
ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಗೆ ಶಿವರಾಜ ತಂಗಡಗಿ ಪುಷ್ಪಾರ್ಚನೆ ಮಾಡಿದರು. ಕೆ.ಎಂ. ಗಾಯತ್ರಿ, ರಾಣಿ ಸತೀಶ್ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಮೊಬೈಲ್ ಗೀಳಿಗೆ ಬಿದ್ದಿರುವ ಇಂದಿನ ಯುವ ಪೀಳಿಗೆಗೆ ಓದಿನ ರುಚಿ ಹತ್ತಿಸಿ, ನಾಡಿನ ಇತಿಹಾಸದ ಮಹನೀಯರ ಬಗ್ಗೆ ತಿಳಿಸುವ ಅಗತ್ಯವಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು.
ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯುವ ಜನತೆಗೆ ಮೊಬೈಲ್ ಒಂದೇ ದುನಿಯಾ ಆಗಿದೆ. ಇದು ನಿಜಕ್ಕೂ ದುರದೃಷ್ಟಕರ. ಒಂದು ಕುಟುಂಬದಲ್ಲಿ ಪೋಷಕರು ಮತ್ತು ಮಕ್ಕಳು ಒಟ್ಟಿಗೆ ಕುಳಿತಿದ್ದರೂ ಒಬ್ಬರನ್ನೊಬ್ಬರು ಮಾತನಾಡಿಸದ ಸ್ಥಿತಿ ನಿರ್ಮಾಣವಾಗಿದೆ’ ಎಂದರು.
‘ಮಹನೀಯರ ಜಯಂತಿಗಳನ್ನು ಆಚರಿಸಿ ವಿದ್ಯಾರ್ಥಿಗಳು ಹಾಗೂ ಯುವ ಪೀಳಿಗೆಗೆ ಇತಿಹಾಸದ ವಾಸ್ತವ ಸ್ಥಿತಿಯನ್ನು ತಿಳಿಸಬೇಕು’ ಎಂದು ಹೇಳಿದರು.
‘ಹೆಣ್ಣೆಂದರೆ ಶಕ್ತಿದೇವತೆ. ಹೆಣ್ಣೊಬ್ಬಳು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬ ಪರಮಸತ್ಯವನ್ನು ಜಗತ್ತಿಗೆ ಸಾರಿದ ನಮ್ಮ ಕನ್ನಡ ಮಣ್ಣಿನ ಹೆಣ್ಣುಮಗಳು ಚನ್ನಮ್ಮ. ಅವರು ಶೌರ್ಯ, ಧೈರ್ಯ, ತ್ಯಾಗ, ರಾಜನೀತಿ, ಮಾತೃವಾತ್ಸಲ್ಯ ಮುಂತಾದ ಸದ್ಗುಣಗಳ ಖನಿ. ಎಂದೆಂದಿಗೂ ಕನ್ನಡದ ಹೆಣ್ಣುಮಕ್ಕಳ ಪ್ರತಿನಿಧಿ’ ಎಂದರು.
‘ಸಮಸಮಾಜದ ಸಾಕಾರಕ್ಕೆ ಮುನ್ನುಡಿಯನ್ನು ಅಂದೇ ಬರೆದಿದ್ದ ರಾಣಿ ಚನ್ನಮ್ಮನವರಂಥ ವೀರವನಿತೆಯರು ಉದಿಸಿದ ಕನ್ನಡ ನಾಡು ಧನ್ಯ. ಆ ವೀರಮಾತೆಯ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸದಾ ಕಾಯಕ ಮಾಡಿ, ಜೀವನ ಸಾರ್ಥಕಪಡಿಸಿಕೊಳ್ಳೋಣ’ ಎಂದರು.
ಮಾಜಿ ಸಚಿವೆ ರಾಣಿ ಸತೀಶ್, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ್ ಮೂರ್ತಿ, ಲೇಖಕ ಮಹಾಂತೇಶ ಬಿರಾದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ದೇವಿ, ಜಂಟಿ ನಿರ್ದೇಶಕರಾದ ಬನಶಂಕರಿ ಅಂಗಡಿ, ಬಲವಂತರಾಯ ಪಾಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.