ADVERTISEMENT

10 ರಾಜ್ಯ ಹೆದ್ದಾರಿಗಳಲ್ಲಿ ಟೋಲ್‌ಗೆ ಟೆಂಡರ್

16 ಟೋಲ್ ಶುಲ್ಕ ಪರಿಷ್ಕರಣೆ ಸದ್ಯಕ್ಕಿಲ್ಲ lಸಚಿವ ಸಂಪುಟ ಒಪ್ಪಿದ ಬಳಿಕವೇ ಜಾರಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 22:09 IST
Last Updated 31 ಮಾರ್ಚ್ 2021, 22:09 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಅಭಿವೃದ್ಧಿಪಡಿಸಿರುವ 10 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ಸಿದ್ಧತೆ ನಡೆಸಿದ್ದು, ಇದಕ್ಕಾಗಿ ವಿವಿಧ ಏಜೆನ್ಸಿಗಳಿಂದ ಟೆಂಡರ್‌ ಆಹ್ವಾನಿಸಲಾಗಿದೆ.

ಟೋಲ್‌ ಸಂಗ್ರಹಕ್ಕೆ ಸರ್ಕಾರದ ಅನುಮತಿ ನೀಡಬೇಕಿದ್ದು, ಈ ಸಂಬಂಧ ಪ್ರಸ್ತಾವನೆಗಳು ಬಂದಿವೆ. ಅಭಿವೃದ್ಧಿಪಡಿಸಿರುವ ಹೆದ್ದಾರಿಗಳ ಸ್ಥಿತಿ ಮತ್ತು ಗುಣಮಟ್ಟ ಪರಿಶೀಲನೆ ನಡೆಸಿದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು
‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

’ಕೆಆರ್‌ಡಿಸಿಎಲ್‌ ನಿರ್ಮಿಸಿರುವ ರಸ್ತೆಗಳು ಒಪ್ಪಂದಕ್ಕೆ ಅನುಗುಣವಾಗಿ ಗುಣಮಟ್ಟ ಮತ್ತು ಸೌಲಭ್ಯಗಳನ್ನು ಹೊಂದಿವೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲಾಗುವುದು. ಆ ಬಳಿಕವೇ ಸರ್ಕಾರ ಟೋಲ್‌ ಸಂಗ್ರಹಕ್ಕೆ ಒಪ್ಪಿಗೆ ನೀಡಬೇಕೊ, ಬಿಡಬೇಕೊ ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಇದಕ್ಕೆ ಒಂದಷ್ಟು ಸಮಯ ಹಿಡಿಯುತ್ತದೆ’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೃಷ್ಣಾರೆಡ್ಡಿ ಹೇಳಿದರು.

ADVERTISEMENT

’ಕೆಆರ್‌ಡಿಸಿಎಲ್‌ ವಿವಿಧ ಏಜೆನ್ಸಿಗಳಿಂದ ಸಾವಿರಾರು ಕೋಟಿ ಸಾಲ ತಂದು ರಸ್ತೆಗಳನ್ನು ಅಭಿವೃದ್ಧಿಪಡಿಸಿವೆ. ಸಾಲವನ್ನು ತೀರಿಸಬೇಕಾದ ಕಾರಣ ಟೋಲ್‌ ಸಂಗ್ರಹ ಅನಿವಾರ್ಯ’ ಎಂದು ಅವರು ಹೇಳಿದರು.

’ಈಗಾಗಲೇ ಟೋಲ್‌ ಸಂಗ್ರಹಿಸುತ್ತಿರುವ ಹೆದ್ದಾರಿಗಳಲ್ಲಿ ಶುಲ್ಕವನ್ನು ಪರಿಷ್ಕರಿಸಲು ಏಜೆನ್ಸಿಗಳು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿವೆ. ಪ್ರತಿ ವರ್ಷವೂ ಶುಲ್ಕ ಪರಿಷ್ಕರಣೆ ಆಗುತ್ತದೆ. ಪರಿಷ್ಕರಣೆ ಎಂದರೆ ಹೆಚ್ಚಿಸಬೇಕೆಂದೇನೂ ಇಲ್ಲ, ಕಡಿಮೆ ಮಾಡಬಹುದಾಗಿದೆ. ಪರಿಷ್ಕರಣೆಗೆ ಒಪ್ಪಿಗೆ ನೀಡದ ಕಾರಣ ಏಪ್ರಿಲ್‌ 1 ರಿಂದ ಪರಿಷ್ಕೃತ ದರ ಜಾರಿ ಆಗುವುದಿಲ್ಲ’ ಎಂದರು.

ಟೋಲ್‌ ಬೂತ್‌ಗಳ ನಿರ್ಮಾಣ: ಟೆಂಡರ್‌ ಪಡೆಯುವ ಏಜೆನ್ಸಿಗಳು ಟೋಲ್‌ ಬೂತ್‌ ನಿರ್ಮಿಸಿ ಶುಲ್ಕ ಸಂಗ್ರಹಿಸಬೇಕು. ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಆ ವೇಳೆಗೆ ಸರ್ಕಾರದ ಒಪ್ಪಿಗೆಯೂ ಸಿಗಬಹುದು. ಆ ಬಳಿಕವೇ ಟೋಲ್‌ ಸಂಗ್ರಹ ಆರಂಭಿಸಲಾಗುತ್ತದೆ ಎಂದು ಕೆಆರ್‌ಡಿಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದರು.

ಕೆಆರ್‌ಡಿಸಿಎಲ್‌ ಒಟ್ಟು 26 ಹೆದ್ದಾರಿಗಳನ್ನು ನಿರ್ಮಿಸಿದ್ದು, ಈಗಾಗಲೇ 16 ಹೆದ್ದಾರಿಗಳಲ್ಲಿ ಟೋಲ್‌ ಸಂಗ್ರಹಿಸಲಾಗುತ್ತಿದೆ. 10 ಹೆದ್ದಾರಿಗಳನ್ನು ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣೆ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಇವುಗಳನ್ನು ಟೋಲ್‌ ವ್ಯಾಪ್ತಿಗೆ ತರಲಾಗುತ್ತಿದೆ ಎಂದರು.

ಬಳಕೆದಾರರ ಆಕ್ರೋಶ: ರಾಷ್ಟ್ರೀಯ ಹೆದ್ದಾರಿ ಅಲ್ಲದೆ, ರಾಜ್ಯ ಹೆದ್ದಾರಿಗಳಲ್ಲೂ ಟೋಲ್‌ ಸಂಗ್ರಹದ ಬಗ್ಗೆ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್ಥಿಕ ಸಂಕಷ್ಟದ ಮಧ್ಯೆಯೇ ಇನ್ನಷ್ಟು ಹೆದ್ದಾರಿಗಳಲ್ಲಿ ಟೋಲ್‌ ಸಂಗ್ರಹಿಸುವುದರಿಂದ ಹೊರೆ ಆಗುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.