ಕರ್ನಾಟಕ ಲೋಕಾಯುಕ್ತ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) ನಿಯೋಜನೆ ಮೇರೆಗೆ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದ ಎನ್. ತೇಜಸ್ ಕುಮಾರ್ ಅವರ ಮನೆಯ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ₹26.65 ಕೋಟಿ ಮೊತ್ತದ ಆಸ್ತಿ ಪತ್ತೆ ಮಾಡಿದ್ದಾರೆ.
ತೇಜಸ್ ಅವರು ಈಗ ಅರಣ್ಯ ಇಲಾಖೆಯ ಶಿವಮೊಗ್ಗ ವಿಭಾಗದ ಮ್ಯಾನೇಜರ್ ಹುದ್ದೆಗೆ ವರ್ಗಾವಣೆಯಾಗಿದ್ದು, ಇನ್ನಷ್ಟೇ ವರದಿ ಮಾಡಿಕೊಳ್ಳಬೇಕಿದೆ.
ತೇಜಸ್ ಅವರು ತಮ್ಮ ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಬಗ್ಗೆ ಬೆಂಗಳೂರು ನಗರ–1 ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎಸ್‌ಪಿ ಶಿವಪ್ರಕಾಶ್ ದೇವರಾಜ್ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಸಿಬ್ಬಂದಿ ಗುರುವಾರ ಐದು ಸ್ಥಳಗಳಲ್ಲಿ ದಾಳಿ ನಡೆಸಿದ್ದರು.
ಈ ವೇಳೆ 14 ಎಕರೆ ಕೃಷಿ ಜಮೀನು, 8 ಮನೆಗಳು, 4 ನಿವೇಶನಗಳು ಸೇರಿ ಒಟ್ಟು ₹25.63 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ₹92 ಲಕ್ಷ ಮೌಲ್ಯದ ವಾಹನಗಳನ್ನು ಹೊಂದಿದ್ದಾರೆ. ಅಧಿಕಾರಿ ಮತ್ತು ಸಂಬಂಧಿಗಳ ಮನೆಯಲ್ಲಿ ಶೋಧದ ವೇಳೆ ಚಿನ್ನ ಮತ್ತು ಬೆಳ್ಳಿಯ ವಸ್ತುಗಳು ಪತ್ತೆಯಾಗಿಲ್ಲ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.