ADVERTISEMENT

10,611 ಪ್ರಾಥಮಿಕ ಶಿಕ್ಷಕರ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 19:29 IST
Last Updated 5 ಮಾರ್ಚ್ 2019, 19:29 IST
   

ಬೆಂಗಳೂರು: ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಖಾಲಿ ಇರುವ 10,611 ಪದವೀಧರ ಪ್ರಾಥಮಿಕ ಶಿಕ್ಷಕ ವೃಂದದ ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಇದಕ್ಕಾಗಿ ಮೇ 18 ರಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.

ಈ ಹುದ್ದೆಗಳನ್ನು ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಪಿ.ಸಿ.ಜಾಫರ್‌ ತಿಳಿಸಿದ್ದಾರೆ.

ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8 ನೇ ತರಗತಿ) ವೃಂದದ ಹುದ್ದೆಗಳಿಗೆ ಅನ್ವಯವಾಗುವ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅನುಸಾರ ಅರ್ಹ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಇದೇ 11 ರಿಂದ ಕೇಂದ್ರೀಕೃತ ದಾಖಲಾತಿ ಘಟಕದ ವೆಬ್‌ಸೈಟ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಏಪ್ರಿಲ್‌ 10 ಕಡೆಯ ದಿನವಾಗಿದೆ.

ADVERTISEMENT

ಅಭ್ಯರ್ಥಿಗಳು ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ ಆನ್‌ಲೈನ್‌ ಮೂಲಕ ಮಾತ್ರ ಸಲ್ಲಿಸಬೇಕು. ಇತರೆ ಯಾವುದೇ ವಿಧಾನದಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇಲ್ಲ ಎಂದು ಜಾಫರ್‌ ಸ್ಪಷ್ಟಪಡಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕಗಳು: 1 ನೇ ಪರೀಕ್ಷೆ ಹೈದ್ರಾಬಾದ್‌– ಕರ್ನಾಟಕ ಪ್ರದೇಶದ ಜಿಲ್ಲೆಗಳ ಶೇ 80 ಸ್ಥಳೀಯ ವೃಂದದ ಮತ್ತು ಬೆಂಗಳೂರು ಬಿಬಿಎಂಪಿ ಪ್ರದೇಶದ ವ್ಯಾಪ್ತಿಯ ಶಾಲೆಗಳ ಶೇ 8 ರಷ್ಟು ರಾಜ್ಯ ಮಟ್ಟದ ಸ್ಥಳೀಯ ವೃಂದದ ಹುದ್ದೆಗಳಿಗೆ ಕ್ರಮವಾಗಿ ಮೇ 18 ಮತ್ತು 19 ರಂದು ನಡೆಯಲಿದೆ.

2 ನೇ ಪರೀಕ್ಷೆ ಹೈದ್ರಾಬಾದ್‌– ಕರ್ನಾಟಕ ಪ್ರದೇಶದ ಜಿಲ್ಲೆಗಳ ಶೇ 20, ಬೆಂಗಳೂರು ಬಿಬಿಎಂಪಿ ಪ್ರದೇಶದ ವ್ಯಾಪ್ತಿಯ ಶಾಲೆಗಳ ಶೇ 92 ರ ಮಿಕ್ಕುಳಿದ ವೃಂದದ ಮತ್ತು ಇತರೆ ಜಿಲ್ಲೆಗಳ ಶೇ 100 ಹುದ್ದೆಗಳಿಗೆ ಮೇ 25 ಮತ್ತು 26 ರಂದು ನಡೆಯಲಿದೆ.

ಹೆಚ್ಚಿನ ವಿವರ ಮತ್ತು ನೇಮಕಾತಿ ಅಧಿಸೂಚನೆಗಳು ಇಲಾಖಾ ವೆಬ್‌ಸೈಟ್‌ http://schooleducation.kar.nic.in ನಲ್ಲಿ ನೀಡಲಾಗುವ ಲಿಂಕ್‌ ಸೈಟ್‌ನಲ್ಲಿ ಇದೇ 6 ರಿಂದ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.