ADVERTISEMENT

ಟ್ಯಾಕ್ಸಿ ಪ್ರಯಾಣ ದರ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 15:36 IST
Last Updated 1 ಏಪ್ರಿಲ್ 2021, 15:36 IST
   

ಬೆಂಗಳೂರು: ರಾಜ್ಯದ ಎಲ್ಲ ಕಡೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುವವರ ಜೇಬಿಗೆ ಇನ್ನು ಮತ್ತಷ್ಟು ಕತ್ತರಿ ಬೀಳಲಿದೆ.

ಟ್ಯಾಕ್ಸಿ ಬಳಕೆಗೆ ವಿಧಿಸುತ್ತಿದ್ದ ಪ್ರತಿ ಕಿ.ಮೀ ಹಾಗೂ ಕನಿಷ್ಠ 4 ಕಿ.ಮೀ ವರೆಗಿನ ದರವನ್ನು ಹೆಚ್ಚಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಜಿಎಸ್‌ಟಿ, ಟೋಲ್‌ ಶುಲ್ಕವನ್ನು ಪ್ರಯಾಣಿಕರಿಂದಲೇ ವಸೂಲಿ ಮಾಡಬಹುದು ಎಂದೂ ಆದೇಶ ಹೇಳಿದೆ.

2018ರಲ್ಲಿ ಹೊರಡಿಸಿದ್ದ ಆದೇಶದಲ್ಲಿ ಬೆಂಗಳೂರು ನಗರ ವ್ಯಾಪ್ತಿ ಮತ್ತು ಬಿಬಿಎಂಪಿ ವ್ಯಾಪ್ತಿಯಿಂದ 25 ಕಿ.ಮೀ.ವರೆಗಿನ ಪರಿಧಿಯಲ್ಲಿ ಟ್ಯಾಕ್ಸಿ ಪ್ರಯಾಣ ದರವನ್ನು ಹೆಚ್ಚಿಸಲಾಗಿತ್ತು. ಪರಿಷ್ಕೃತ ಆದೇಶದಲ್ಲಿ ಬಿಬಿಎಂಪಿ ವ್ಯಾಪ್ತಿಯನ್ನೂ ಒಳಗೊಂಡಂತೆ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳ ವ್ಯಾಪ್ತಿಗೂ ಅನ್ವಯವಾಗುವಂತೆ ದರವನ್ನು ಹೆಚ್ಚಿಸಲಾಗಿದೆ.

ADVERTISEMENT

ಇಂಧನ ಬೆಲೆ ಮತ್ತು ವಾಹನ ನಿರ್ವಹಣಾ ವೆಚ್ಚ ಗಣನೀಯವಾಗಿ ಹೆಚ್ಚಾಗುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ತಕ್ಷಣದಿಂದಲೇ ನೂತನ ದರ ಜಾರಿಗೆ ಬರಲಿದೆ ಆದೇಶ ಹೇಳಿದೆ.

ಸಮಯದ ಆಧಾರದಲ್ಲಿ ಹೆಚ್ಚು ಹಣ ಕೇಳದೆ, ಕಿ.ಮೀ. ಆಧಾರದಲ್ಲಿ ಸರ್ಕಾರ ನಿಗದಿಪಡಿಸಿದ ಹಣವನ್ನು ಮಾತ್ರ ತೆಗೆದುಕೊಳ್ಳಬೇಕು ಎಂದು ನಿರ್ಬಂಧ ವಿಧಿಸಲಾಗಿದೆ.

ಕಾಯುವಿಕೆ ದರಗಳನ್ನು ಮೊದಲಿನ 20 ನಿಮಿಷಗಳವರೆಗೆ ಉಚಿತವಾಗಿ, ನಂತರದ ಪ್ರತಿ 15 ನಿಮಿಷಗಳಿಗೆ ₹10ರಂತೆ ನಿಗದಿ ಪಡಿಸಲಾಗಿದೆ.

ಕನಿಷ್ಠ ಮತ್ತು ಗರಿಷ್ಠ ದರವನ್ನು ಸರ್ಕಾರ ನಿಗದಿ ಪಡಿಸಿದ್ದು, ಸ್ಥಳೀಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ಆಯಾ ವ್ಯಾಪ್ತಿಯಲ್ಲಿ ದರ ನಿಗದಿ ಮಾಡಬಹುದಾದ ಅವಕಾಶವನ್ನು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.