ADVERTISEMENT

ಸಂದರ್ಶನ: ಜಲ ವಿವಾದ ಕಾಯ್ದೆಯ ಆಶಯ, ಸ್ವರೂಪ ಬದಲಾಗಬೇಕು –ಸಚಿವ ಬಸವರಾಜ ಬೊಮ್ಮಾಯಿ

ಅನುಭವ ಮಂಟಪ

ವೈ.ಗ.ಜಗದೀಶ್‌
Published 31 ಮಾರ್ಚ್ 2021, 22:26 IST
Last Updated 31 ಮಾರ್ಚ್ 2021, 22:26 IST
ಸಚಿವ ಬಸವರಾಜ ಬೊಮ್ಮಾಯಿ
ಸಚಿವ ಬಸವರಾಜ ಬೊಮ್ಮಾಯಿ   

ಅಂತರರಾಜ್ಯ ಜಲವಿವಾದ ಕಾಯ್ದೆಯನ್ನು ವಿವಾದವನ್ನು ಇತ್ಯರ್ಥಗೊಳಿಸುವ ಕಾಯ್ದೆ ಎಂಬ ರೀತಿಯಲ್ಲಿ ಬದಲಾಯಿಸಬೇಕಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ಒಂದು ಪೂರ್ಣಾವಧಿ ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಇರುವ ಬೊಮ್ಮಾಯಿ, ಕಾವೇರಿ ವ್ಯಾಜ್ಯದ ಕುರಿತು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ...

l ಕಾವೇರಿಯ ಹೆಚ್ಚುವರಿ ನೀರನ್ನು ವೈಗೈ ಮತ್ತು ಗುಂಡಾರ್‌ ನದಿಗೆ ಹರಿಸುವ ಯೋಜನೆಗೆ ತಮಿಳುನಾಡು ಚಾಲನೆ ನೀಡಿದೆ. ಕರ್ನಾಟಕದ ನಿಲುವೇನು?

ಈ ಯೋಜನೆಗೆ ಯಾವುದೇ ರೀತಿಯ ಮಾನ್ಯತೆ ಇಲ್ಲ. ಕೇಂದ್ರ ಸರ್ಕಾರ ಕೂಡ ಒಪ್ಪಿಗೆ ಕೊಟ್ಟಿಲ್ಲ. ಕಾವೇರಿ ನೀರಿನಲ್ಲಿ ಕರ್ನಾಟಕದ ನ್ಯಾಯಯುತ ಪಾಲು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಬದ್ಧ. ವೈಗೈ ಯೋಜನೆಗೆ ಸಂಬಂಧಿಸಿ ಈಗಾಗಲೇ ಆಕ್ಷೇಪಣೆಯನ್ನು ಕೇಂದ್ರ ಸರ್ಕಾರ, ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಲು ತೀರ್ಮಾನ ಮಾಡಿದ್ದೇವೆ. ಕಾನೂನು ತಜ್ಞರ ಜತೆ ಎರಡು ಸುತ್ತಿನ ಮಾತುಕತೆ ನಡೆದಿದೆ. ಎರಡನೆಯದಾಗಿ ಮಧುರೈ ಕೋರ್ಟ್‌ನಲ್ಲಿ ತಮಿಳುನಾಡಿನ ರೈತರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದಾರೆ. ಅದರಲ್ಲಿ ಕರ್ನಾಟಕ ಸರ್ಕಾರವನ್ನು ಪ್ರತಿವಾದಿಯಾಗಿ ಪರಿಗಣಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಲಿದ್ದು, ನಮ್ಮ ವಿರೋಧವನ್ನು ಅಲ್ಲಿಯೂ ಮಂಡಿಸುತ್ತೇವೆ.

ADVERTISEMENT

l ಮೇಕೆದಾಟು ಯೋಜನೆಯ ಹಣೆಬರಹ ಏನು?

90ರ ದಶಕದಲ್ಲೇ ರೂಪುಗೊಂಡ ಯೋಜನೆ ಇದಾಗಿದ್ದು, ಕರ್ನಾಟಕ ವಿದ್ಯುತ್ ನಿಗಮವು ವಿದ್ಯುತ್ ಉತ್ಪಾದನೆಗಾಗಿ ಯೋಜನೆ ರೂಪಿಸಿತ್ತು. 2012ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಅರಣ್ಯ ಪ್ರದೇಶ ಮುಳುಗಡೆಯನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸಿ, ಯೋಜನೆ ಅನುಷ್ಠಾನ ಮಾಡಲು ತಯಾರಿ ನಡೆದಿತ್ತು. ಕಡಿಮೆ ಎತ್ತರದ ಹಲವು ಕಿರು ಅಣೆಕಟ್ಟೆಗಳನ್ನು ಕಟ್ಟಿ ಮುಳುಗಡೆ ಪ್ರಮಾಣ ಕಡಿಮೆ ಮಾಡಿ, ನೀರಿನ ಸಂಪೂರ್ಣ ಬಳಕೆ ನಮ್ಮ ಉದ್ದೇಶವಾಗಿತ್ತು. ನಂತರ ಬಂದ ಸರ್ಕಾರ ಯೋಜನೆ ರೂಪಿಸಿದೆ. ಈಗ ತಮಿಳುನಾಡು ಆಕ್ಷೇಪಣೆ ಸಲ್ಲಿಸಿದೆ. ಆದರೆ, ಅವರ ಆಕ್ಷೇಪಣೆಗೆ ಆಧಾರವೇ ಇಲ್ಲ. ತಮಿಳುನಾಡಿಗೆ ಎಷ್ಟು ನೀರು ಬಿಡಬೇಕೋ ಅಷ್ಟನ್ನು ಬಿಟ್ಟು, ಹೆಚ್ಚು ಮಳೆ ಬಂದ ವರ್ಷದಲ್ಲಿ ಆ ನೀರನ್ನು ಸಂಗ್ರಹಿಸಿಟ್ಟುಕೊಂಡು ತಮಿಳುನಾಡಿಗೆ ನೀರು ಬೇಕಾದಾಗ ಬಿಡುವುದು ಇದರ ಉದ್ದೇಶ. ಜತೆಗೆ ಬೆಂಗಳೂರಿಗೆ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಯ ಉದ್ದೇಶವೂ ಇದೆ. ಇದು ತಮಿಳುನಾಡಿಗೂ ಅನುಕೂಲವಾದ ಯೋಜನೆ. ಸದ್ಯ ವಿಷಯ ಕೋರ್ಟ್‌ನಲ್ಲಿದೆ. ಅಲ್ಲಿಯೇ ವಾದ ಮಂಡಿಸಿ ತಮಿಳುನಾಡಿಗೆ ಮನವರಿಕೆ ಮಾಡಿಕೊಡುವ ಯತ್ನ ನಡೆಸುತ್ತೇವೆ.

l ವಿಳಂಬಕ್ಕೆ ಪರಿಹಾರ?

ಸಮಸ್ಯೆ ಇರುವುದು ಅಂತರರಾಜ್ಯ ಜಲವಿವಾದ ಕಾಯ್ದೆಯಲ್ಲಿ. ಈ ಕಾಯ್ದೆಯು ವಿವಾದಗಳನ್ನು ಸೃಷ್ಟಿಸಲು ನೆರವಾಗಿದೆಯೇ ವಿನಃ ವಿವಾದಗಳನ್ನು ಬಗೆಹರಿಸಲು ಸಹಾಯ ಮಾಡುತ್ತಿಲ್ಲ. 2011ರಲ್ಲಿ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಈ ಕಾಯ್ದೆಯ ಸ್ವರೂಪ ಬದಲಿಸಿ, ಅಂತರರಾಜ್ಯ ಜಲವಿವಾದ ಇತ್ಯರ್ಥ ಕಾಯ್ದೆ ಎಂದು ಬದಲಿಸಬೇಕೆಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ. ಜತೆಗೆ ಅಂತರರಾಜ್ಯ ಜಲ ವಿವಾದಗಳನ್ನು ಬಗೆಹರಿಸುವ ಪ್ರಕ್ರಿಯೆ, ನಿಯಮಗಳ ಸರಳೀಕರಣ, ತ್ವರಿತ ತೀರ್ಮಾನಕ್ಕೆ ದಾರಿ ಮಾಡುವ ಕ್ರಮ ಆಗಬೇಕಿದೆ. ಇದನ್ನು ಈಗಲೂ ಪ್ರತಿಪಾದಿಸುತ್ತೇನೆ.ಅಂತರರಾಜ್ಯ ನದಿಗಳ ನೀರಿನ ಹಂಚಿಕೆ ವಿವಾದ ಸೃಷ್ಟಿಯಾದಾಗ ಪ್ರತ್ಯೇಕ ನ್ಯಾಯಮಂಡಳಿ ರಚಿಸುವ ಪದ್ಧತಿ ಬಿಡಬೇಕು. ಒಂದು ನ್ಯಾಯ ಮಂಡಳಿ ರಚನೆಯಾದರೆ 10-12 ವರ್ಷ ಅದು ವಿವಾದಕ್ಕೆ ತಾರ್ಕಿಕ ಅಂತ್ಯ ನೀಡುವುದೇ ಇಲ್ಲ. ಅದರ ಬದಲು ಇಡೀ ದೇಶಕ್ಕೆ ಅನ್ವಯವಾಗುವ ಶಾಶ್ವತವಾದ ಜಲ ನ್ಯಾಯಮಂಡಳಿ ರಚಿಸಿ, ಯಾವುದೇ ವಿವಾದ ಬಂದರೂ ಒಂದೆರಡು ವರ್ಷದಲ್ಲಿ ಇತ್ಯರ್ಥ ಮಾಡುವ ವ್ಯವಸ್ಥೆ ರೂಪಿಸಬೇಕಾಗಿದೆ. ಹಾಗಾದಲ್ಲಿ ಮಾತ್ರ ವಿಳಂಬ ತಪ್ಪುತ್ತದೆ.

l ಒಂದು ಕಣಿವೆಯ ನೀರನ್ನು ಮತ್ತೊಂದು ಕಣಿವೆಗೆ ತೆಗೆದುಕೊಂಡು ಹೋಗುವಂತಿಲ್ಲ ಎಂಬುದು ಎಷ್ಟು ಸರಿ?

ಕೃಷ್ಣಾ ನದಿ ನೀರಿನಲ್ಲಿ ಆಂಧ್ರಕ್ಕೆ, ಕಾವೇರಿ ನೀರಿನಲ್ಲಿ ತಮಿಳುನಾಡು, ಕೇರಳಕ್ಕೆ ಪಾಲಿದೆ. ಒಂದು ನದಿ ಕಣಿವೆಯ ನೀರನ್ನು ಮತ್ತೊಂದು ಕಣಿವೆ ಪ್ರದೇಶಕ್ಕೆ ಹರಿಸಲು ಅವರು ಆಕ್ಷೇಪಣೆ ತೆಗೆಯುವುದು ಸ್ವಾಭಾವಿಕ. ಇಂತಹ ವಿಷಯಗಳು ಅಂತರರಾಜ್ಯ ಜಲವಿವಾದ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತವಲ್ಲ.

l ನಮ್ಮ ಪಾಲಿನ ಕಾವೇರಿ ನೀರಿನ ಸಮರ್ಪಕ ಬಳಕೆಗೆ ಏನು ಮಾಡಬೇಕು?

ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಲು ದಾರಿ ಇದೆ. ಮಹಾರಾಜರ ಅಣೆಕಟ್ಟೆಯಿಂದ 94 ಸಾವಿರ ಎಕರೆಗೆ ನೀರಾವರಿ ಒದಗಿಸಲಾಗಿದೆ. ಇಲ್ಲಿ 200-300 ವರ್ಷ ಹಳೆಯದಾದ ಅಣೆಕಟ್ಟೆಯಲ್ಲಿ ಹೂಳು ತುಂಬಿ, ನಾಲೆಗಳು ಹಾಳಾಗಿದ್ದವು, ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ 13 ಅಣೆಕಟ್ಟುಗಳು, ನಾಲೆಗಳ ಆಧುನೀಕರಣಕ್ಕೆ ಮುಂದಾಗಿದ್ದೆ. ಆಗಿನ ಕೇಂದ್ರ ಸರ್ಕಾರ (ಎನ್‌ಡಿಎ) ಅನುಮೋದನೆ ಕೊಡಲಿಲ್ಲ. ಹಾಗಾಗಿ, ರಾಜ್ಯ ಸರ್ಕಾರದ ಅನುದಾನ ಬಳಸಿ ಯೋಜನೆ ಅನುಷ್ಠಾನ ಮಾಡಿದೆವು. ಹೇಮಾವತಿ, ವಿ.ಸಿ. ನಾಲೆ ಸೇರಿದಂತೆ ಎಲ್ಲ ಕಡೆಗಳಲ್ಲಿ ಆಧುನೀಕರಣ, ಏತ ನೀರಾವರಿ ಯೋಜನೆ ಅನುಷ್ಠಾನ, ಕೆರೆ ತುಂಬಿಸುವ ಯೋಜನೆಗಳು, ಹೂಳು ತೆಗೆಯುವ ಕೆಲಸ ಆದರೆ ನೀರಿನ ಸಂಗ್ರಹಣೆ ಮತ್ತು ಸದ್ಬಳಕೆ ಆಗಲಿದೆ.ಇದರ ಜತೆಗೆ ನೀರಾವರಿ, ಕೃಷಿ, ತೋಟಗಾರಿಕೆ, ರೇಷ್ಮೆ ಹೀಗೆ ಎಲ್ಲ ಇಲಾಖೆಗಳನ್ನೂ ಒಳಗೊಂಡು ಕಾವೇರಿ ಕೃಷಿ ಉತ್ಪಾದನಾ ಯೋಜನೆ ರೂಪಿಸಿದರೆ ಕೃಷಿ ಉತ್ಪನ್ನ, ನೀರಿನ ಸದ್ಬಳಕೆ ಹೆಚ್ಚಿ, ರೈತರ ತಲಾದಾಯ ಕೂಡ ಏರಿಕೆಯಾಗಲಿದೆ.

l ನಿಮ್ಮ ಶಿಗ್ಗಾಂವಿ ಕ್ಷೇತ್ರದಲ್ಲಿ ಹನಿ ನೀರಾವರಿ ಯೋಜನೆಯ ಯಶಸ್ವಿ ಅನುಷ್ಠಾನ ಮಾಡಿದ್ದೀರಿ. ಇತರ ಕಡೆ ಯಾಕೆ ಆಗಿಲ್ಲ?

ನೀರಿನ ಕೊರತೆ ಇರುವ ಕಡೆ ಹನಿ ನೀರಾವರಿ ಯೋಜನೆ ಅಗತ್ಯ. ಯೋಜನೆ ಅನುಷ್ಠಾನ ಜತೆಗೆ ನಿರ್ವಹಣೆಯೂ ಅಷ್ಟೇ ಮುಖ್ಯ. ಹುನಗುಂದ ತಾಲ್ಲೂಕಿನಲ್ಲಿ 67 ಸಾವಿರ ಎಕರೆಗೆ ನೀರುಣಿಸುವ ಹನಿ ನೀರಾವರಿ ಯೋಜನೆ ಅನುಷ್ಠಾನ ಮಾಡಲಾಗಿತ್ತು. ನಿರ್ವಹಣೆ ಕೊರತೆಯಿಂದ ಯೋಜನೆ ವಿಫಲವಾಯಿತು. ಶಿಗ್ಗಾಂವಿಯಲ್ಲಾದಂತೆ ಅಲ್ಲಿ ಆಗಲಿಲ್ಲ. ನಿರ್ವಹಣೆ ಸಮಸ್ಯೆ ಪರಿಹರಿಸಲು ಯೋಜನೆಯ
ರೂಪುರೇಷೆ ಬದಲಿಸುವ ಚಿಂತನೆ ಮಾಡುತ್ತಿದ್ದೇವೆ. ರೈತನ ಹೊಲದವರೆಗೆ ನೀರು ಪೂರೈಸುವುದು, ನಿರ್ವಹಣೆಯನ್ನು ರೈತರಿಗೆ ಬಿಡುವುದು ಈ ಯೋಜನೆಯ ಸಾರಾಂಶ. ಆಗ ಯಾವ ರೈತನಿಗೆ ಇಚ್ಛಾಶಕ್ತಿ, ಆಸಕ್ತಿ ಇದೆಯೋ ಅವನು ಹನಿಯೋ, ತುಂತುರು ನೀರಾವರಿಯನ್ನೋ ಅಳವಡಿಸಿಕೊಳ್ಳುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.