ADVERTISEMENT

ಮನೆ ಬಾಗಿಲಿಗೆ ಆಹಾರ ಸಾಮಗ್ರಿ ತಲುಪಿಸಿ: ಸರಕಾರಕ್ಕೆ ತರಳಬಾಳು ಶ್ರೀ ಪತ್ರ

ಮುಖ್ಯಮಂತ್ರಿಗೆ ಪತ್ರ ಬರೆದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 13:28 IST
Last Updated 15 ಏಪ್ರಿಲ್ 2020, 13:28 IST
ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ   

ಸಿರಿಗೆರೆ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರ ಮನೆಯ ಬಾಗಿಲಿಗೆ ಹಾಲು, ತರಕಾರಿ ಮತ್ತು ಆಹಾರ ಸಾಮಗ್ರಿಗಳು ತಲುಪುವಂತೆ ಮಾಡಬೇಕು ಎಂದು ಸಿರಿಗೆರೆಯ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜನರು ಮನೆಯೊಳಗೆ ಇರಬೇಕಾಗಿದೆ. ಕುಟುಂಬದ ಸದಸ್ಯರ ಪ್ರಾಣ ರಕ್ಷಣೆ ಮುಖ್ಯವಾಗಿದೆ. ರೈತರಿಗೆ ನೆರವಾಗಲು ಸಾಧ್ಯವಾಗಬಹುದಾದ ಅಂಶಗಳ ಬಗ್ಗೆ ಮುಖ್ಯಮಂತ್ರಿಗೆ ಸಲಹೆ ನೀಡಿದ್ದಾರೆ.

ಜನರು ಅಂತರ ಕಾಯ್ದುಕೊಳ್ಳುವಲ್ಲಿ ಜವಾಬ್ದಾರಿಯುತವಾಗಿ ವರ್ತಿಸುತ್ತಿಲ್ಲ. ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚುತ್ತಿದೆ. ರಾಜ್ಯದಾದ್ಯಂತ ಇರುವ ಎಲ್ಲಾ ಮಾರುಕಟ್ಟೆಗಳನ್ನು ರದ್ದುಗೊಳಿಸಬೇಕು. ಬದಲಿಗೆಜನರ ಮನೆ ಬಾಗಿಲಿಗೆ ಹಾಲು, ತರಕಾರಿ ಮತ್ತು ಆಹಾರ ಸಾಮಗ್ರಿಗಳು ತಲುಪುವಂತೆ ಸಾರಿಗೆ ಬಸ್‌ಗಳನ್ನು ನಿಯೋಜಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ರೈತರು ಹಾಗೂ ಮಾರಾಟಗಾರರಿಗೆ ತರಕಾರಿ, ಹಾಲು ಹಾಗೂ ಆಹಾರ ಸಾಮಗ್ರಿಗಳ ಸಾಗಾಣಿಕೆಗೆ ಬಸ್‌ಗಳ ಸೌಲಭ್ಯವನ್ನು ಕಲ್ಪಿಸಬೇಕು. ಈ ಬಸ್‌ಗಳಲ್ಲಿ ಮಾರಾಟಗಾರರು ತಮ್ಮ ಸರಕುಗಳನ್ನು ಸಾಗಣೆ ಮಾಡಿ ಮಾರಾಟ ಮಾಡಲು ಅವಕಾಶ ನೀಡಬೇಕು. ಕೊಳೆಗೇರಿ ನಿವಾಸಿಗಳನ್ನು ಮತ್ತು ದಿನಗೂಲಿ ಕಾರ್ಮಿಕರನ್ನು ಹೊರತುಪಡಿಸಿ ಯಾರಿಗೂ ಏನನ್ನೂ ಉಚಿತವಾಗಿ ವಿತರಿಸಬಾರದು ಎಂದು ಹೇಳಿದ್ದಾರೆ.

ಜನರು ಗುಂಪು ಸೇರುವುದನ್ನು ತಪ್ಪಿಸಲು ನಗರದ ವಿವಿಧ ಬಡಾವಣೆಗಳು ಮತ್ತು ಸ್ಥಳಗಳಿಗೆ ಹಾಲು, ತರಕಾರಿ ಮತ್ತು ಆಹಾರ ಸಾಮಗ್ರಿಗಳನ್ನು ಬಸ್‌ಗಳ ಮೂಲಕವೇ ತಲುಪುವಂತೆ ಮಾಡಬೇಕು. ಮಾರಾಟಗಾರರು ಬಸ್‌ನ ಮೆಟ್ಟಿಲುಗಳ ಮೇಲೆ ನಿಂತು ಅಥವಾ ಬಸ್‌ಗಳ ಪಕ್ಕದಲ್ಲಿ ಇಟ್ಟುಕೊಂಡು ಸರಕುಗಳನ್ನು ಮಾರಾಟ ಮಾಡಬೇಕು.ನಾಗರಿಕರು ಅಂತರ ಕಾಯ್ದುಕೊಂಡು ಸರತಿಯ ಸಾಲಿನಲ್ಲಿ ನಿಂತು ಸರಕುಗಳನ್ನು ಖರೀದಿಸಬೇಕು ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.