ADVERTISEMENT

ಬೆಳಗಾವಿ: ಸರ್ಕಾರಿ ಶಾಲೆಯಲ್ಲಿ ಹೈಟೆಕ್‌ ಶೌಚಾಲಯ, ಬಾತ್‌ ರೂಂ

ಬಾಲಕ, ಬಾಲಕಿಯರಿಗೆ ಪ್ರತ್ಯೇಕವಾಗಿ ನಿರ್ಮಾಣ

ಎಂ.ಮಹೇಶ
Published 9 ಫೆಬ್ರುವರಿ 2020, 19:45 IST
Last Updated 9 ಫೆಬ್ರುವರಿ 2020, 19:45 IST
ರಾಯಬಾಗ ತಾಲ್ಲೂಕು ನಿಡಗುಂಡಿ ಅಂಬೇಡ್ಕರ್‌ ನಗರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹೈಟೆಕ್‌ ಶೌಚಾಲಯ ನಿರ್ಮಿಸಲಾಗಿದೆ
ರಾಯಬಾಗ ತಾಲ್ಲೂಕು ನಿಡಗುಂಡಿ ಅಂಬೇಡ್ಕರ್‌ ನಗರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹೈಟೆಕ್‌ ಶೌಚಾಲಯ ನಿರ್ಮಿಸಲಾಗಿದೆ   

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕು ನಿಡಗುಂಡಿ ಅಂಬೇಡ್ಕರ್‌ ನಗರ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಖಾಸಗಿ ಕಾನ್ವೆಂಟ್‌ಗೆ ಕಡಿಮೆ ಇಲ್ಲದಂತೆ ಅಭಿವೃದ್ಧಿಪಡಿಸಿರುವ ಮುಖ್ಯ ಶಿಕ್ಷಕ ಹಾಗೂ ಕವಿ ವೀರಣ್ಣ ಮಡಿವಾಳರ ಅವರು ಇದೀಗ ಶೌಚಾಲಯ ಹಾಗೂ ಸ್ನಾನದ ಮನೆಯನ್ನು ಹೈಟೆಕ್‌ ಆಗಿ ಕಟ್ಟಿಸಿ ಗಮನಸೆಳೆದಿದ್ದಾರೆ.

ಶಾಲೆಗಳಲ್ಲಿ ಶೌಚಾಲಯಗಳಿರುವುದು ಸಾಮಾನ್ಯ. ಆದರೆ, ಇಲ್ಲಿ ಬಾತ್‌ ರೂಂ ಕೂಡ ನಿರ್ಮಿಸಿರುವುದು ವಿಶೇಷ. ಅದಕ್ಕೆ ‘ಮಕ್ಕಳ ಮರ್ಯಾದೆ ಮನೆ’ ಎಂದು ಹೆಸರಿಡಲಾಗಿದೆ. ಗೋಡೆಯ ಮೇಲೆ ಸ್ವತಃ ವೀರಣ್ಣ ಅವರೇ ಆಕರ್ಷಕ ಚಿತ್ರಗಳನ್ನು ಬಿಡಿಸಿ ಆಕರ್ಷಕಗೊಳಿಸಿದ್ದಾರೆ.

ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ತಲಾ ಒಂದು ಟಾಯ್ಲೆಟ್, 4 ಯೂರಿನಲ್ಸ್‌, 4 ವಾಶ್‌ ಬೇಸಿನ್‌ಗಳು ಹಾಗೂ 1 ಬಾತ್‌ ರೂಂ ನಿರ್ಮಿಸಲಾಗಿದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಸ್ವಚ್ಛತೆಯ ಮಹತ್ವ ಹಾಗೂ ವೈಯಕ್ತಿಕ ಆರೋಗ್ಯ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು ಶಿಕ್ಷಕರ ಉದ್ದೇಶವಾಗಿದೆ.

ADVERTISEMENT

ತೊಂದರೆ ನಿವಾರಿಸಲು

‘ಶಾಲೆಯಲ್ಲಿ 120 ಮಕ್ಕಳಿದ್ದಾರೆ. ಈ ಪೈಕಿ ಬಾಲಕಿಯರ ಸಂಖ್ಯೆ ಜಾಸ್ತಿ ಇದೆ. ಹಿಂದೆ ಇಲ್ಲಿದ್ದ ಶೌಚಾಲಯ ಚಿಕ್ಕದಾಗಿತ್ತು ಹಾಗೂ ಉಪಯೋಗಿಸಲು ಆಗದಂಥ ಸ್ಥಿತಿಯಲ್ಲಿತ್ತು. ಇದರಿಂದಾಗಿ ಮಕ್ಕಳು ಬಯಲನ್ನು ಆಶ್ರಯಿಸಬೇಕಾದ ದುಃಸ್ಥಿತಿ ಇತ್ತು. ಬಾಲಕಿಯರು ತೀವ್ರ ‘ಮುಜುಗರ’ಕ್ಕೆ ಒಳಗಾಗುತ್ತಿದ್ದರು. ಅಲ್ಲದೇ, ಅಕ್ಕಪಕ್ಕದವರು ಹಾಗೂ ಜಮೀನುಗಳ ಮಾಲೀಕರು ತಕರಾತು ತೆಗೆಯುತ್ತಿದ್ದರು. ಹೀಗಾಗಿ, ಹೈಟೆಕ್‌ ಹಾಗೂ ವ್ಯವಸ್ಥಿತವಾಗಿ ಶೌಚಾಲಯ ನಿರ್ಮಿಸಬೇಕು ಎಂದು ಯೋಜಿಸಿದೆ. ಇದಕ್ಕೆ ಹಲವರು ಸಹಕರಿಸಿದ್ದಾರೆ. ಅದಕ್ಕೆ ಶೌಚಾಲಯ ಎನ್ನುವುದಕ್ಕಿಂತ ‘ಮಕ್ಕಳ ಮರ್ಯಾದೆ ಮನೆ’ ಎಂದು ಹೆಸರಿಟ್ಟಿದ್ದೇವೆ. ಶಾಶ್ವತ ಹಾಗೂ ಸಾರ್ಥಕ ಕೆಲಸ ಮಾಡಿದ ತೃಪ್ತಿ ನನ್ನದಾಗಿದೆ’ ಎಂದು ವೀರಣ್ಣ ಭಾವುಕರಾದರು.

‘ಶಾಲೆ ಬೆಳವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಹಿಂದಿನ ಜಿಲ್ಲಾ ಪಂಚಾಯಿತಿ ಸಿಇಒ ಆರ್.ರಾಮಚಂದ್ರನ್‌ ಅಭಿನಂದಿಸಿದ್ದರು. ಆಗ, ಶೌಚಾಲಯದ ಅಗತ್ಯದ ಬಗ್ಗೆ ಪ್ರಸ್ತಾಪಿಸಿದ್ದೆ. ಅವರು ಆರ್‌ಬಿಎಲ್‌ ಬ್ಯಾಂಕ್‌ನಿಂದ ಸಿಎಸ್‌ಆರ್‌ ನಿಧಿಯಿಂದ ₹ 1 ಲಕ್ಷ ಕೊಡಿಸಿದ್ದರು. ಸರ್ಕಾರದಿಂದಲೂ ₹ 4 ಲಕ್ಷ ಬಂದಿತ್ತು. ಇದರಲ್ಲಿ ₹ 2 ಲಕ್ಷವನ್ನು ಎಸ್‌ಡಿಎಂಸಿಯಲ್ಲಿ ಚರ್ಚಿಸಿ ಸಮೀಪದ ಶಾಲೆಗೆ ವರ್ಗಾಯಿಸಿದೆವು. ಆದರೆ, ಉಳಿದ ₹ 3 ಲಕ್ಷ ಸಾಕಾಗಲಿಲ್ಲ. ಹೀಗಾಗಿ, ವೈಯಕ್ತಿಕವಾಗಿ ₹ 48ಸಾವಿರ ಹಾಕಿದೆ. ಸ್ನೇಹಿತರಾದ ರಾಜೇಶ ಬಟಕುರ್ಕಿ, ಸುರೇಶ ಅಕ್ಕೂರು, ಶರತ್‌ ಮೇಟಿ ತಲಾ ₹ 10ಸಾವಿರ, ರಾಜೇಶ ಹಲಗೂರು ₹ 5 ಸಾವಿರ ನೀಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್‌ಕುಮಾರ್‌ ₹ 18ಸಾವಿರ ಕೊಟ್ಟರು. ಹೀಗಾಗಿ, ಇದು ಸಿದ್ಧಗೊಂಡಿದೆ’ ಎಂದು ಸ್ಮರಿಸಿದರು.

ನೀರಿನ ವ್ಯವಸ್ಥೆ

‘ಮುಂದೆ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾದರೆ ಅವರಿಗೂ ಸಾಕಾಗುವಂತೆ ದೊಡ್ಡದಾಗಿ ಕಟ್ಟಲಾಗಿದೆ. ಬೋರ್‌ವೆಲ್‌ ಇರುವುದರಿಂದ ನೀರಿಗೆ ಕೊರತೆ ಇಲ್ಲ. ಸಾವಿರ ಲೀಟರ್ ಸಂಗ್ರಹ ಸಾಮರ್ಥ್ಯದ ಸಿಂಟೆಕ್ಸ್‌ ಅಳವಡಿಸಿದೇವೆ. ಬಳಸಿದ ನೀರು ಉದ್ಯಾನಕ್ಕೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಆ ಶಾಲೆಗೆ ಸ್ವಚ್ಛ ಭಾರತ ಅಭಿಯಾನದಲ್ಲಿ ಶೌಚಾಲಯ ನಿರ್ಮಾಣಕ್ಕೆ ಅನುದಾನ ಮಂಜೂರಾಗಿತ್ತು. ವೀರಣ್ಣ ಅವರು ಸ್ಥಳೀಯರ ಸಹಕಾರ ಪಡೆದು ನಿರೀಕ್ಷೆಗಿಂತಲೂ ಚೆನ್ನಾಗಿ ಕಟ್ಟಿಸಿದ್ದಾರೆ’ ಎಂದು ರಾಯಬಾಗ ಸಮನ್ವಯಾಧಿಕಾರಿ ಬಿ.ಎಂ. ಮಾಳಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.