ADVERTISEMENT

ತೆರಿಗೆ ಸಂಗ್ರಹ ಕುಸಿತ: ಗುರಿ ಮುಟ್ಟಲು ಸಿಎಂ ಸಿದ್ದರಾಮಯ್ಯ ಸೂಚನೆ

ಇಲಾಖಾ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 0:53 IST
Last Updated 2 ಡಿಸೆಂಬರ್ 2023, 0:53 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಬೆಂಗಳೂರು: ಬರ ಮತ್ತು ಜಾಗತಿಕ ಮಾರುಕಟ್ಟೆಯ ಏರಿಳಿತದಿಂದ ತೆರಿಗೆ ಸಂಗ್ರಹದಲ್ಲಿ ತೀವ್ರ ಕುಸಿತವಾಗುವ ಆತಂಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಆರ್ಥಿಕ ವರ್ಷದಲ್ಲಿ ತೆರಿಗೆ ಸಂಗ್ರಹದ ಗುರಿಯನ್ನು ತಲುಪಲು ಕಠಿಣ ಪರಿಶ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯದ ತೆರಿಗೆ ಸಂಗ್ರಹದ ಪ್ರಗತಿ ಪರಿಶೀಲನೆಯನ್ನು ಸಿದ್ದರಾಮಯ್ಯ ಶುಕ್ರವಾರ ನಡೆಸಿದರು. 2023–24 ರ ಸಾಲಿಗೆ ರಾಜ್ಯ ಸರ್ಕಾರ ₹1.82 ಲಕ್ಷ ಕೋಟಿ ತೆರಿಗೆ ಸಂಗ್ರಹದ ಗುರಿ ನಿಗದಿ ಮಾಡಿದೆ. ವಾಣಿಜ್ಯ ತೆರಿಗೆ ₹98,650 ಕೋಟಿ, ಅಬಕಾರಿ ₹36,000 ಕೋಟಿ, ನೋಂದಣಿ ಮತ್ತು ಮುದ್ರಾಂಕದಿಂದ ₹25,000 ಕೋಟಿ, ಸಾರಿಗೆ ₹11,500 ಕೋಟಿ ಮತ್ತು ಗಣಿ ಹಾಗೂ ಭೂವಿಜ್ಞಾನ ಇಲಾಖೆಯಿಂದ ₹9,000 ಕೋಟಿ ತೆರಿಗೆ ಸಂಗ್ರಹದ ನಿರೀಕ್ಷೆ ಹೊಂದಿದೆ. ‘ಈ ವರೆಗೆ  ₹1.10 ಲಕ್ಷ ಕೋಟಿ ಮಾತ್ರ ಸಂಗ್ರಹಿಸಲಾಗಿದೆ’ ಎಂದು ಸಭೆಯಲ್ಲಿ ಸಿದ್ದರಾಮಯ್ಯ ಹೇಳಿದರು.

ADVERTISEMENT

ತೆರಿಗೆ ಸಂಗ್ರಹದ ನಿಖರ ಸಂಖ್ಯೆಯನ್ನು ಸರ್ಕಾರ ಬಹಿರಂಗ ಮಾಡಿಲ್ಲ. ಸಾರಿಗೆ ಇಲಾಖೆ ಮಾತ್ರ ನಿಗದಿತ ಗುರಿಯನ್ನು ಸಾಧಿಸಿದೆ. ಉಳಿದ ಇಲಾಖೆಗಳು ಹಿನ್ನಡೆ ಸಾಧಿಸಿವೆ ಎಂಬ ಅಂಶ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

‘ಆದಾಯ ವೃದ್ಧಿಯ ಕುರಿತ ನಮ್ಮ ನಿರೀಕ್ಷೆ ಆಶಾದಾಯಕವಾಗಿದೆ. ಆದರೆ, ಸ್ವಲ್ಪ ಮಟ್ಟಿಗೆ ಹಿಂದೆ ಬಿದ್ದಿದ್ದೇವೆ. 223 ತಾಲ್ಲೂಕುಗಳಲ್ಲಿ ಬರ ಇರುವುದರಿಂದ ತೆರಿಗೆ ಸಂಗ್ರಹದ ಮೇಲೆ ಹೊಡೆತ ಬಿದ್ದಿದೆ’ ಎಂದು ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಹೊಸ ಸರ್ಕಾರ ಕಾರ್ಯ ನಿರ್ವಹಿಸಲು ಆರಂಭಿಸಿದ್ದು ಆಗಸ್ಟ್‌ನಿಂದ. ಅಂದರೆ, ಹೊಸ ಬಜೆಟ್‌ಗೆ ಒಪ್ಪಿಗೆ ಸಿಕ್ಕಿದ ಬಳಿಕ. ಆದರೆ, ಹಿಂದಿನ ಸರ್ಕಾರದ ಕಾಮಗಾರಿಗಳನ್ನು ತಡೆ ಹಿಡಿದಿದ್ದು ಮತ್ತು ಗುತ್ತಿಗೆದಾರರಿಗೆ ಹಣ ಪಾವತಿ ಮಾಡದ ಕಾರಣ ಆದಾಯದ ಹರಿವಿನ ಮೇಲೆ ದೊಡ್ಡ ಪ್ರಮಾಣದ ಹೊಡೆತ ಬಿದ್ದಿತು’ ಎಂದು ಅವರು ವಿವರಿಸಿದರು.

ಅಲ್ಲದೇ, ಪೆಟ್ರೋಲಿಯಂ ಮತ್ತು ಉಕ್ಕು ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದರಿಂದ ರಾಜ್ಯಕ್ಕೆ ಜಿಎಸ್‌ಟಿ ನಷ್ಟ ಉಂಟಾಗಿದೆ. ಉಕ್ಕು ಬೆಲೆ ಟನ್‌ಗೆ ₹91,000 ಇದ್ದದ್ದು ₹61,000 ಕ್ಕೆ ಕುಸಿತವಾಗಿದೆ ಎಂದು ಅವರು ಹೇಳಿದರು.

ಎಂಆರ್‌ಪಿಎಲ್‌ ರಾಜ್ಯದ ಅತಿ ದೊಡ್ಡ ತೆರಿಗೆ ಪಾವತಿ ಕಂಪನಿ. ಆದರೆ, ಕಚ್ಚಾ ತೈಲದ ಬೆಲೆ ಕುಸಿತವಾಗಿದ್ದರಿಂದ ತೆರಿಗೆ ಪಾವತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕುಸಿತವಾಗಿದೆ ಎಂದರು.

ಹಿಂದಿನ ಸರ್ಕಾರ ಅವಾಸ್ತವಿಕವಾಗಿ ತೆರಿಗೆ ಗುರಿಯನ್ನು ನಿಗದಿ ಮಾಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೇವಲ ₹12,000 ಕೋಟಿ ಮಾತ್ರ ಹೆಚ್ಚು ಆದಾಯ ಬಂದಿದೆ ಎಂದು ಅವರು ತಿಳಿಸಿದರು.

₹7,605.92 ಕೋಟಿಗೆ ಮಹದೇವಪ್ಪ ಬೇಡಿಕೆ

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರು ತಮ್ಮ ಇಲಾಖೆಗೆ ಹೆಚ್ಚುವರಿಯಾಗಿ ₹7,605.92 ಕೋಟಿ  ನೀಡಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ.

‘ಇದರಿಂದ ಬಾಕಿ ಉಳಿದಿರುವ ಬಿಲ್‌ಗಳನ್ನು ಚುಕ್ತಾ ಮಾಡುವುದರ ಜತೆಗೆ, ಹಾಸ್ಟೆಲ್‌ಗಳ ದುರಸ್ತಿ, ಹೊಸ ಉಪಕರಣಗಳ ಖರೀದಿ ಮತ್ತು ಇತರ ವೆಚ್ಚಗಳನ್ನು ಭರಿಸಬಹುದು’ ಎಂದು ಅವರು ಮುಖ್ಯಮಂತ್ರಿಯವರಿಗೆ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. ಆದರೆ, ಕೇಳಿದಷ್ಟು ಹಣ ಬಿಡುಗಡೆ ಮಾಡುವ ಬಗ್ಗೆ ಅವರು ಯಾವುದೇ ಭರವಸೆ ನೀಡಲಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.