ADVERTISEMENT

ಕೋವಿಡ್‌ನಿಂದ ಸಾವು: ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 22:16 IST
Last Updated 16 ಜೂನ್ 2021, 22:16 IST
ಎಚ್‌.ಕೆ. ಪಾಟೀಲ
ಎಚ್‌.ಕೆ. ಪಾಟೀಲ   

ಬೆಂಗಳೂರು: ‘ರಾಜ್ಯ ಸರ್ಕಾರ ಕೋವಿಡ್‌ನಿಂದ ಸಾವಿಗೀಡಾದವರ ಸಂಖ್ಯೆಗಳ ಸುಳ್ಳು ಮಾಹಿತಿ ನೀಡುತ್ತಿದೆ. ಹೀಗಾಗಿ, ಈ ಸಾವಿನ ಸಂಖ್ಯೆಗಳ ಬಗ್ಗೆ ಹೈಕೋರ್ಟ್‌ ನ್ಯಾಯಮೂರ್ತಿ ಅವರಿಂದ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್‌ ಶಾಸಕ ಎಚ್‌.ಕೆ. ಪಾಟೀಲ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಸಾವು ಮುಚ್ಚಿಹಾಕುವುದು, ಆ ಮೂಲಕ ಸಾವಿಗೀಡಾದವರಿಗೆ ಪರಿಹಾರ ಸಿಗದಂತೆ ಮಾಡುವುದು ಮಾನವೀಯತೆ ಅಲ್ಲ. ಪಾರದರ್ಶಕವಾಗಿ ಡೆತ್‌ ಆಡಿಟ್‌ ಆಗಬೇಕು. ವಾಸ್ತವಿಕ ಮಾಹಿತಿಯ ಶ್ವೇತಪತ್ರ ಹೊರಡಿಸಬೇಕು’ ಎಂದು ಒತ್ತಾಯಿಸಿದರು.

‘ಕೋವಿಡ್‌ ಎರಡನೇ ಅಲೆಯಲ್ಲಿ ಇದೇ 14ರವರೆಗೆ 33,033 ಮಂದಿ ಸಾವಿಗೀಡಾಗಿದ್ದಾರೆಂದು ಸರ್ಕಾರ ಹೇಳಿದೆ. ಮೊದಲ ಅಲೆಯಲ್ಲಿ 23 ಸಾವಿರ ಜನ ಮೃತಪಟ್ಟಿದ್ದಾರೆ ಎಂದು ಸರ್ಕಾರ ಲೆಕ್ಕ ನೀಡಿತ್ತು.

ADVERTISEMENT

‘ಜನನ–ಮರಣಗಳ ದಾಖಲೆಯ ಅನುಸಾರ ಸರ್ಕಾರದ ಅಧಿಕೃತ ವರದಿಯಂತೆ 2021 ಜ. 1ರಿಂದ ಜೂನ್‌ 13ರ ಆರು ತಿಂಗಳ ಅವಧಿಯಲ್ಲಿ ಕೋವಿಡ್‌ನಿಂದ ಮೃತಪಟ್ಟವರೂ ಸೇರಿ ಒಟ್ಟು 3,27,985 ಮಂದಿ
ಸಾವಿಗೀಡಾಗಿದ್ದಾರೆ. ಎಲ್ಲ ರೀತಿಯ ಸಾವುಗಳೂ ಸೇರಿದಂತೆ ಬೆಂಗಳೂರು ನಗರದಲ್ಲಿ 87,082 ಜನ ಮೃತಪಟ್ಟಿರುವುದು ದಾಖಲಾಗಿದೆ. ಯೋಜನೆ
ಮತ್ತು ಸಾಂಖ್ಯಿಕ ಇಲಾಖೆಯ 2018ರ ವಾರ್ಷಿಕ ವರದಿಯ ಪ್ರಕಾರ ಜನವರಿಯಿಂದ ಜೂನ್‌ವರೆಗೆ ರಾಜ್ಯದಲ್ಲಿ 88 ಸಾವಿರ ಮಂದಿ ಸಾವಿಗೀಡಾಗಿದ್ದರು. ಈ ಅಂಕಿ ಅಂಶವನ್ನು ಆಧರಿಸಿ ಆರು ತಿಂಗಳ ಸರಾಸರಿ ಸಾವಿನ ಸಂಖ್ಯೆ ಗಮನಿಸಿದರೆ ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಾವಿನ ಲೆಕ್ಕದಲ್ಲಿ ಸರ್ಕಾರದ ಸುಳ್ಳು ಹೇಳುವಂತೆ ಕಾಣುತ್ತಿದೆ’ ಎಂದರು.

‘ರಾಜ್ಯದಲ್ಲಿ 2021ರ ಮಾರ್ಚ್‌ 2ರಿಂದ ಜೂನ್‌ 14ರವರೆಗೆ 81,289 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ 45 ಸಾವಿರ ಮಕ್ಕಳು ಸೋಂಕಿತರಾಗಿದ್ದಾರೆ. ಶೇ 2ರಷ್ಟು ಮಕ್ಕಳು ಸಾವನ್ನಪ್ಪಿದ್ದಾರೆ. ಮೂರನೇ ಅಲೆ ಮಕ್ಕಳ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ ಎಂದು ವರದಿಗಳು ಹೇಳಿವೆ. ಹೀಗಾಗಿ, ಸರ್ಕಾರ ಕೂಡಲೇ ಮಕ್ಕಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.