ಕರ್ನಾಟಕ ಲೋಕಾಯುಕ್ತ
ಬೆಂಗಳೂರು: ಲೋಕಾಯುಕ್ತರು, ಲೋಕಾಯುಕ್ತ ಪೊಲೀಸರು ನಡೆಸುತ್ತಿದ್ದ ದಾಳಿ ಕಾರ್ಯಾಚರಣೆ ವಿವರಗಳನ್ನು ಮಾಜಿ ಹೆಡ್ ಕಾನ್‌ಸ್ಟೆಬಲ್ ನಿಂಗಪ್ಪ ಸಾವಂತ ಸೋರಿಕೆ ಮಾಡಿದ್ದರ ಸುಳಿವು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿದೆ.
ಅಬಕಾರಿ ಇಲಾಖೆ ಅಧಿಕಾರಿಗಳಿಂದ ನಿಂಗಪ್ಪ ಸಾವಂತ ಹಣ ವಸೂಲಿ ಮಾಡಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು, ಮಾಹಿತಿ ಸೋರಿಕೆ ಆಗಿದ್ದರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
‘2024 ಮತ್ತು 2025ರಲ್ಲಿ ಲೋಕಾಯುಕ್ತವು ನಡೆಸಿದ್ದ ಹಲವು ದಾಳಿ ಕಾರ್ಯಾಚರಣೆಗಳ ವಿವರಗಳನ್ನು, ಕಾರ್ಯಾಚರಣೆಯ ದಿನವೇ ಸೋರಿಕೆ ಮಾಡಲಾಗಿತ್ತು. ದಾಳಿ ನಡೆದಿದ್ದ ಕಚೇರಿಗಳಿಂದ ಸಂಬಂಧಿತ ಅಧಿಕಾರಿಗಳು ಪರಾರಿಯಾಗಿದ್ದರು. ಅದೇ ದಿನ ಲೋಕಾಯುಕ್ತದ ಕೆಲ ಅಧಿಕಾರಿಗಳು, ನಿಂಗಪ್ಪನ ಜತೆ ಫೋನ್‌ನಲ್ಲಿ ಮಾತನಾಡಿರುವ ಕರೆ ವಿವರ ಸಿಕ್ಕಿದೆ’ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.
‘ಲೋಕಾಯುಕ್ತರು, ಉಪ ಲೋಕಾಯುಕ್ತರು, ಲೋಕಾಯುಕ್ತ ಎಸ್‌ಪಿ ಹೆಸರಿನಲ್ಲಿ ಸರ್ಕಾರದ ಇತರೆ ಇಲಾಖೆಗಳ ಅಧಕಾರಿಗಳಿಗೆ ಬೇರೆ–ಬೇರೆ ಸಂಖ್ಯೆಗಳಿಂದ ಕರೆ ಹೋಗಿದೆ. ನಿಂಗಪ್ಪ ತನ್ನ ಆಧಾರ್ ಸಂಖ್ಯೆ ಬಳಸಿ ಖರೀದಿಸಿರುವ ಸಿಮ್ ಕಾರ್ಡ್ ಸೇರಿ, ಒಟ್ಟು ಐದು ಸಿಮ್ ಕಾರ್ಡ್‌ಗಳಿಂದ ಇಂತಹ ಕರೆ ಹೋಗಿದೆ. ಆ ಎಲ್ಲ ಸಂಖ್ಯೆಗಳ ಕರೆ ವಿವರ ಕಲೆ ಹಾಕಿದಾಗ ಈ ಅಂಶ ಪತ್ತೆಯಾಗಿದೆ’ ಎಂದು ಮಾಹಿತಿ ನೀಡಿವೆ.
‘ಇವುಗಳಲ್ಲಿ ಕೆಲವು ಸಿಮ್ ಕಾರ್ಡ್‌ಗಳನ್ನು ಲೋಕಾಯುಕ್ತದ ಅಧಿಕಾರಿಗಳ ಹೆಸರಿನಲ್ಲೇ ಖರೀದಿಸಲಾಗಿದೆ. ಟ್ರೂಕಾಲರ್, ಗೂಗಲ್ ಪ್ರೊಫೈಲ್‌ನಲ್ಲಿ ಲೋಕಾಯುಕ್ತ ಅಧಿಕಾರಿಗಳ ಚಿತ್ರವನ್ನೇ ಬಳಸಿಕೊಳ್ಳಲಾಗಿದೆ. ನಿಂಗಪ್ಪನೂ ಅಂತಹ ಒಂದು ಸಿಮ್ ಕಾರ್ಡ್ ಬಳಸಿರುವುದು ಗೊತ್ತಾಗಿದೆ’ ಎಂದು ತಿಳಿಸಿವೆ.
‘ಲೋಕಾಯುಕ್ತ ಎಸ್‌ಪಿಯಾಗಿದ್ದ ಶ್ರೀನಾಥ್ ಎಂ. ಜೋಶಿ ಜತೆಗೆ ನಿಂಗಪ್ಪ ನಗರದ ಹೋಟೆಲ್ ಒಂದರ ಲಾಬಿಯಲ್ಲಿ ಕೆಲ ಗಂಟೆ ಇದ್ದ ಮಾಹಿತಿ ಸಿಕ್ಕಿದೆ. ಜತೆಗೆ ರಾಜ್ಯ ಸರ್ಕಾರದ ಸಚಿವರೊಬ್ಬರ ಆಪ್ತ ಕಾರ್ಯದರ್ಶಿಯೂ ಅದೇ ಹೋಟೆಲ್‌ನಲ್ಲಿ ಅವರೊಂದಿಗೆ ಇದ್ದರು. ಮೂವರೂ ಒಂದೇ ಸಮಯಕ್ಕೆ ಹೊರಗೆ ಹೋಗಿದ್ದಾರೆ ಎಂಬ ವಿವರ ದೊರೆತಿದೆ’ ಎಂದು ಮೂಲಗಳು ವಿವರಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.