ADVERTISEMENT

ಕುಶಾಲನಗರ | ಹಾರಂಗಿಗೆ ಜಲಾಶಯಕ್ಕೆ ಒಳ ಹರಿವು ಆರಂಭ 

ಜಲಾನಯನ ಪ್ರದೇಶದಲ್ಲಿ ಆಗಾಗ್ಗೆ ಮಳೆ, ಬೇಸಿಗೆ ಹಂಗಾಮಿಗೆ ಅನುಕೂಲ

ರಘು ಹೆಬ್ಬಾಲೆ
Published 17 ಮೇ 2020, 19:30 IST
Last Updated 17 ಮೇ 2020, 19:30 IST
ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಲ್ಲಿ ನೀರಿನ‌ ಒಳ ಹರಿವಿನಲ್ಲಿ ಏರಿಕೆ ಕಂಡು ಬರುತ್ತಿದೆ.
ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಲ್ಲಿ ನೀರಿನ‌ ಒಳ ಹರಿವಿನಲ್ಲಿ ಏರಿಕೆ ಕಂಡು ಬರುತ್ತಿದೆ.   

ಕುಶಾಲನಗರ: ಉತ್ತರ ಕೊಡಗಿನ ರೈತರ ಜೀವನಾಡಿಯಾದ ಹಾರಂಗಿ ಜಲಾಶಯಕ್ಕೆ ನೀರಿನ ಒಳ ಹರಿವು ಆರಂಭವಾಗಿದೆ. ನೀರಿನ ಕೊರತೆಯಿಂದ ಭಣಗುಡುತ್ತಿದ್ದ ಜಲಾಶಯಕ್ಕೆ ಇದೀಗ ಜೀವಕಳೆ ಕಂಡುಬರುತ್ತಿದೆ.

ಹಾರಂಗಿ ಜಲಾನಯನ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ಮಳೆ ಬರುತ್ತಿದ್ದು, ಜಲಾಶಯಕ್ಕೆ 108 ಕ್ಯುಸೆಕ್‌ ನೀರು ಹರಿದು ಬರುತ್ತಿದೆ.

ಕಳೆದ ವರ್ಷ ಜೂನ್‌ನಿಂದಲೇ ಮಳೆಗಾಲ ಆರಂಭಗೊಂಡಿತು. ನಂತರ, ಆಗಸ್ಟ್‌ನಲ್ಲಿ ತೀವ್ರಗೊಂಡ ಮಳೆಯಿಂದ ಪ್ರಾಕೃತಿಕ ವಿಕೋಪ ಉಂಟಾಯಿತು. ಅಣೆಕಟ್ಟು ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಜಲಪ್ರಳಯ ಸೃಷ್ಟಿಯಾಗಿದೆ ಹಾರಂಗಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿತು.

ADVERTISEMENT

ಪ್ರಸಕ್ತ ವರ್ಷ ಮೇನಲ್ಲಿ ಆಗಾಗ್ಗೆ ಮಳೆ ಜೋರಾಗಿ ಬೀಳುತ್ತಿದೆ. ಮಳೆಗಾಲ‌ ಜೂನ್ ಮೊದಲ ವಾರದಿಂದಲೇ ಆರಂಭವಾಗುವ ವಾತಾವರಣ ಕಂಡುಬರುತ್ತಿದೆ.

ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ‌ ಜಲಾಶಯಕ್ಕೆ ನೀರಿನ‌ ಒಳಹರಿವು‌ ಆರಂಭಗೊಂಡಿದ್ದು, ಇದೀಗ ಜಲಾಶಯದಲ್ಲಿ 3.35 ಟಿಎಂಸಿ ನೀರು ಸಂಗ್ರಹಗೊಂಡಿದೆ. ಇದರಿಂದ ಅಚ್ಚುಕಟ್ಟು ವ್ಯಾಪ್ತಿಯ ರೈತರ ಮೊಗದಲ್ಲಿ ಮಂದಹಾಸ ಕಂಡುಬರುತ್ತಿದೆ. ಈ ಜಲಾಶಯದಿಂದ ಜಿಲ್ಲೆಯ 12 ಗ್ರಾಮಗಳು ಪ್ರಯೋಜನ ಪಡೆಯಲಿದ್ದು, ಜೊತೆಗೆ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಗಡಿಗ್ರಾಮಗಳಿಗೆ ಹೆಚ್ಚಿನ ಪ್ರಯೋಜನವಾಗುತ್ತಿದೆ.

ನೀರಿನ‌ ಮಟ್ಟದಲ್ಲಿ ಏರಿಕೆ:ಜಲಾಶಯ ವ್ಯಾಪ್ತಿಯ ಜಲಾನಯನ ಪ್ರದೇಶದಲ್ಲಿ ಮೇಯಿಂದಲೇ ಮಳೆ ಆರಂಭಗೊಂಡಿದ್ದು, ದಿನದಿಂದ ದಿನಕ್ಕೆ ನೀರಿನ ಒಳಹರಿವಿನಲ್ಲಿ ಏರಿಕೆ ಕಂಡು ಬರುತ್ತಿದೆ.

2,859 ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಭಾನುವಾರ ಬೆಳಿಗ್ಗೆ 6ಗಂಟೆಗೆ 2,830.26 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

ಜಲಾಶಯಕ್ಕೆ 108 ಕ್ಯುಸೆಕ್‌ ನೀರಿನ ಒಳ ಹರಿವು ಇದ್ದು, ನದಿಗೆ 20 ಕ್ಯುಸೆಕ್‌ ಹಾಗೂ ನಾಲೆಗೆ 50 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಇದೀಗ ಜಲಾಶಯದಲ್ಲಿ 3.35 ಟಿಎಂಸಿ ನೀರು ಸಂಗ್ರಹಗೊಂಡಿದೆ.

ಕಳೆದ ವರ್ಷ ಇದೇ ಅವದಿಯಲ್ಲಿ 2,805.56 ಅಡಿ ನೀರಿತ್ತು. 1.54 ಟಿಎಂಸಿಯಷ್ಟು ನೀರು ಮಾತ್ರ ಸಂಗ್ರಹ ಇತ್ತು. ಇದರಲ್ಲಿ ಕೇವಲ 0.79 ಟಿಎಂಸಿ ನೀರು ಬಳಕೆಗೆ ಲಭ್ಯವಿತ್ತು. 96 ಕ್ಯುಸೆಕ್‌ ಒಳಹರಿವು ಇತ್ತು. ಇದರಲ್ಲಿ ನಾಲೆಗೆ 25 ಕ್ಯುಸೆಕ್‌ ಮಾತ್ರ ಹರಿಸಲಾಗುತ್ತಿತ್ತು. ನದಿಗೆ ನೀರು ಸ್ಥಗಿತಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.