ADVERTISEMENT

ಅನ್ನದಾಸೋಹದಲ್ಲಿಯೇ ಶಿವನ ಸಾಕ್ಷಾತ್ಕಾರ

ರಾಮರಡ್ಡಿ ಅಳವಂಡಿ
Published 21 ಜನವರಿ 2019, 20:27 IST
Last Updated 21 ಜನವರಿ 2019, 20:27 IST
   

‘ಸಿದ್ಧಗಂಗಾಮಠ’, ಈ ಹೆಸರು ಕೇಳುತ್ತಿದ್ದಂತೆಯೇ ಕಣ್ಮುಂದೆ ಬರುವುದು ಅಲ್ಲಿನ ಅನ್ನದಾಸೋಹ. ಜ್ಞಾನದಾಸೋಹ ಮತ್ತು ಡಾ. ಶಿವಕುಮಾರ ಸ್ವಾಮೀಜಿ. ಹಲವು ದಶಕಗಳಿಂದ ನಡೆದು ಬಂದಿರುವ ಮಠದ ಈ ‘ದಾಸೋಹ’ ಪರಂಪರೆ ಇಡೀ ಜಗತ್ತನ್ನೇ ನಿಬ್ಬೆರಗುಗೊಳಿಸಿದೆ. ಮನೆಯಲ್ಲಿ ಎರಡು ಮಕ್ಕಳಿಗೆ ಸಕಾಲಕ್ಕೆ ಊಟ ಮಾಡಿಸಿ ಅಕ್ಷರ ಕಲಿಸಲೂ ಆಗದ ಈಗಿನ ಧಾವಂತದ ದಿನಗಳಲ್ಲೂ ಇಲ್ಲಿ ಅದು ಹೇಗೆ ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿದವರು ಅನೇಕರಿದ್ದಾರೆ.

ದಾಸೋಹಕ್ಕೆ ಮತ್ತೊಂದು ಹೆಸರೇ ಸಿದ್ಧಗಂಗಾಮಠ ಎಂಬುವಷ್ಟರ ಮಟ್ಟಿಗೆ ಈ ಮಠದ ಕಾರ್ಯ ವಿಶ್ವದ ಗಮನ ಸೆಳೆದಿದೆ. ಅನ್ನ, ಜ್ಞಾನ, ಆಸರೆ ಅರಸಿ ಬಂದ ಬಡ ಕುಟುಂಬಗಳ, ಅನಾಥ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿದೆ. ಉಜ್ವಲಗೊಳಿಸುತ್ತಲೇ ಇದೆ. ಮಠದ ಅಂಗಳದಲ್ಲಿ ಬೆಳೆದು ಸಾಧಕರಾದವರೆಷ್ಟೊ. ಅದಕ್ಕೆಲ್ಲ ಮಠ ಲೆಕ್ಕ ಇಟ್ಟಿಲ್ಲ.

ಆದರೆ, ನಿತ್ಯ ಇಂತಹ ಸಾಧಕರು ಮಠಕ್ಕೆ ಬಂದು ತಮ್ಮ ಪರಿಚಯ ಮಾಡಿಕೊಳ್ಳುತ್ತಲೇ ಇರುತ್ತಾರೆ. ಉನ್ನತ ಸ್ಥಾನಕ್ಕೇರಿದವರು ಮಠದ ಏಳಿಗೆಗೆ ಕೈಲಾದಷ್ಟು ಸಹಾಯ ಮಾಡಿ ಕೃತಾರ್ಥ ಭಾವ ಪಡೆಯುತ್ತಿದ್ದಾರೆ.

ADVERTISEMENT

ಹಚ್ಚಿದ ಒಲೆ ಇಂದಿಗೂ ಉರಿಯುತ್ತಿದೆ: ಅನ್ನದಾಸೋಹಕ್ಕಾಗಿ ಹಚ್ಚಿದ ‘ಒಲೆ’ ಇಂದಿಗೂ ಉರಿಯುತ್ತಲೇ ಇದೆ. ಮಠದಲ್ಲಿನ ಪ್ರಸಾದ ವ್ಯವಸ್ಥೆಯ ಪ್ರಕ್ರಿಯೆ ನೋಡಿದರೆ ಸಾಕು ಬೆರಗು ಮೂಡುತ್ತದೆ. ಈಗಿನ ಕಾಲದಲ್ಲೂ ಇದು ಸಾಧ್ಯವೇ? – ಎನ್ನುವವರಿದ್ದಾರೆ.

ಸಿದ್ಧಗಂಗಾಮಠದಲ್ಲಿ ಉದ್ಧಾನ ಶಿವಯೋಗಿಗಳ ಕಾಲದಲ್ಲಿ ಪ್ರಾರಂಭವಾದ ಅನ್ನದಾಸೋಹ–ಜ್ಞಾನ ದಾಸೋಹ ಇಂದಿಗೂ ನಿಂತಿಲ್ಲ. ಅನ್ನದಾಸೋಹದಲ್ಲಿ ಶಿವನ ಸಾಕ್ಷಾತ್ಕಾರವನ್ನು ಶಿವಕುಮಾರ ಸ್ವಾಮೀಜಿ ಕಾಣುತ್ತಿದ್ದರು.

ಇದರ ಹಿಂದಿನ ಕರ್ತೃತ್ವ ಶಕ್ತಿಯೇ ಶಿವಕುಮಾರ ಸ್ವಾಮೀಜಿ. ಚೈತನ್ಯಶಕ್ತಿ ಮತ್ತು ಭಕ್ತರ ಬದ್ಧತೆ, ದಾನಿಗಳ ಉದಾರ ಕೊಡುಗೆಯೂ ಕಾರಣವಾಗಿದೆ. ಸರ್ಕಾರದ ಹೆಚ್ಚಿನ ನೆರವಿಲ್ಲದೇ ಮಠದಲ್ಲಿ ಅನ್ನದಾಸೋಹ ನಡೆದುಕೊಂಡು ಬಂದಿದೆ. ಮಳೆ ಬಂದು ದವಸ ಧಾನ್ಯ ಸಾಕಷ್ಟು ಬೆಳೆದಾಗ ರೈತರು, ಭಕ್ತರು ವಿಶೇಷವಾಗಿ ಗ್ರಾಮೀಣ ಭಾಗದ ಭಕ್ತರು ಟ್ರ್ಯಾಕ್ಟರ್, ಲಾರಿಗಳಲ್ಲಿ ಮಠದ ಉಗ್ರಾಣಕ್ಕೆ ರಾಗಿ, ಅಕ್ಕಿ, ತರಕಾರಿ, ತೆಂಗು, ಗೋಧಿ, ತೊಗರಿ, ಹುರುಳಿಕಾಳು – ಹೀಗೆ ಏನೇನು ಬೆಳೆದಿರುತ್ತಾರೊ ಅದನ್ನು ತಂದು ಅರ್ಪಿಸುವುದು ಇನ್ನೂ ನಿಂತಿಲ್ಲ.

ಇಷ್ಟೇ ಕ್ವಿಂಟಲ್ ಅಕ್ಕಿ, ರಾಗಿ, ರವೆ, ಬಳಸಬೇಕು, ಎಣ್ಣೆ ಯಾಕೆ ಜಾಸ್ತಿ ಹೋಯಿತು, ತರಕಾರಿ ಹೆಚ್ಚು ಬಳಕೆಯಾಯಿತಲ್ಲ? – ಎಂಬ ಲೆಕ್ಕಾಚಾರದ ಮಾತುಗಳು ಇಲ್ಲಿ ಇಲ್ಲ. ಅನ್ನದಾಸೋಹಕ್ಕೆ ಲೆಕ್ಕವಿಡುವುದರಲ್ಲಿ ಅರ್ಥ ವಿದೆಯೇ? ಕೊಡಲು ದೇವರಿದ್ದಾನೆ. ಭಕ್ತರಿದ್ದಾರೆ. ನೂರಾರು ವರ್ಷಗಳಿಂದ ಮಠದಲ್ಲಿ ದಾಸೋಹ ನಡೆದು ಬಂದಿದೆ. ಇಂದು, ಮುಂದೆಯೂ ನಡೆದುಕೊಂಡು ಹೋಗುತ್ತದೆ. ಶರಣರು ಪ್ರತಿಪಾದಿಸಿದ ಸತ್ಯ ಶುದ್ಧ ಕಾಯಕ ಪ್ರಜ್ಞೆ ಹಾಗೂ ನಿಷ್ಕಾಮ ಭಾವದಿಂದ ನಿಮ್ಮ ಕೆಲಸ ನೀವು ಮಾಡಿರಿ –ಎಂದು ಶಿವಕುಮಾರ ಸ್ವಾಮೀಜಿ ಕಟ್ಟಾಜ್ಞೆ ಇರುತ್ತಿತ್ತು.

ಮಠದಲ್ಲಿ ಈಗ 9,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆಶ್ರಯ, ಜ್ಞಾನದಾಸೋಹದ ಜತೆಗೆ ಅನ್ನದಾಸೋಹ ಪಡೆಯುತ್ತಾರೆ. 1ನೇ ತರಗತಿಯಿಂದ ಬಿ.ಎ., ಎಂ.ಎ., ಎಂಜಿನಿಯರಿಂಗ್ ವಿದ್ಯಾರ್ಥಿಗಳೂ ಸಹ ಮಠದಲ್ಲಿ ಇದ್ದಾರೆ. ಅಲ್ಲದೇ ನಿತ್ಯ ಎರಡೂವರೆ ಸಾವಿರಕ್ಕೂ ಹೆಚ್ಚು ಭಕ್ತರು ಬರುತ್ತಾರೆ.

ಮಕ್ಕಳಿಗೆ ಹಾಲು ವಿತರಣೆ ಶಾಲಾ ಮಕ್ಕಳಿಗೆ ಉಪಾಹಾರವಾಗಿ ಉಪ್ಪಿಟ್ಟು, ಪೊಂಗಲ್, ಪಲಾವ್ ಕೊಡಲಾಗುತ್ತದೆ. ಅದರಲ್ಲೂ 1ರಿಂದ 3ನೇ ತರಗತಿ ಮಕ್ಕಳಿಗೆ (ತೀರಾ ಚಿಕ್ಕಮಕ್ಕಳಿಗೆ) ಬೆಳಿಗ್ಗೆ 7 ಗಂಟೆಗೆ ಒಂದು ಲೋಟ ಹಾಲು. ಈ ಹಾಲಿಗೆ ಹುರುಳಿ, ಗೋದಿ, ರಾಗಿ ಹುರಿದ ಹಿಟ್ಟನ್ನು ಮಿಶ್ರಣ ಮಾಡಿ ಕೊಡಲಾಗುತ್ತದೆ. ಮಕ್ಕಳಲ್ಲಿ ಅಪೌಷ್ಟಿಕತೆ ಕಾಡಬಾರದು. ಅಸಹಾಯಕರ, ಬಡವರ ಮಕ್ಕಳೇ ಮಠಕ್ಕೆ ಬರುವುದು. ಅವರು ಆರೋಗ್ಯವಾಗಿರಬೇಕು ಎಂಬ ಕಾಳಜಿಯಿಂದ ಶಿವಕುಮಾರ ಸ್ವಾಮೀಜಿಯವರೇ ವಿಶೇಷ ಕಾಳಜಿವಹಿಸಿ ರೂಪಿಸಿದ ಯೋಜನೆ ಇದು ಎಂದು ಮಠದ ಆಡಳಿತ ಮಂಡಳಿ ಹೇಳುತ್ತದೆ.

ಶಾಲಾ ಮಕ್ಕಳಿಗೆ ಬೆಳಿಗ್ಗೆ ಉಪಾಹಾರ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ 10 ಗಂಟೆಗೆ ಊಟ ಕೊಡಲಾಗುತ್ತದೆ. ಮಧ್ಯಾಹ್ನ ಮತ್ತು ಸಂಜೆ ಮಕ್ಕಳಿಗೆ ಊಟ ಕೊಡಲಾಗುತ್ತದೆ. 15 ದಿನಕ್ಕೊಮ್ಮೆ ಮಕ್ಕಳಿಗೆ ಮೈಸೂರು ಪಾಕ್, ಬೂಂದಿ – ಹೀಗೆ ಏನಾದರೊಂದು ಸಿಹಿಯ ವಿಶೇಷ ಊಟ ಇದ್ದೇ ಇರುತ್ತದೆ. ಹಬ್ಬದ ದಿನಗಳಲ್ಲಿ ಹೋಳಿಗೆ ಊಟ ತಪ್ಪುವುದಿಲ್ಲ!

ತಡರಾತ್ರಿಯಲ್ಲೂ ಪ್ರಸಾದ: ಪ್ರತಿ ದಿನ ಮಠದಲ್ಲಿ ಕನಿಷ್ಠ ಮೂರು ಸಾವಿರ ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ. ಮಠಕ್ಕೆ ಭಕ್ತರು ಯಾವುದೇ ಸಮಯದಲ್ಲಿ ಬಂದರೂ ಅವರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ಒಮ್ಮೊಮ್ಮೆ ರಾತ್ರಿ 12, 1 ಗಂಟೆಗೆ ದೂರದ ಊರುಗಳಿಂದ ಭಕ್ತರು ಬರುತ್ತಾರೆ. ಹಸಿದು ಬಂದವರಿಗೆ ಮೊದಲು ಪ್ರಸಾದ ವ್ಯವಸ್ಥೆ ಮಾಡುತ್ತೇವೆ. ಬಳಿಕ ವಸತಿ ವ್ಯವಸ್ಥೆಯಾಗುತ್ತದೆ. ಬೆಳಿಗ್ಗೆ ಸ್ವಾಮೀಜಿ ದರ್ಶನ ಪಡೆದು ಉಪಾಹಾರ ಸೇವಿಸಿ ತೆರಳುತ್ತಿದ್ದರು ಎನ್ನುತ್ತಾರೆ ಮಠದ ಆಡಳಿತ ಸಿಬ್ಬಂದಿ.

ತಡರಾತ್ರಿ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆಗೆ ಮೂರು ಮಂದಿ ಬಾಣಸಿಗರನ್ನು ಪ್ರತ್ಯೇಕವಾಗಿ ನೇಮಿಸಲಾಗಿದೆ. ಅವರು ಈ ಪ್ರಸಾದದ ಕಲ್ಪಿಸುವ ವ್ಯವಸ್ಥೆ ಮಾಡುತ್ತಾರೆ. ಇದು ಮಠದ ಮತ್ತೊಂದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.