ADVERTISEMENT

ಮೀಸಲಾತಿಗೆ ಆಮರಣ ಉಪವಾಸ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 18:33 IST
Last Updated 29 ಜನವರಿ 2021, 18:33 IST
‘ಪಂಚಲಕ್ಷ ಹೆಜ್ಜೆ ಪಾದಯಾತ್ರೆ’ಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ವಚನಾನಂದ ಸ್ಬಾಮೀಜಿ ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿ ಶುಕ್ರವಾರ ರಾತ್ರಿ ಜೊತೆಗೆ ಹೆಜ್ಜೆ ಹಾಕಿದರು ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್‌
‘ಪಂಚಲಕ್ಷ ಹೆಜ್ಜೆ ಪಾದಯಾತ್ರೆ’ಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ವಚನಾನಂದ ಸ್ಬಾಮೀಜಿ ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿ ಶುಕ್ರವಾರ ರಾತ್ರಿ ಜೊತೆಗೆ ಹೆಜ್ಜೆ ಹಾಕಿದರು ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್‌   

ಹರಿಹರ: ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಫೆ. 15ರೊಳಗೆ 2 ‘ಎ’ ಮೀಸಲಾತಿ ಘೋಷಣೆ ಮಾಡದಿದ್ದರೆ ವಿಧಾನಸೌಧದ ಬಳಿ ಹಸಿರು ಶಾಲು ಹಾಕಿಕೊಂಡು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ಘೋಷಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಪ್ರಥಮ ಬಾರಿಗೆ ಲಿಂಗಾಯತ ಸಮಾಜದ ಪೀಠದಿಂದ ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಸಮಾಜದ ಜನಪ್ರತಿನಿಧಿಗಳು ರಾಜೀನಾಮೆ ನೀಡುವ ಬದಲು, ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವ ಮೂಲಕ ಮೀಸಲಾತಿ ಪಡೆಯಬೇಕು. ಇಲ್ಲವಾದಲ್ಲಿ ಅವರ ರಾಜೀನಾಮೆ ಪಡೆದು, ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದ ನಾಯಕರಿಗೆ ಮುಖ್ಯಮಂತ್ರಿ ಪಟ್ಟಕಟ್ಟಬೇಕು’ ಎಂದು ಕರೆ ನೀಡಿದರು.

‘ಸರ್ಕಾರದ ಕಣ್ಣು ತೆರೆಸಲು ಶನಿವಾರ (ಜ.30)ರಿಂದ ಬಾರುಕೋಲು ಹಾಗೂ ಮಹಿಳೆಯರು ಕುಡುಗೋಲು ಹಿಡಿದು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಹೆಜ್ಜೆ ಹಾಕಿದ ವಚನಾನಂದ ಸ್ವಾಮೀಜಿ

ಹರಿಹರದಿಂದ ಹೊರಟ ಪಾದಯಾತ್ರೆಯನ್ನು ದಾವಣಗೆರೆಯ ಬಾತಿ ಗ್ರಾಮದಲ್ಲಿ ಸಂಜೆ ಪಂಚಮಸಾಲಿ ಸಮುದಾಯದವರು ಅದ್ದೂರಿಯಾಗಿ ಸ್ವಾಗತಿಸಿದರು. ಪಿ.ಬಿ. ರಸ್ತೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಪಾದಯಾತ್ರೆ ಬಂದಾಗ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರೂ ಬಂದು ಸೇರಿಕೊಂಡರು. ಕೂಡಲಸಂಗದ ಸ್ವಾಮೀಜಿ ಜೊತೆಗೆ ಹರಿಹರದ ಸ್ವಾಮೀಜಿಯೂ ಜೊತೆಗೆ ಹೆಜ್ಜೆ ಹಾಕಿದ್ದು, ಭಕ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿತು. ದಾವಣಗೆರೆಯ ಬೀರೇಶ್ವರ ದೇವಸ್ಥಾನದ ಮೈದಾನಕ್ಕೆ ಪಾದಯಾತ್ರೆ ರಾತ್ರಿ ಬಂದ ಬಳಿಕ ಸಮಾವೇಶ ನಡೆಯಿತು. ಕೂಡಲಸಂಗಮ ಸ್ವಾಮೀಜಿ ಪಾದಯಾತ್ರೆಯಲ್ಲಿ ಒಟ್ಟು 369 ಕಿ.ಮೀ ದೂರವನ್ನು ಕ್ರಮಿಸಿದ್ದಾರೆ.

ವಿಳಂಬ ಏಕೆ?

‘ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಹಾಗೂ ಜಗದೀಶ್ ಶೆಟ್ಟರ್‌ ಅವರು ತಮ್ಮ ಸಮುದಾಯವನ್ನು ರಾತ್ರೋರಾತ್ರಿ 2 ‘ಎ’ ಪಟ್ಟಿಗೆ ಸೇರಿಸಿದ್ದಾರೆ. ಪಂಚಮಸಾಲಿ ಸಮಾಜವನ್ನು ಸೇರ್ಪಡೆ ಮಾಡಲು ಮಾತ್ರ ಸರ್ಕಾರ ಏಕೆ ಮೀನ–ಮೇಷ ಏಣಿಸುತ್ತಿದೆ’ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.