ಬೆಂಗಳೂರು: ‘ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಪಕ್ಷದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ ಎಂಬುದನ್ನೂ ನಾನು ಒಪ್ಪುವುದಿಲ್ಲ. ಕರ್ನಾಟಕವೂ ಸೇರಿ ಹಲವು ರಾಜ್ಯಗಳ ಅಧ್ಯಕ್ಷ ಸ್ಥಾನಗಳಿಗೆ ಹೆಸರುಗಳು ಶೀಘ್ರವೇ ಘೋಷಣೆ ಆಗಲಿವೆ’ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಗುರುವಾರ ಉತ್ತರಿಸಿದ ಅವರು, ‘ಅಧ್ಯಕ್ಷ ಸ್ಥಾನದ ಆಯ್ಕೆಗೆ ಸಂಬಂಧಿಸಿದಂತೆ ವರಿಷ್ಟರು ಎಲ್ಲರ ಅಭಿಪ್ರಾಯ ಪಡೆದಿದ್ದಾರೆ. ಒಂದೂವರೆ ವರ್ಷಗಳಿಂದ ಉತ್ತಮ ರೀತಿಯಲ್ಲಿ ಸಂಘಟನಾ ಕಾರ್ಯ ಮಾಡಿದ್ದೇನೆ. ಹೀಗಾಗಿ ನನಗೆ ಒಳ್ಳೆಯದಾಗಲಿದೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.
‘ಅಧ್ಯಕ್ಷರ ಆಯ್ಕೆಯಲ್ಲಿ ಗೊಂದಲಗಳಿವೆ. ಆದ್ದರಿಂದ, ಆಯ್ಕೆ ಪ್ರಕ್ರಿಯೆ ಮುಂದೂಡುತ್ತಿದ್ದಾರೆ ಎಂಬುದು ಸತ್ಯವಲ್ಲ. 14 ರಾಜ್ಯಗಳಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಸಿ, ಘೋಷಣೆಯೂ ಆಗಿದೆ. ಅತಿ ಶೀಘ್ರದಲ್ಲೇ ಇನ್ನು ಆರೇಳು ರಾಜ್ಯ ಘಟಕಗಳ ಅಧ್ಯಕ್ಷರ ಘೋಷಣೆಯೂ ಆಗಲಿದೆ ಎಂಬ ಮಾಹಿತಿ ಇದೆ. ಆ ಬಳಿಕವೇ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ನಡೆಯಲಿದೆ’ ಎಂದರು.
‘ಬಿಜೆಪಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ’ ಎಂಬ ಡಿ.ವಿ.ಸದಾನಂದ ಗೌಡ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ‘ಸದಾನಂದಗೌಡರು ಹಿರಿಯರು. ಪಕ್ಷದ ಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ ಎಂದು ಹೇಳಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಸಣ್ಣ–ಪುಟ್ಟ ಅಭಿಪ್ರಾಯ ವ್ಯತ್ಯಾಸಗಳಿರುವುದು ಸಹಜ. ಅವರನ್ನು ಭೇಟಿ ಮಾಡಿ ಅವರ ಜತೆ ಚರ್ಚೆ ಮಾಡುತ್ತೇನೆ’ ಎಂದು ಹೇಳಿದರು.
‘ನಾನು ದೆಹಲಿಗೆ ಹೋಗಿದ್ದೆ, ಇನ್ನೂ ಕೆಲವು ಹಿರಿಯ ನಾಯಕರೂ ದೆಹಲಿಗೆ ಹೋಗಿದ್ದರು. ಇಷ್ಟಕ್ಕೆ ಬಹಳ ಬೆಳವಣಿಗೆ ಆಗುತ್ತಿದೆ ಎಂದು ವ್ಯಾಖ್ಯಾನಿಸುವುದು ಕೇವಲ ಕಲ್ಪನೆ ಅಷ್ಟೆ. ನಾನು ವೈಯಕ್ತಿಕ ಕಾರಣಕ್ಕೆ ದೆಹಲಿಗೆ ಹೋಗಿದ್ದೆ. ಅಲ್ಲಿ ಪಕ್ಷದ ವರಿಷ್ಠರನ್ನಾಗಲಿ, ಯಾರನ್ನೂ ಭೇಟಿ ಮಾಡಿಲ್ಲ. ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ದೆಹಲಿಗೆ ಹೋಗಬಾರದು, ಮುಖಂಡರನ್ನು ಭೇಟಿ ಮಾಡಬಾರದು ಅಂತ ಏನಾದರೂ ಇದೆಯೇ’ ಎಂದು ಪ್ರಶ್ನಿಸಿದರು.
‘ವಿರೋಧ ಪಕ್ಷದ ನಾಯಕರಾಗಿ ಆರ್.ಅಶೋಕ ಅವರು ವಿಧಾನಸಭೆಯಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಆ ಬಗ್ಗೆ ನಮ್ಮ ಎಲ್ಲ ಶಾಸಕರಿಗೂ ತೃಪ್ತಿ ಇದೆ. ವಿರೋಧ ಪಕ್ಷದ ನಾಯಕರ ಬದಲಾವಣೆ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿರುವುದು ಖಂಡಿತಾ ಸರಿಯಲ್ಲ. ಆ ಚರ್ಚೆಯಲ್ಲಿ ಯಾವುದೇ ಹುರುಳಿಲ್ಲ’ ಎಂದು ವಿಜಯೇಂದ್ರ ಹೇಳಿದರು.
‘ಎಫ್‍ಐಆರ್ ಗೊಡ್ಡು ಬೆದರಿಕೆಗೆ ಹೆದರಲ್ಲ’ ‘ನಮ್ಮ ಪಕ್ಷದ ‘ಎಕ್ಸ್’ ಖಾತೆದಾರರ ವಿರುದ್ಧ ಸರ್ಕಾರ ಎಫ್‌ಐಆರ್ ದಾಖಲಿಸಿದೆ. ಇಂಥ ಗೊಡ್ಡು ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ’ ಎಂದು ಬಿ.ವೈ.ವಿಜಯೇಂದ್ರ ಹೇಳಿದರು. ‘ಇಂಥ ನೂರು ಎಫ್‌ಐಆರ್ ದಾಖಲಿಸಲಿ. ನಾವು ಮತ್ತು ನಮ್ಮ ಕಾರ್ಯಕರ್ತರು ಅದನ್ನು ಸಮರ್ಥವಾಗಿ ಎದುರಿಸಲು ಸಿದ್ಧ. ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಗೂಂಡಾಗಿರಿ ನಡೆಸಲು ಸಾಧ್ಯವಿಲ್ಲ’ ಎಂದು ಅವರು ಕಿಡಿಕಾರಿದರು. ‘ಇಂದಿರಾ ಗಾಂಧಿಯವರು ಪ್ರಧಾನಮಂತ್ರಿ ಆಗಿದ್ದಾಗ ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಯಾವ ರೀತಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳುವ ದಿನ. ಇಂದಿರಾಗಾಂಧಿ ಅವರ ನಡವಳಿಕೆ ಹಿಟ್ಲರ್‌ನಂತಿತ್ತು ಅನ್ನದೇ ಇನ್ನೇನು ಹೇಳಲು ಸಾಧ್ಯ’ ಎಂದು ವಿಜಯೇಂದ್ರ ಪ್ರಶ್ನಿಸಿದರು.
ನಮ್ಮಲ್ಲಿ ಎಲ್ಲವೂ ಸರಿ ಇಲ್ಲ: ಡಿವಿಎಸ್ ಬೆಂಗಳೂರು: ‘ನಮ್ಮಲ್ಲಿ ಎಲ್ಲವೂ ಸರಿ ಇಲ್ಲ. ಆಂತರಿಕ ವ್ಯತ್ಯಾಸ ಒಳಗೊಳಗೇ ಕುದಿಯುತ್ತಿದೆ. ಹೇಳಿಕೆಗಳಲ್ಲಿ ಎಲ್ಲವೂ ಸರಿ ಇದೆ ಎಂದು ಕಂಡರೂ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ ಇದೆ’ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ಸುದ್ದಿಗಾರ ಜತೆ ಮಾತನಾಡಿದ ಅವರು ‘ಯಾರನ್ನಾದರೂ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿ. ಆದರೆ ಸಂಘಟನಾ ವೇಗಕ್ಕೆ ತಡೆ ಮಾಡಬಾರದು. ಇದರಿಂದ ಪಕ್ಷಕ್ಕೆ ಭಾರಿ ಹಿನ್ನಡೆ ಆಗುತ್ತದೆ’ ಎಂದರು. ‘ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಪಕ್ಷದ ಕಾರ್ಯಕರ್ತರು ಕೆಲಸ ಮಾಡಲು ಸಿದ್ಧರಾಗಿದ್ದಾರೆ. ಅಧ್ಯಕ್ಷರ ನೇಮಕದ ಬಗ್ಗೆ ಒಬ್ಬೊಬ್ಬರು ಒಂದು ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಗೊಂದಲವಾಗುತ್ತಿದೆ. ಇದಕ್ಕೆ ವರಿಷ್ಠರು ಕಡಿವಾಣ ಹಾಕಬೇಕಾಗಿದೆ’ ಎಂದು ಹೇಳಿದರು. ‘ನಮ್ಮಲ್ಲಿ ಪ್ರಮುಖ ನಾಯಕರ ಸಮಿತಿ ಇದೆ. ಅದು ಸಂಪ್ರದಾಯದಂತೆ ಸಭೆ ಸೇರುತ್ತದೆ. ಆದರೆ ಅಲ್ಲಿ ವಿಷಯಾಧಾರಿತ ಚರ್ಚೆ ನಡೆಯುತ್ತಿಲ್ಲ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಪ್ರಮುಖ ನಾಯಕರ ಸಮಿತಿ ಸದಸ್ಯರು ಪಕ್ಷ ಕಟ್ಟಿ ಬೆಳೆಸಿದ ಪ್ರಮುಖರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಆ ಕೆಲಸ ಆಗುತ್ತಿಲ್ಲ’ ಎಂದರು. ‘ವಿಜಯೇಂದ್ರ ಮತ್ತು ಆರ್.ಅಶೋಕ ಮಧ್ಯೆ ಹೊಂದಾಣಿಕೆ ಸಮಸ್ಯೆ ಇದೆಯೇ’ ಎಂಬ ಪ್ರಶ್ನೆಗೆ ‘ಮೇಲ್ನೋಟಕ್ಕೆ ಚೆನ್ನಾಗಿಯೇ ಇದ್ದಾರೆ. ಒಳಗೆ ಹೇಗಿದ್ದಾರೆ ಎನ್ನುವುದು ಗೊತ್ತಿಲ್ಲ. ಇವರ ಬಗ್ಗೆ ಅಲ್ಲಿಂದ ಇಲ್ಲಿಂದ ಒಂದೊಂದು ವರ್ತಮಾನ ಕೇಳಿ ಬರುತ್ತಿದೆ’ ಎಂದು ಉತ್ತರಿಸಿದರು. ‘ಪಕ್ಷದಲ್ಲಿ ಶುದ್ಧೀಕರಣ ಆರಂಭವಾಗಿದೆ. ಈ ಕೆಲಸ ಕೇವಲ ಪ್ರೋಕ್ಷಣೆಯಿಂದ ಆಗುವುದಿಲ್ಲ. ರಾಜಕೀಯದಲ್ಲಿ ಸ್ನಾನ ಮಾಡಿದರೆ ಮಾತ್ರ ಶುದ್ಧೀಕರಣ. ಅದೂ ಕೂಡ ಒಳ್ಳೆಯ ರೀತಿಯಲ್ಲಿ ಆಗಬೇಕು. ಕೆಲವರನ್ನು ಹೊರಗೆ ಹಾಕುವ ಮೂಲಕ ಶುದ್ಧೀಕರಣ ಆರಂಭವಾಗಿದೆ’ ಎಂದರು. ಯಡಿಯೂರಪ್ಪ ಅವರು ರಾಜಕೀಯವಾಗಿ ಮತ್ತೆ ಸಕ್ರಿಯವಾಗಿರುವ ಕುರಿತು ಪ್ರಶ್ನಿಸಿದಾಗ ‘ಅವರು ಮೊದಲಿನಿಂದಲೂ ಹಾಗೆಯೇ. ಕೆಲವೊಮ್ಮೆ ಸುಮ್ಮನೆ ಇರುತ್ತಾರೆ. ಇದಕ್ಕಿದ್ದ ಹಾಗೆ ರಂಗಪ್ರವೇಶ ಮಾಡುತ್ತಾರೆ. ಅದನ್ನು ವಿವರಿಸಲು ಆಗುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.