ADVERTISEMENT

ಕನ್ನಡ ತಮಿಳಿನಿಂದ ಹುಟ್ಟಿದೆ ಎನ್ನಲು ನೀವು ಭಾಷಾತಜ್ಞರೋ: ಕಮಲ್‌ಗೆ ಹೈಕೋರ್ಟ್ ಚಾಟಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 8:39 IST
Last Updated 3 ಜೂನ್ 2025, 8:39 IST
   

ಬೆಂಗಳೂರು: ಕನ್ನಡ ತಮಿಳಿನಿಂದ ಹುಟ್ಟಿದೆ ಎಂದು ಹೇಳಿಕೆ ನೀಡಿರುವ ನಟ, ರಾಜಕಾರಣಿ ಕಮಲ್ ಹಾಸನ್ ಅವರನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

‘ಒಂದು ಕ್ಷಮೆಯಾಚನೆಯಿಂದ ಪರಿಸ್ಥಿತಿ ಬಗೆಹರಿಯುತ್ತಿತ್ತು’ ಎಂದು ಅದು ಹೇಳಿದೆ.

ಕಮಲ್‌ ಹಾಸನ್‌ ಅಭಿನಯದ ‘ಥಗ್ ಲೈಫ್’ ಸಿನಿಮಾದ ಬಿಡುಗಡೆ ಹಾಗೂ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ‘ಸಿನಿಮಾದ ಹಂಚಿಕೆ ಮತ್ತು ಬಿಡುಗಡೆಗೆ ಅಗತ್ಯ ಬಂದೋಬಸ್ತ್‌ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಸಿನಿಮಾ ನಿರ್ಮಾಣ ಸಂಸ್ಥೆಯಾದ, ‘ರಾಜ್‌ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌’ ಹೈಕೋರ್ಟ್‌ ಮೆಟ್ಟಿಲೇರಿದೆ.

ADVERTISEMENT

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ, ಕಮಲ್ ಅವರ ಹೇಳಿಕೆಯು ಕರ್ನಾಟಕದ ಜನರ ಭಾವನೆಗಳಿಗೆ ನೋವುಂಟು ಮಾಡಿದೆ. ಕಮಲ್ ಹಾಸನ್ ಕ್ಷಮೆಯಾಚಿಸಲು ನಿರಾಕರಿಸಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.

ಭಾಷೆಯು ಜನರ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಹೆಗ್ಗುರುತು. ಇಡೀ ಭಾಷಾ ಸಮುದಾಯದ ಹೆಮ್ಮೆಯನ್ನು ಕುಗ್ಗಿಸುವ ಹೇಳಿಕೆಗಳನ್ನು ನೀಡುವ ಹಕ್ಕು ಯಾವುದೇ ವ್ಯಕ್ತಿಗೆ ಇಲ್ಲ ಎಂದು ನ್ಯಾಯಾಲಯವು ಒತ್ತಿ ಹೇಳಿದೆ.

‘ನೀವು ಅಂತಹ ಹೇಳಿಕೆ ನೀಡಲು ಇತಿಹಾಸಕಾರರೋ ಅಥವಾ ಭಾಷಾಶಾಸ್ತ್ರಜ್ಞರೋ? ಯಾವುದೇ ಭಾಷೆ ಇನ್ನೊಂದರಿಂದ ಹುಟ್ಟುವುದಿಲ್ಲ’ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಟೀಕಿಸಿದರು.

ಯಾರೊಬ್ಬರ ಭಾವನೆಯ ಮೇಲೂ ಸವಾರಿ ಮಾಡಬಾರದು. ಆದೇಶ ಹೊರಡಿಸಲು ನಮಗೆ ಸಮಸ್ಯೆ ಇಲ್ಲ. ಕ್ಷಮೆ ಕೇಳಲಾಗದಿದ್ದರೆ ಬಿಡಿ ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಏಕೆ ಬೇಕು? ನಾನೂ ಥಗ್ ಲೈಫ್ ಸಿನಿಮಾ ನೋಡಲು ಬಯಸಿದ್ದೆ.... ಆದರೆ ಈ ವಿವಾದದಿಂದ ನೋಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.