ADVERTISEMENT

ದೇಶಿ ಪಾಲುದಾರಿಕೆಯಲ್ಲಿ ಆಸಕ್ತಿಯಿಲ್ಲ: ಎಚ್‌ಎಎಲ್‌ ಮುಖ್ಯಸ್ಥರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 20:35 IST
Last Updated 7 ನವೆಂಬರ್ 2018, 20:35 IST

ಬೆಂಗಳೂರು: ‘ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿ. (ಎಚ್‌ಎಎಲ್‌)ಯಾವುದೇ ವಿಮಾನ ತಯಾರಿಕಾ ಕಂಪನಿಗೂ ದೇಶಿ ಪಾಲುದಾರನಾಗಲು ಬಯಸುವುದಿಲ್ಲ’ ಎಂದು ಸಂಸ್ಥೆ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್‌. ಮಾಧವನ್‌ ಹೇಳಿದ್ದಾರೆ.

ರಫೇಲ್‌ ಯುದ್ಧ ವಿಮಾನಗಳ ಪೂರೈಕೆ ಒಪ್ಪಂದ ಕುರಿತಂತೆ ರಾಜಕೀಯ ಕೆಸರೆರಚಾಟ ಮುಂದುವರಿದಿರುವುದರ ನಡುವೆಯೇ ಮಾಧವನ್‌ ಈ ಹೇಳಿಕೆ ನೀಡಿದ್ದಾರೆ. ಸಂಪೂರ್ಣ ತಂತ್ರಜ್ಞಾನ ವರ್ಗಾವಣೆ ಒಪ್ಪಂದಗಳಲ್ಲಿ ಮಾತ್ರ ಪಾಲುದಾರಿಕೆ ಹೊಂದಲು ಎಚ್‌ಎಎಲ್‌ ಇಚ್ಚಿಸುತ್ತದೆ ಎಂದೂ ತಿಳಿಸಿದ್ದಾರೆ.

ವಿಮಾನ– ಹೆಲಿಕಾಪ್ಟರ್‌ಗಳ ತಯಾರಿಕೆ, ಅವುಗಳ ಪೂರಕ ಉಪಕರಣಗಳ ಉತ್ಪಾದನೆ, ರಿಪೇರಿ, ಒಟ್ಟಾರೆ ನಿರ್ವಹಣೆ ಉದ್ದೇಶವನ್ನು ಎಚ್‌ಎಎಲ್‌ ಹೊಂದಿದೆ ಎಂದೂ ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ADVERTISEMENT

ಬೇರೆ ಕಂಪನಿಗೆ ದೇಶಿ ಪಾಲುದಾರರಾಗುವುದು ಬೇರೆ; ಸಂಪೂರ್ಣ ವರ್ಗಾವಣೆಗೊಂಡ ತಂತ್ರಜ್ಞಾನದಿಂದ ವಿಮಾನಗಳನ್ನು ತಯಾರಿಸುವುದು ಬೇರೆ ಎಂದು ಮಾಧವನ್‌ ಅಭಿಪ್ರಾಯಪಟ್ಟಿದ್ದಾರೆ.

ಎಚ್‌ಎಎಲ್‌ಗೆ ಬೇರೆ ಕಾರ್ಯಕ್ರಮಗಳಿಂದ ದೇಶಿ ಪಾಲುದಾರಿಕೆ ಸಿಕ್ಕೇ ಸಿಗುತ್ತದೆ. ಆದರೆ, ಅದು ಸಂಸ್ಥೆಯ ಮುಖ್ಯ ವ್ಯವಹಾರ ಆಗಲಾರದು ಎಂದು ತಿಳಿಸಿದ್ದಾರೆ.

36 ರಫೇಲ್‌ ಯುದ್ಧ ವಿಮಾನಗಳನ್ನು ₹ 58 ಸಾವಿರ ಕೋಟಿ ವೆಚ್ಚದಲ್ಲಿ ಖರೀದಿಸಲು ಡಾಸೋ ಜೊತೆ ಮಾಡಿಕೊಂಡ ಒಪ್ಪಂದದಲ್ಲಿ ಅನಿಲ್‌ ಅಂಬಾನಿಗೆ ಸೇರಿದ ರಿಲಯನ್ಸ್‌ ಕಂಪನಿಯನ್ನು ದೇಶಿ ಪಾಲುದಾರರನ್ನಾಗಿ ಹೊಂದುವಂತೆ ಎನ್‌ಡಿಎ ಸರ್ಕಾರ ಒತ್ತಡ ಹೇರಿದೆ. ₹ 30 ಸಾವಿರ ಕೋಟಿ ಮೊತ್ತದ ಗುತ್ತಿಗೆ ಆ ಕಂಪನಿಗೆ ಸಿಗುವಂತೆ ನೋಡಿಕೊಂಡಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ.

ಆದರೆ, ಈ ಆರೋಪವನ್ನು ಸರ್ಕಾರ ಅಲ್ಲಗಳೆದಿದೆ. ‘ರಫೇಲ್‌ ಪೂರೈಕೆ ಒಪ್ಪಂದದಿಂದ ಎಚ್‌ಎಎಲ್‌ ಸದ್ಯ ಸಂಪೂರ್ಣ ಹೊರಗಿದೆ. ಒಂದು ಹಂತದಲ್ಲಿ ಸಂಸ್ಥೆ ಒಪ್ಪಂದದ ಭಾಗವಾಗಿತ್ತು. ಆದರೆ, ಒಪ್ಪಂದ ಕಾರ್ಯಗತವಾಗಲಿಲ್ಲ’ ಎಂದುಈಚೆಗೆ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾಧವನ್‌ ವಿವರಿಸಿದ್ದರು.

‘ರಫೇಲ್‌ ವಿಮಾನಗಳ ಖರೀದಿ ಒಪ್ಪಂದ ಬದಲಾವಣೆ ಹಾಗೂ ಅವುಗಳ ದರ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದೂ ಅವರು
ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.