ADVERTISEMENT

ನಗರಾಭಿವೃದ್ಧಿ ಇಲಾಖೆಗೆ ತಹಶೀಲ್ದಾರ್‌; ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 19:00 IST
Last Updated 5 ಮಾರ್ಚ್ 2019, 19:00 IST
   

ಬೆಂಗಳೂರು: ರಾಜ್ಯ ಸರ್ಕಾರದ ಸಚಿವಾಲಯದ ವೃಂದ ಹಾಗೂ ನೇಮಕಾತಿ ನಿಯಮಗಳಿಗೆ ವಿರುದ್ಧವಾಗಿ ಇತರೆ ಇಲಾಖೆಯ ನೌಕರರನ್ನು ಸಚಿವಾಲಯದ ಅಧೀನ ಕಾರ್ಯದರ್ಶಿ ಹುದ್ದೆ ಸ್ಥಳ ನಿಯುಕ್ತಿ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ಸಚಿವಾಲಯ ನೌಕರರ ಸಂಘವು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಅವರಿಗೆ ಮನವಿ ಸಲ್ಲಿಸಿದೆ.

ಜಿಲ್ಲಾ ತರಬೇತಿ ಸಂಸ್ಥೆಯ ಉಪ ಪ್ರಾಂಶುಪಾಲ ಲಕ್ಷ್ಮಿಸಾಗರ್‌ ಅವರನ್ನು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಯಾಗಿ ಸ್ಥಳನಿಯುಕ್ತಿ ಮಾಡಲಾಗಿದೆ. ಈ ನೇಮಕಾತಿಯ ಸಂದರ್ಭದಲ್ಲಿ ಸಚಿವಾಲಯದ ವೃಂದ ಹಾಗೂ ನೇಮಕಾತಿ ನಿಯಮಗಳನ್ನು ಪಾಲಿಸಿಲ್ಲ. ಸಚಿವಾಲಯದ ದಕ್ಷತೆಗೆ ಮಾರಕವಾದ ಹಾಗೂ ಸಚಿವಾಲಯದ ನೌಕರರ ಸೇವಾ ಹಿತಾಸಕ್ತಿಗೆ ವಿರುದ್ಧವಾಗಿ ಕ್ಷೇತ್ರ ಇಲಾಖೆಗಳ ನೌಕರರನ್ನು ಸಚಿವಾಲಯ ಸೇವೆಗೆ ನಿಯೋಜಿಸಲಾಗುತ್ತಿದೆ. ಈ ಹಿಂದೆಯೂ ನೌಕರರ ಸಂಘ ಇದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿತ್ತು. 200ಕ್ಕೂ ಹೆಚ್ಚು ತಹಶೀಲ್ದಾರ್‌ ಹುದ್ದೆಗಳು ಖಾಲಿ ಇವೆ. ಜತೆಗೆ, ಲೋಕಸಭಾ ಚುನಾವಣಾ ಸಂದರ್ಭದಲ್ಲಿ ತಹಶೀಲ್ದಾರ್‌ ಗ್ರೇಡ್‌– 1 ಅಧಿಕಾರಿಯನ್ನು ಸಚಿವಾಲಯಕ್ಕೆ ನಿಯೋಜಿಸಿರುವುದು ಸೋಜಿಗ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದು ರಾಜಕೀಯ ಪ್ರೇರಿತ ನಿಯೋಜನೆ. ಈ ಆದೇಶವನ್ನು ಹಿಂಪಡೆದು ಅಧಿಕಾರಿಯನ್ನು ಮಾತೃ ಇಲಾಖೆಗೆ ಕಳುಹಿಸಬೇಕು. ಇಲ್ಲದಿದ್ದರೆ ಸಂಘ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಲಾಗಿದೆ.

ADVERTISEMENT

‘ಜೆಡಿಎಸ್‌ ನಾಯಕರೊಬ್ಬರ ಸಂಬಂಧಿ ಎಂಬ ಕಾರಣಕ್ಕೆ ಲಕ್ಷ್ಮಿಸಾಗರ್‌ ಅವರನ್ನು ನೇಮಕ ಮಾಡಲಾಗಿದೆ. ಇದು ಕಾನೂನುಬಾಹಿರ’ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.