಜನೆಯಡಿ ಸಂಗ್ರಹಿಸಿದ್ದ ₹22 ಲಕ್ಷ ಲಂಚದ ಮೊತ್ತವನ್ನು ಅಧಿಕಾರಿಗಳು ಹಂಚಿಕೊಳ್ಳುತ್ತಿದ್ದಾಗಲೇ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಬಳಿಕ, ಈ ಅಧಿಕಾರಿಗಳ ಮನೆಗಳಲ್ಲಿ ಶೋಧ ನಡೆಸಿದಾಗ, ₹60 ಲಕ್ಷ ನಗದು ಸಿಕ್ಕಿತ್ತು. ಮೂವರು ಸೇರಿ ₹82 ಲಕ್ಷವನ್ನು ಲಂಚದ ರೂಪದಲ್ಲಿ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಲಂಚಪಡೆದಜೆಸ್ಕಾಂಎಇಇಗೆ ಜೈಲು ಶಿಕ್ಷೆ

ಕಲಬುರ್ಗಿ: ವಿದ್ಯುತ್ ಮೀಟರ್‌ಗಳಿಗೆ ಸೀಲ್ ಹಾಕಿ ಬಾಕ್ಸ್‌ಗಳನ್ನು ಕೂಡಿಸಲು ಮೂವರು ವಿದ್ಯುತ್ ಗ್ರಾಹಕರಿಂದ ₹ 1 ಲಕ್ಷ ಲಂಚ ಪಡೆದ, ಚಿಂಚೋಳಿ ಜೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪರಮೇಶ್ವರ ಬಿರಾದಾರ ಅವರಿಗೆ ಜಿಲ್ಲಾ ಪ್ರಧಾನ ಹಾಗೂ ವಿಶೇಷ ಸೆಷನ್ಸ್ ನ್ಯಾಯಾಲಯವು ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.

ಚಿಂಚೋಳಿ ತಾಲ್ಲೂಕಿನ ಮಿರಿಯಾಣದಲ್ಲಿ ಕಲ್ಲುಗಣಿ ವ್ಯಾಪಾರ ಮಾಡುತ್ತಿದ್ದ ನವೀನಕುಮಾರ್ ಪಾಟೀಲ ಅವರ ಹೆಸರಿನಲ್ಲಿ ಮೂರು ಮೀಟರ್, ಎಂ. ಬಾಬುರಾವ್‌ ಹಾಗೂ ವೆಂಕಟೇಶ ಅವರ ಹೆಸರಿನಲ್ಲಿ ತಲಾ ಒಂದೊಂದು ಮೀಟರ್‌ಗೆ ಸೀಲ್ ಹಾಕಿ ಕೊಡಲು ಮೀಟರ್‌ಗೆ ತಲಾ ₹ 30 ಸಾವಿರದಂತೆ ಒಟ್ಟು ₹ 1.5 ಲಕ್ಷ ಲಂಚ ಕೊಡುವಂತೆ 2015ರಲ್ಲಿ ಒತ್ತಾಯಿಸಿದ್ದರು.

ಈ ಬಗ್ಗೆ ನವೀನಕುಮಾರ ಪಾಟೀಲ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಜೇಮ್ಸ್ ಮೆನೇಜಸ್ ಅವರು 2015ರ ಫೆ. 5ರಂದು ಮನೆಯ ಸ್ನಾನದ ಕೋಣೆಯ ಅಟ್ಟದ ಮೇಲೆ ಇಟ್ಟಿದ್ದ ₹ 1.40 ಲಕ್ಷವನ್ನು ಜಪ್ತಿ ಮಾಡಿದ್ದರು. 2016ರ ಡಿ. 3ರಂದು ಆರೋಪಿಯ ವಿರುದ್ಧ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಆರ್.ರಾಘವೇಂದ್ರ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಈ ಕುರಿತು ವಾದ–ವಿವಾದ ಆಲಿಸಿದ ನ್ಯಾಯಾಧೀಶ ಆರ್‌.ಜೆ.ಸತೀಶಸಿಂಗ್, ಕಲಂ.7 ಪಿ.ಸಿ ಕಾಯ್ದೆಯಡಿ 3 ವರ್ಷ ಶಿಕ್ಷೆ ₹ 10 ಸಾವಿರ ದಂಡ, ಲಂಚ ಪ್ರತಿಬಂಧಕ ಕಾಯ್ದೆ ಅಡಿ 4 ವರ್ಷ ಶಿಕ್ಷೆ ₹ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.

ಲೋಕಾಯುಕ್ತದ ಪರವಾಗಿವಿಶೇಷ ಸಾರ್ವಜನಿಕ ಅಭಿಯೋಜಕ ಎ.ಎಸ್. ಚಾಂದಕವಠೆ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.