ADVERTISEMENT

ಪುರಾತತ್ವ ಇಲಾಖೆ ಸ್ಪಂದನೆ ಇಲ್ಲ: ದಕ್ಷಿಣ ಭಾರತದ ಪ್ರವಾಸೋದ್ಯಮ ಸಚಿವರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 22:24 IST
Last Updated 28 ಅಕ್ಟೋಬರ್ 2021, 22:24 IST
ಸಮ್ಮೇಳನದಲ್ಲಿ ಆನಂದ್‌ ಸಿಂಗ್‌ ಮಾತನಾಡಿದರು. ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್‌ ರೆಡ್ಡಿ ಇದ್ದರು -ಪ್ರಜಾವಾಣಿ ಚಿತ್ರ
ಸಮ್ಮೇಳನದಲ್ಲಿ ಆನಂದ್‌ ಸಿಂಗ್‌ ಮಾತನಾಡಿದರು. ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್‌ ರೆಡ್ಡಿ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಐತಿಹಾಸಿಕ ತಾಣಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಸ್ಥಳೀಯರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ದಕ್ಷಿಣ ಭಾರತದ ಪ್ರವಾಸೋದ್ಯಮ ಸಚಿವರು ತೀವ್ರ ಆಕ್ಷೇಪವ್ಯಕ್ತಪಡಿಸಿದರು.

ವೆಸ್ಟ್ ಎಂಡ್‌ ಹೋಟೆಲ್‌ನಲ್ಲಿ ಗುರುವಾರ ಆರಂಭವಾದ ದಕ್ಷಿಣ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಎರಡು ದಿನಗಳ ಸಮ್ಮೇಳನದಲ್ಲಿ ಭಾಗವಹಿಸಿದ ಸಚಿವರು, ಎಎಸ್‌ಐ ಅಧಿಕಾರಿಗಳ ಬಳಿ ತಮ್ಮ ಅಸಮಾಧಾನ ಹಂಚಿಕೊಂಡರು.

ಕರ್ನಾಟಕ ಪ್ರವಾಸಿ ತಾಣಗಳ ಬಗ್ಗೆ ಮಾತನಾಡಿ‌ದ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ‘ಹಂಪಿಯನ್ನು ಎಎಸ್‌ಐ ತನ್ನ ವಶಕ್ಕೆ ತೆಗೆದುಕೊಂಡ ಬಳಿಕ ಬದಲಾವಣೆಗಳು ಆಗಿವೆ.ಆದರೆ, ಎಎಸ್‌ಐ ಮತ್ತು ಸ್ಥಳೀಯರ ನಡುವೆ ಭಿನ್ನಾಭಿಪ್ರಾಯವಿದೆ’ ಎಂದರು.

ADVERTISEMENT

‘ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡುಎಎಸ್‌ಐ ಅಧಿಕಾರಿಗಳು ಕೆಲಸ ಮಾಡಬೇಕು. 2011ರಲ್ಲಿ, ವಿರೂಪಾಕ್ಷ ದೇವಸ್ಥಾನದ ಎದುರಿನ ಮಾರ್ಕೆಟ್‌ಅನ್ನು ತೆರವುಗೊಳಿಸಲಾಯಿತು. ಆದರೆ, ದಶಕ ಕಳೆದರೂ ಮರುನಿರ್ಮಾಣ ಮಾಡಿಲ್ಲ.ಅಕ್ಷಯ್ ಕುಮಾರ್ ಸಿನಿಮಾ ಚಿತ್ರೀಕರಣಕ್ಕೆ ಒಬ್ಬ ಅಧಿಕಾರಿ ಅವಕಾಶ ನಿರಾಕರಿಸಿದ ಬಳಿಕ ಯಾರೂ ಚಿತ್ರೀಕರಣಕ್ಕೆ ಬರುತ್ತಿಲ್ಲ. ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಿದರೆ ಪ್ರೇಕ್ಷಣೀಯ ಸ್ಥಳಗಳ ಪ್ರಚಾರಕ್ಕೆ ಅನುಕೂಲವಾಗುತ್ತದೆ. ಏಕಗವಾಕ್ಷಿ ವ್ಯವಸ್ಥೆ ಮೂಲಕ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಬೇಕು. ಶಿಲ್ಪಕಲೆಯನ್ನು ಸ್ಪರ್ಶಿಸಲು ಅವಕಾಶ ನೀಡದೆ,ವಿಠಲರಾಯ ದೇವಸ್ಥಾನದೊಳಗೆ ಪ್ರವೇಶಕ್ಕೆ ಅವಕಾಶ ನೀಡಬೇಕು’ ಎಂದರು.

‘ಪ್ರವಾಸೋದ್ಯಮ ಕ್ಷೇತ್ರದ ಚಟುವಟಿಕೆ ಉತ್ತೇಜನ ಹಾಗೂ ಹೂಡಿಕೆ ಹೆಚ್ಚಳಕ್ಕೆ ಸರ್ಕಾರಗಳು ಪ್ರಯತ್ನ ಮಾಡುತ್ತಿವೆ’ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಹೇಳಿದರು.

‘ಇತ್ತೀಚೆಗೆ ರಾಮಪ್ಪ ರುದ್ರೇಶ್ವರ ದೇವಸ್ಥಾನ ಯುನೆಸ್ಕೊ ಪಟ್ಟಿಗೆ ಸೇರಿರುವುದು ಇಲಾಖೆಗಳ ಕಾರ್ಯಕ್ಕೆ ಸಾಕ್ಷಿ. ಕರ್ನಾಟಕದ ಹಂಪಿ, ಬೇಲೂರು–ಹಳೆಬೀಡು ತಾಣಗಳೂ ಸೇರಿದಂತೆ ದಕ್ಷಿಣದ ಎಲ್ಲ ರಾಜ್ಯಗಳಲ್ಲೂ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ’ ಎಂದರು.

‘ದೇಶದ ಪ್ರವಾಸೋದ್ಯಮ ಕ್ಷೇತ್ರಗಳ ಕುರಿತು ವಿದೇಶಗಳಲ್ಲಿ ಲೇಖನ, ಟಿವಿ ಜಾಹೀರಾತು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು 20 ದೇಶಗಳ ರಾಯಭಾರ ಕಚೇರಿಗಳಲ್ಲಿ ಪ್ರವಾಸೋದ್ಯಮ ಅಧಿಕಾರಿಗಳನ್ನು ವಿದೇಶಾಂಗ ಇಲಾಖೆ ನೇಮಿಸಿದೆ’ ಎಂದರು.

ಕರ್ನಾಟಕಕ್ಕಿಲ್ಲ ಅನುದಾನ: ‘2014ರಿಂದ ಇಲ್ಲಿಯವರೆಗೆ ದಕ್ಷಿಣ ರಾಜ್ಯಗಳಿಗೆ ₹ 1,185 ಕೋಟಿ ಅನುದಾನ ನೀಡಲಾಗಿದೆ. ಆದರೆ, ಕರ್ನಾಟಕಕ್ಕೆ ಯಾವುದೇ ಹಣ ನೀಡಿಲ್ಲ. ಕರ್ನಾಟಕವನ್ನು ಕಡೆಗಣಿಸಲಾಗಿದೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಕೇಂದ್ರ ಪ್ರವಾಸೋದ್ಯಮ ಹೆಚ್ಚುವರಿ ಮಹಾನಿರ್ದೇಶಕಿ ರೂಪಿಂದರ್ ಬ್ರಾರ್, ‘ಚಾಮುಂಡಿ ಬೆಟ್ಟವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ’ ಎಂದರು.

‘ರಾಜ್ಯ ಸರ್ಕಾರ ಚಾಮುಂಡಿ ಬೆಟ್ಟದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಅದೇ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಮಗೆ ಇಷ್ಟವಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಗಳು ಒಪ್ಪಿಗೆ ಆಗಿಲ್ಲ. ಹೊಸ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದೇವೆ’ ಎಂದರು.

ಈ ಆರೋಪಕ್ಕೆ ಪ್ರತಿಕ್ರಿಯಿಸಿದಸಚಿವ ಕಿಶನ್ ರೆಡ್ಡಿ, ‘ಕರ್ನಾಟಕವನ್ನು ಕಡೆಗಣಿಸುವ ಉದ್ದೇಶವಿಲ್ಲ. ಅಧಿಕಾರಿಗಳ ಜೊತೆ ಚರ್ಚಿಸಿ ತಕ್ಷಣ ಯೋಜನೆಗೆ ಅನುಮತಿ ನೀಡಲಾಗುವುದು’ ಎಂದರು.

ಕನ್ನಡ ಕಣ್ಮರೆಗೆ ಆಕ್ಷೇಪ
ಮುಖ್ಯ ವೇದಿಕೆ ಸೇರಿದಂತೆ ಸಮ್ಮೇಳನ ನಡೆದ ಕನ್ನಡ ಬಳಸದಿರುವ ಬಗ್ಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಕಾರ್ಯಕ್ರಮ ಸಂಘಟಿಸಿದ್ದ ಅಧಿಕಾರಿಗಳನ್ನು ಆನಂದ್ ಸಿಂಗ್ ತರಾಟೆಗೆ ತೆಗೆದುಕೊಂಡರು. ಸುಮಾರು ಒಂದು ಗಂಟೆಯ ಬಳಿಕ ವೇದಿಕೆಯಲ್ಲಿದ್ದ ಡಿಜಿಟಲ್ ಫಲಕದಲ್ಲಿ ಕನ್ನಡದಲ್ಲಿ ಮಾಹಿತಿ ನೀಡಲಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ಕಿಶನ್ ರೆಡ್ಡಿ, ‘ಅಧಿಕಾರಿಗಳಿಂದ ತಪ್ಪಾಗಿದೆ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.