ಚಿತ್ರದುರ್ಗ: ಭದ್ರಾ ಮೇಲ್ದಂಡೆ ನಾಲೆಯಲ್ಲಿ ನೀರು ಮೇಲೆತ್ತುವ ಭಾರಿ ಪ್ರಮಾಣದ ಮೋಟಾರುಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದ್ದು, ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಎಂಟು ವರ್ಷದಷ್ಟು ಹಳೆಯ ಮೋಟಾರುಗಳು ಕಾರ್ಯನಿರ್ವಹಿಸದಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ.
ತುಂಗಾ ಮತ್ತು ಭದ್ರಾ ನದಿ ನೀರನ್ನು ಬಯಲುಸೀಮೆಗೆ ಹರಿಸುವ ಬಹುನಿರೀಕ್ಷಿತ ಯೋಜನೆ ಪಂಪ್‌ಸೆಟ್‌ಗಳ ದೋಷ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ನಾಲೆ, ಪಂಪಹೌಸ್ ನಿರ್ಮಾಣಕ್ಕೂ ಮೊದಲೇ ಇವುಗಳನ್ನು ಖರೀದಿ ಮಾಡಿರುವುದರ ಹಿಂದೆ ಅಕ್ರಮ ನಡೆದಿರುವ ಸಾಧ್ಯತೆ ಇದೆ ಎಂಬ ಆರೋಪವೂ ಕೇಳಿಬಂದಿದೆ.
ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಯ ಐದು ಲಕ್ಷ ಎಕರೆಗೆ ನೀರುಣಿಸುವ ‘ಭದ್ರಾ ಮೇಲ್ದಂಡೆ ಯೋಜನೆ’ ರೂಪುಗೊಂಡು ದಶಕ ಕಳೆದಿದೆ. 2008ರಲ್ಲಿ ಈ ಯೋಜನೆ ಅನುಷ್ಠಾನಗೊಂಡರೂ ನಾಲೆಯ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಪ್ರಯೋಗಕ್ಕೆ ಎರಡು ತಿಂಗಳ ಹಿಂದೆಯಷ್ಟೇ ಯಶಸ್ಸು ಸಿಕ್ಕಿದೆ.
ಭದ್ರಾ ಮೇಲ್ದಂಡೆ ನಾಲೆಗೆ 29.9 ಟಿಎಂಸಿ ಅಡಿ ನೀರನ್ನು ಮೀಸಲಿಡಲಾಗಿದೆ. 17.4 ಟಿಎಂಸಿ ಅಡಿ ನೀರು ತುಂಗಾ ನದಿಯದಾಗಿದ್ದು, ಉಳಿದ 8.5 ಟಿಎಂಸಿ ಅಡಿ ನೀರನ್ನು ಭದ್ರಾ ಜಲಾಶಯದಿಂದ ಒದಗಿಸಲಾಗುತ್ತದೆ. ತುಂಗಾ ಜಲಾಶಯದ ಹಿನ್ನೀರಿನಿಂದ ಭದ್ರಾ ಜಲಾಶಯಕ್ಕೆ ನೀರನ್ನು ಹರಿಸಲು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಕಣಬೂರು ಹಾಗೂ ಕಸಬೂರು ಗ್ರಾಮಗಳ ಬಳಿ ಪಂಪಹೌಸ್ ನಿರ್ಮಿಸಲಾಗುತ್ತಿದೆ. ಇದಕ್ಕೆ 8,500 ಅಶ್ವಶಕ್ತಿಯ (ಎಚ್‌ಪಿ) ಹತ್ತು ಮೋಟಾರುಗಳನ್ನು ಖರೀದಿಸಲಾಗಿದೆ.
ಭದ್ರಾ ಜಲಾಶಯದಿಂದ 11 ಕಿ.ಮೀ ದೂರದಲ್ಲಿರುವ ತರೀಕೆರೆ ತಾಲ್ಲೂಕಿನ ಶಾಂತಿಪುರ ಹಾಗೂ 46 ಕಿ.ಮೀ ದೂರದಲ್ಲಿರುವ ಬೆಟ್ಟದ ತಾವರೆಕೆರೆ ಬಳಿ ಪಂಪ್‌ಹೌಸ್ ನಿರ್ಮಿಸಲಾಗಿದೆ. ಎರಡೂ ಕಡೆ ನೀರನ್ನು 51 ಮೀಟರ್ ಮೇಲೆತ್ತಿ ನಾಲೆಗೆ ಹರಿಸಲಾಗುತ್ತದೆ. ಪ್ರತಿ ಪಂಪ್‌ಹೌಸ್‌ನಲ್ಲಿ 18,431 ಅಶ್ವಶಕ್ತಿಯ ನಾಲ್ಕು ಮೋಟಾರು ಅಳವಡಿಸಲಾಗಿದೆ. ಪ್ರತಿ ಮೋಟಾರು 750 ಕ್ಯುಸೆಕ್ ನೀರು ಮೇಲೆತ್ತುವ ಸಾಮರ್ಥ್ಯ ಹೊಂದಿದೆ.
ಪಂಪ್‌ಹೌಸ್‌ಗೆ ಅಗತ್ಯವಿರುವ ಮೋಟಾರುಗಳಿಗೆ 2008ರಲ್ಲೇ ಟೆಂಡರ್ ಕರೆಯಾಗಿತ್ತು. 2011ರಲ್ಲಿ ಈ ಮೋಟಾರುಗಳು ಆಸ್ಟ್ರಿಯಾ ಹಾಗೂ ಫಿನ್‌ಲ್ಯಾಂಡ್‌ನಿಂದ ಬಂದಿವೆ. 2018ರ ವರೆಗೂ ಇವುಗಳ ಕಾರ್ಯಾರಂಭವಾಗಿರಲಿಲ್ಲ.
‘ಅಗತ್ಯ ಮೋಟಾರು ಸಿದ್ಧಪಡಿಸುವಂತೆ ಸರ್ಕಾರಿ ಸ್ವಾಮ್ಯದ ಎಲ್ಲ ಉದ್ದಿಮೆಗಳನ್ನು ಕೇಳಿಕೊಂಡಿದ್ದೆವು. ದೊಡ್ಡಪ್ರಮಾಣದ ಪಂಪ್‌ಸೆಟ್ ನಿರ್ಮಿಸಲು ಯಾರೂ ಮುಂದೆ ಬರಲಿಲ್ಲ.ಹೀಗಾಗಿ, ‘ಆನ್‌ರಿಜ್’ ಕಂಪನಿಯ ಉತ್ಕೃಷ್ಟ ಗುಣಮಟ್ಟದ ಮೋಟಾರುಗಳನ್ನು ವಿದೇಶದಿಂದ ತರಿಸಲಾಗಿದೆ. ಪಂಪ್‌ಹೌಸ್ ನಿರ್ಮಾಣ ಹಂತದಲ್ಲೇ ಮೋಟಾರು ಅಳವಡಿಸಬೇಕಾಗಿದ್ದರಿಂದ ಮೊದಲೇ ಖರೀದಿಸುವ ಅಗತ್ಯವಿತ್ತು’ ಎನ್ನುತ್ತಾರೆ ಭದ್ರಾ ಮೇಲ್ದಂಡೆ ಯೋಜನೆಯ ನಿವೃತ್ತ ಮುಖ್ಯ ಎಂಜಿನಿಯರ್ ಚಲುವರಾಜು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.