ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕುಸಿತ ಕಂಡ ಹಿನ್ನೆಲೆಯಲ್ಲಿ ಖಾಲಿ ಇರುವ 5267 ಶಿಕ್ಷಕರನ್ನು ನೇಮಕ ಮಾಡಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸಲು ನಮ್ಮ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಮಾಜ ಕಲ್ಯಾಣ, ಬಿಸಿಎಂ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ವತಿಯಿಂದ ಹೊಸದಾಗಿ ವಸತಿ ಶಾಲೆ ಹಾಗೂ ವಸತಿ ನಿಲಯಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಮಂಗಳವಾರ ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಲು ಆದೇಶ ಹೊರಡಿಸಲಾಗಿದ್ದು, ಒಂದರ ವಾರದಲ್ಲಿ ಹುದ್ದೆ ಸಹಿತ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗುವುದು ಎಂದು ಪ್ರಕಟಿಸಿದರು.
ಕಲ್ಯಾಣ ಕರ್ನಾಟಕ ಭಾಗದ 16 ನೂತನ ತಾಲ್ಲೂಕುಗಳಲ್ಲಿ ಹೊಸದಾಗಿ 'ಪ್ರಜಾಸೌಧ' ಹೊಸ ತಾಲ್ಲೂಕು ಆಡಳಿತ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆಯ ಶಾಖೆಯನ್ನು ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಲಾಗಿದೆ. ಆದರೂ ಏಮ್ಸ್ ಮಂಜೂರು ಮಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಅವರು ಕೇಂದ್ರದ ನಡೆಗೆ ಬೇಸರ ವ್ಯಕ್ತಪಡಿಸಿದರು.
ಅಲ್ಲದೇ, ಕಲಬುರಗಿ, ಬೀದರ್‌ನ ಜನವಸತಿ ಪ್ರದೇಶಗಳಿಗೆ ₹ 7 ಸಾವಿರ ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಕೇಂದ್ರದ ಪಾಲು ಬಿಡುಗಡೆಯ ನಿರೀಕ್ಷೆಯಲ್ಲಿದ್ದೇವೆ ಎಂದರು.
ಈ ವರ್ಷಾಂತ್ಯದಲ್ಲಿ ಬಸವ ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪದ ಉದ್ಘಾಟನೆ ನೆರವೇರಿಸಲಾಗುವುದು. ₹ 100 ಕೋಟಿ ಮೊತ್ತದ ಅಂಜನಾದ್ರಿ ಬೆಟ್ಟತಯ ಅಭಿವೃದ್ಧಿ ಕಾಮಗಾರಿಗಳಿಗೆ ಮೊದಲ ಹಂತದಲ್ಲಿ ₹ 10 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.
ಜನರ ಬದುಕು ಹಸನುಗೊಳಿಸಲು ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ₹ 1 ಲಕ್ಷ ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.