ADVERTISEMENT

ಅರಣ್ಯ ಇಲಾಖೆ ಸಿಬ್ಬಂದಿ ಹತ್ಯೆ ಪ್ರಕರಣದಲ್ಲಿ ಅನುಮಾನ: ತನಿಖೆಗೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 14:09 IST
Last Updated 26 ಏಪ್ರಿಲ್ 2020, 14:09 IST
   

ಎಚ್.ಡಿ.ಕೋಟೆ: ತಾಲ್ಲೂಕಿನ ಗುಂಡ್ರೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಹತ್ಯೆ ಪ್ರಕರಣ ಸಂಬಂಧ ಕೆಲ ಅನುಮಾನಗಳಿವೆ. ಈ ಕುರಿತು ತನಿಖೆ ನಡೆಸಲಾಗುವುದು ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ್ದ ಅವರು ಪ್ರಕರಣ ಸಂಬಂಧ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

‘ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದ ದುಷ್ಕರ್ಮಿಗಳು ಈ ಸಿಬ್ಬಂದಿಯನ್ನು ಮುಳುಗಿಸಿದರೋ ಅಥವಾ ಇವರೇ ಮುಳುಗಿದರೋ ಎಂಬ ಅಂಶ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. ಇಲಾಖೆಯ ಬಳಿ ಯಾಂತ್ರೀಕೃತ ದೋಣಿ ಇದ್ದರೂ ತೆಪ್ಪದಲ್ಲಿ ಕಳ್ಳರನ್ನು ಹಿಡಿಯಲು ಹೊರಟಿದ್ದು ಸರಿಯಲ್ಲ’ ಎಂದರು.

ADVERTISEMENT

‘ಮೃತಪಟ್ಟವರ ಕುಟುಂಬಗಳಿಗೆ ತಲಾ ₹ 10 ಲಕ್ಷ ಪರಿಹಾರ ಹಾಗೂ ಅವರ ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ಉದ್ಯೋಗ ನೀಡಲಾಗುವುದು. ಸದ್ಯ, ಇಲಾಖೆಯಿಂದ ₹ 1 ಲಕ್ಷ ಹಾಗೂ ವೈಯಕ್ತಿಕವಾಗಿ ₹ 1 ಲಕ್ಷ ತಾತ್ಕಾಲಿಕ ಪರಿಹಾರ ವಿತರಿಸಲಾಗಿದೆ’ ಎಂದು ಹೇಳಿದರು.

ಕಬಿನಿ ಹಿನ್ನೀರಿನಲ್ಲಿ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದವರನ್ನು ಹಿಡಿಯಲು ತೆರಳಿದ್ದ ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ದುಷ್ಕರ್ಮಿಗಳು ಶುಕ್ರವಾರ ರಾತ್ರಿ ನೀರಿನಲ್ಲಿ ಮುಳುಗಿಸಿ ಕೊಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.