ADVERTISEMENT

ಇಂದು ಕರ್ನಾಟಕ ರಾಜ್ಯ ಬಜೆಟ್‌: ರೈತರಿಗೆ ಶೂನ್ಯ ಬಡ್ಡಿದರದಲ್ಲಿ ₹5 ಲಕ್ಷ ಸಾಲ?

ರೈತರಿಗೆ ಶೂನ್ಯ ಬಡ್ಡಿದರದ ಸಾಲದ ಮೊತ್ತ ₹5 ಲಕ್ಷಕ್ಕೆ?

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 2:12 IST
Last Updated 18 ಫೆಬ್ರುವರಿ 2023, 2:12 IST
   

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ಹಿಡಿಯಲೇಬೇಕು ಎಂಬ ಛಲತೊಟ್ಟಂತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಾವು ಮಂಡಿಸಲಿರುವ ಎರಡನೇ ಬಜೆಟ್‌ನಲ್ಲಿ ಎಲ್ಲ ಸಮುದಾಯದ ಮತದಾರರನ್ನು ಸೆಳೆಯುವತ್ತ ಲಕ್ಷ್ಯ ನೆಟ್ಟಿದ್ದಾರೆ.

ಸರ್ಕಾರಿ ನೌಕರರು, ವಿವಿಧ ಜಾತಿ ಸಮುದಾಯಗಳು, ನಗರವಾಸಿಗಳು, ಮಹಿಳೆಯರು, ರೈತರನ್ನು ಕೇಂದ್ರೀಕರಿಸಿ ಬಜೆಟ್‌ ತಯಾರಿಗೆ ಆದ್ಯತೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಲಾಗಿರುವ ಏಳನೇ ವೇತನ ಆಯೋಗದ ಅನುಷ್ಠಾನದತ್ತ ಇಡೀ ನೌಕರರ ವರ್ಗ ಕಾತರದಿಂದಿದೆ. ಆಯೋಗದ ವರದಿ ಸಲ್ಲಿಕೆಯಾದ ಬಳಿಕ ಅದರ ಜಾರಿಗೆ ₹10 ಸಾವಿರ ಕೋಟಿ ಅನುದಾನ ಮೀಸಲಿಡುವುದಾಗಿ ಘೋಷಣೆ ಮಾಡಲಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

ಜಾತಿ ಆಧಾರದ ಮೇಲೆ ಚುನಾವಣೆ ನಡೆಸುವುದನ್ನು ರಾಜಕೀಯ ಪಕ್ಷಗಳು ರೂಢಿ ಮಾಡಿಕೊಂಡಿವೆ. ಬೊಮ್ಮಾಯಿ ಅವರದ್ದು ಚುನಾವಣೆ ಬಜೆಟ್ ಆಗಿರುವುದರಿಂದ ಈ ಬಾರಿ ಜಾತಿಗಳನ್ನು ಓಲೈಸುವ ಸಾಧ್ಯತೆ ಹೆಚ್ಚಿದೆ. ಪೂರಕವೆಂಬಂತೆ, ಗಾಣಿಗ, ಮಡಿವಾಳ, ಕುಂಬಾರ, ಮೇದಾರ, ಅಕ್ಕಸಾಲಿಗ ಮತ್ತಿತರ ಸಣ್ಣ ಸಮುದಾಯದವರಿಗೆ ಪ್ರತ್ಯೇಕ ನಿಗಮಗಳನ್ನು ರಚಿಸುವ ಘೋಷಣೆ ಹೊರಬೀಳಲಿದೆ. ಸಾಂಪ್ರದಾಯಿಕ ವೃತ್ತಿ ಆಧಾರಿತ ಸಮುದಾಯದವರಿಗೆ ಪ್ರೋತ್ಸಾಹ ನೀಡಲು ₹50 ಸಾವಿರ ಸಹಾಯಧನ ನೀಡುವ ಬಗ್ಗೆಯೂ ಬೊಮ್ಮಾಯಿ ಪ್ರಕಟಿಸಲಿದ್ದಾರೆ ಎಂದು ಗೊತ್ತಾಗಿದೆ.

ನಿರ್ಣಾಯಕ ಮತದಾರರಾದ ರೈತರನ್ನು ಒಲವು ಗಿಟ್ಟಿಸಲು ಈಗ₹ 3 ಲಕ್ಷದವರೆಗೆ ನೀಡಲಾಗುತ್ತಿರುವ ಶೂನ್ಯ ಬಡ್ಡಿದರದ ಸಾಲದ ಮೊತ್ತವನ್ನು ₹ 5 ಲಕ್ಷಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಮಹಿಳಾ ಮತದಾರರ ವೋಟನ್ನು ಪಕ್ಷಕ್ಕೆ ಸೆಳೆಯಲು ಪ್ರತಿಕುಟುಂಬದ ಮಹಿಳೆಗೆ ₹1,500 ನೀಡುವ ‘ಗೃಹಿಣಿ ಶಕ್ತಿ’ ಯೋಜನೆ ಪ್ರಕಟಿಸುವ ಸಂಭವ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಯೋಜನೆಗಳನ್ನು (ಗೃಹ ಲಕ್ಷ್ಮೀ ಯೋಜನೆಯಡಿ ₹2 ಸಾವಿರ) ಜಾರಿ ಮಾಡುವುದಾಗಿ ಆ ಪಕ್ಷದ ನಾಯಕರು ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.