ADVERTISEMENT

ಬಿಲ್‌ ಪಾವತಿಸದೇ ಕೈಕೊಟ್ಟ ಸರ್ಕಾರ ! ಪಠ್ಯ ಪುಸ್ತಕ ಮುದ್ರಕರ ಅಳಲು

ಐದು ತಿಂಗಳು ಕಳೆದರೂ ಹಣ ಪಾವತಿ ಇಲ್ಲ; ಪಠ್ಯ ಪುಸ್ತಕ ಮುದ್ರಕರ ಅಳಲು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 21:02 IST
Last Updated 4 ಡಿಸೆಂಬರ್ 2022, 21:02 IST
   

ಬೆಂಗಳೂರು: ‘ಕಲಿಕಾ ಚೇತರಿಕೆ’ ಹೆಸರಿನ ಶಿಕ್ಷಕರ ಕೈಪಿಡಿ ಮುದ್ರಣ ಮಾಡಿ ಬಿಲ್‌ ಸಲ್ಲಿಸಿದರೆ ಕೇವಲ 48 ಗಂಟೆಗಳೊಳಗೆ ಹಣ ಪಾವತಿ ಮಾಡುವುದಾಗಿ ಮುದ್ರಕರಿಗೆ ಭರವಸೆ ನೀಡಿದ್ದ ಸಮಗ್ರ ಶಿಕ್ಷಣ ಇಲಾಖೆ, 5 ತಿಂಗಳು ಕಳೆದರೂ ಹಣ ಪಾವತಿ ಮಾಡದೇ ಸತಾಯಿಸುತ್ತಿದೆ ಎಂದು ಪಠ್ಯ ಪುಸ್ತಕ ಮುದ್ರಕರು ದೂರಿದ್ದಾರೆ.

1 ರಿಂದ 10 ನೇ ತರಗತಿವಿದ್ಯಾರ್ಥಿಗಳಿಗೆ ಬೋಧಿಸಲು ಕಲಿಕಾ ಚೇತರಿಕೆ ಕೈಪಿಡಿ ಮುದ್ರಿಸಲು ಸಮಗ್ರ ಶಿಕ್ಷಣ ಇಲಾಖೆ ಏಪ್ರಿಲ್‌ನಲ್ಲಿ ಟೆಂಡರ್‌ ಕರೆದು ಕಾರ್ಯಾದೇಶ ನೀಡಿತ್ತು. 45 ದಿನಗಳಲ್ಲಿ ರಾಜ್ಯದಲ್ಲಿರುವ ಶಿಕ್ಷಕರಿಗೆ ಪೂರೈಕೆ ಮಾಡಬೇಕಿರುವುದರಿಂದ, ತಕ್ಷಣವೇ ಮುದ್ರಿಸಿಕೊಡಬೇಕು ಎಂದು ಇಲಾಖೆ ಒತ್ತಡ
ಹೇರಿತ್ತು.

ತಮ್ಮ ಹೆಸರು ಬಹಿರಂಗಪಡಿಸಲು ಬಯಸದ ಮುದ್ರಕರ ಸಂಘದ ಪ್ರತಿನಿಧಿಯೊಬ್ಬರು ‘ಪ್ರಜಾವಾಣಿ’ ಜತೆ ಮಾತನಾಡಿ, ‘ಪುಸ್ತಕಗಳನ್ನು ತ್ವರಿತಗತಿಯಲ್ಲಿ ಹಂಚುವ ಉದ್ದೇಶದಿಂದ ಟೆಂಡರ್‌ ಕರೆದ ಅಧಿಕಾರಿಗಳು 48 ಗಂಟೆಗಳಲ್ಲಿ ಬಿಲ್‌ ಪಾವತಿ ಮಾಡುವ ಭರವಸೆ ನೀಡಿದ್ದರು. ಟೆಂಡರ್‌ ನಿಯಮಾವಳಿ ಪ್ರಕಾರ ಶೇ 80 ರಷ್ಟು ಹಣ ಪಾವತಿ ಮಾಡಿ, ಉಳಿದ ಶೇ 20 ರಷ್ಟು ಪಾವತಿ ಮಾಡುವ ಮೊದಲು ಅಗತ್ಯವಿರುವ ಎಲ್ಲ ವರದಿಗಳನ್ನು ತರಿಸಿಕೊಂಡು ಪೂರ್ತಿ ಚುಕ್ತಾ ಮಾಡಬೇಕು’ ಎಂದು ತಿಳಿಸಿದರು.

ADVERTISEMENT

‘ಇಲಾಖೆ ಮಾತಿಗೆ ತಪ್ಪಿದ್ದರಿಂದ ಒತ್ತಡ ತರಬೇಕಾಯಿತು. ಬಳಿಕ ಕಷ್ಟದಿಂದ ಶೇ 40 ರಷ್ಟು ಪಾವತಿ ಮಾಡಿ ದರು. ಇನ್ನೂ ಶೇ 60 ರಷ್ಟು ಹಣ ಪಾವತಿ ಮಾಡಬೇಕಾಗಿದೆ. ಸುಮಾರು ₹67 ಕೋಟಿ ಪಾವತಿ ಮಾಡಬೇಕಾ ಗಿದೆ. ಬ್ಯಾಂಕ್‌ನಿಂದ ಸಾಲ ಮಾಡಿ ಮುದ್ರಣಕ್ಕೆ ಕೈ ಹಾಕಿದ್ದೇವೆ. ಒಟ್ಟು ಬಿಲ್‌ ಮೊತ್ತದಲ್ಲಿ ₹20 ಕೋಟಿ ಜಿಎಸ್‌ಟಿಯನ್ನು ಸರ್ಕಾರಕ್ಕೆ ಪಾವತಿ ಮಾಡಬೇಕು. ಬ್ಯಾಂಕ್‌ಗೆ ನಿಗದಿತ ಸಮಯಕ್ಕೆ ಸಾಲ ಮರುಪಾವತಿ ಮಾಡದ ಕಾರಣ ಶೇ 10 ರಷ್ಟು ದಂಡವನ್ನೂ ಪಾವತಿಸಬೇಕಾಗಿದೆ. ಜಿಎಸ್‌ಟಿ ಪಾವತಿ ತಡವಾದರೆ ಅದಕ್ಕೂ ದಂಡ ಕಟ್ಟಬೇಕು’ ಎಂದು ಬೇಸರ ವ್ಯಕ್ತಪಡಿಸಿದರು.

‘ಇಲಾಖೆ ಟೆಂಡರ್‌ನಲ್ಲಿ ಸೂಚಿಸಿದ ದರ ಕೊಟ್ಟಿಲ್ಲ, ಇಲಾಖೆಯೇ ಒಂದು ದರ ನಿಗದಿ ಮಾಡಿ ಕಾರ್ಯಾದೇಶ ನೀಡಿದೆ. ಮುದ್ರಣ ಕಾಗದದ ಅಭಾವ ಮತ್ತು ಅದರ ದರವೂ ದುಬಾರಿ ಆಗಿರುವುದರಿಂದ ಮುದ್ರಕರಿಗೆ ವಿಪರೀತ ನಷ್ಟವುಂಟಾಗಿದೆ. ಸರ್ಕಾರ ಹಣ ಪಾವತಿ ಮಾಡುವುದು ತಡ ಮಾಡಿರುವುದರಿಂದ ನಷ್ಟಕ್ಕೆ ತುತ್ತಾಗಿದ್ದೇವೆ. ಹಣದ ಕೊರತೆಯಿದೆ ಎನ್ನುತ್ತಾರೆ’ ಎಂದು ಅಳಲು ತೋಡಿಕೊಂಡರು. ‘ಈಗಾಗಲೇ ಮೊದಲ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಎರಡನೇ ಕಂತಿನ ಹಣ ಬಿಡುಗಡೆ ಮಾಡಬೇಕಾಗಿದೆ. ಆದಷ್ಟು ಬೇಗ ಪಾವತಿ ಮಾಡಲಾಗುವುದು’ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಸಚಿವ ಬಿ.ಸಿ.ನಾಗೇಶ್ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.