ADVERTISEMENT

ವರ್ಗಾವಣೆ ರದ್ದಿಗೆ ಅಧಿಕಾರಿಗಳ ಗೋಳಾಟ

ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ಆಯೋಗದ ನಿರ್ದೇಶನದಂತೆ ವರ್ಗಾವಣೆ, ಮೊದಲು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಕ್ಕೆ ಮರು ನಿಯುಕ್ತಿಗೆ ನಕಾರ

ಈರಪ್ಪ ಹಳಕಟ್ಟಿ
Published 2 ಅಕ್ಟೋಬರ್ 2018, 17:00 IST
Last Updated 2 ಅಕ್ಟೋಬರ್ 2018, 17:00 IST

ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ಆಯೋಗದ ನಿರ್ದೇಶನದಂತೆ ವರ್ಗವಾದ ಅಬಕಾರಿ ಇಲಾಖೆ ಅಧಿಕಾರಿಗಳ ಪೈಕಿ ಇಂದಿಗೂ 458 ಅಧಿಕಾರಿಗಳನ್ನು ಇಲಾಖೆ ಈವರೆಗೆ ಮೊದಲು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಕ್ಕೆ ಮರು ನಿಯುಕ್ತಿಗೊಳಿಸಿಲ್ಲ.

ಸದ್ಯ ಮರು ನಿಯುಕ್ತಿ ಎದುರು ನೋಡುತ್ತಿರುವವರಲ್ಲಿ ಬಹುತೇಕರು ತಾತ್ಕಾಲಿಕ ವರ್ಗಾವಣೆ ಕಾರಣಕ್ಕೆ ಸಂಪೂರ್ಣ ಕುಟುಂಬವನ್ನು ವರ್ಗಾವಣೆಗೊಂಡ ಸ್ಥಳಕ್ಕೆ ಸ್ಥಳಾಂತರಿಸಿಲ್ಲ. ಹೀಗಾಗಿ, ಹಲವು ಅಧಿಕಾರಿಗಳು ಅನೇಕ ಬಗೆಯ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತ, ಇಲಾಖೆಯ ಹಿರಿಯ ಅಧಿಕಾರಿಗಳು ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗೋಳಾಡುತ್ತ, ವರ್ಗಾವಣೆ ರದ್ಧತಿಗಾಗಿ ಚಾತಕ ಪಕ್ಷಿಗಳಂತೆ ಎದುರು ನೋಡುತ್ತ ದಿನದೂಡುತ್ತಿದ್ದಾರೆ.

ಚುನಾವಣೆ ನೀತಿ ಸಂಹಿತೆ ಅವಧಿಯಲ್ಲಿ ಅಬಕಾರಿ ಇಲಾಖೆ ಎರಡು ಹಂತಗಳಲ್ಲಿ 311 ಸಬ್ ಇನ್‌ಸ್ಪೆಕ್ಟರ್, 169 ಇನ್‌ಸ್ಪೆಕ್ಟರ್ ಮತ್ತು 24 ಉಪ ಅಧೀಕ್ಷಕರು ಸೇರಿದಂತೆ 503 ಅಧಿಕಾರಿಗಳನ್ನು ಜತೆಗೆ ಕೆಲ ಅಬಕಾರಿ ಉಪ ಆಯುಕ್ತರು ಮತ್ತು ಜಂಟಿ ಆಯುಕ್ತರನ್ನು ವರ್ಗಾವಣೆ ಮಾಡಿತ್ತು.

ADVERTISEMENT

ಆದರೆ ಇದೀಗ ಇದೊಂದು ಸಾಮಾನ್ಯ ವರ್ಗಾವಣೆ ಎಂದು ಹೇಳಿ ಚುನಾವಣೆ ನೀತಿಸಂಹಿತೆ ಮುಗಿದು ನಾಲ್ಕು ತಿಂಗಳು ಕಳೆದರೂ ಇಲಾಖೆ ಈವರೆಗೆ ಅಧಿಕಾರಿಗಳನ್ನು ಮರು ನಿಯೋಜನೆ ಮಾಡಿಲ್ಲ.

ವಿಶೇಷ ಎಂದರೆ ಅಬಕಾರಿ ಉಪ ಆಯುಕ್ತರು ಮತ್ತು ಜಂಟಿ ಆಯುಕ್ತರ ವರ್ಗಾವಣೆಯನ್ನು ಚುನಾವಣೆ ಮುಗಿಯುತ್ತಿದ್ದಂತೆ ರದ್ದುಪಡಿಸಲಾಗಿದೆ. ಜತೆಗೆ, ಒಂದು ತಿಂಗಳ ಹಿಂದಷ್ಟೇ ಇನ್‌ಸ್ಪೆಕ್ಟರ್‌, ಸಬ್ ಇನ್‌ಸ್ಪೆಕ್ಟರ್ ಹುದ್ದೆಯಲ್ಲಿರುವ 45 ಮಹಿಳಾ ಅಧಿಕಾರಿಗಳನ್ನು ಅವರು ಹಿಂದೆ ಕೆಲಸ ನಿರ್ವಹಿಸುತ್ತಿದ್ದ ಜಿಲ್ಲೆಯೊಳಗೆ ಮರು ನಿಯುಕ್ತಿ ಮಾಡಲಾಗಿದೆ.

ಖಡಕ್ ಮಾತನಾಡಿ ಮೌನವಾದ ಸಿಎಂ

ಅಬಕಾರಿ ಖಾತೆ ತಮ್ಮ ಬಳಿ ಇಟ್ಟುಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಈ ವಿಚಾರ ಕಳೆದ ಜೂನ್‌ನಲ್ಲಿ ಗಮನಕ್ಕೆ ಬರುತ್ತಿದ್ದಂತೆ ಬಹಿರಂಗವಾಗಿಯೇ ಅಬಕಾರಿ ಆಯುಕ್ತ ಮನಿಷ್‌ ಮೌದ್ಗಿಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ‘ಕೂಡಲೇ ಅಧಿಕಾರಿಗಳ ವರ್ಗಾವಣೆ ರದ್ದುಪಡಿಸಿ ಮರು ನಿಯುಕ್ತಿ ಮಾಡಬೇಕು. ಇಲ್ಲದಿದ್ದರೆ ಆಯಕ್ತರ ವಿರುದ್ಧ ಕ್ರಮ ಜರುಗಿಸುತ್ತೇನೆ’ ಎಂದು ಖಡಕ್ ಎಚ್ಚರಿಕೆ ನೀಡಿದ್ದರು.

ನಂತರ ವಿ.ಯಶವಂತ್ ಅವರು ಅಬಕಾರಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ‘ಯಶವಂತ್ ಮತ್ತು ಇಲಾಖೆಯ ಹೆಚ್ಚುವರಿ ಆಯುಕ್ತೆ (ಆಡಳಿತ) ಸ್ನೇಹಾ ಅವರು ಮುಖ್ಯಮಂತ್ರಿ ಬಳಿ ಹೋಗಿ ಇದು ಚುನಾವಣೆಗಾಗಿ ಮಾಡಿದ ವರ್ಗಾವಣೆಯಲ್ಲ. ಅನೇಕ ವರ್ಷಗಳಿಂದ ಒಂದೆಡೆ ಇದ್ದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆ. ಹೀಗಾಗಿ ಇದನ್ನು ರದ್ದುಪಡಿಸುವ ಅಗತ್ಯವಿಲ್ಲ ಎಂದು ತಪ್ಪು ಮಾಹಿತಿ ನೀಡಿದರು. ಅದರಿಂದಾಗಿ ಕುಮಾರಸ್ವಾಮಿ ಅವರು ಮೌನಕ್ಕೆ ಶರಣಾದರು’ ಎಂದು ವರ್ಗಾವಣೆ ರದ್ಧತಿಗೆ ಎದುರು ನೋಡುತ್ತಿರುವ ಅಧಿಕಾರಿಗಳು ಆರೋಪಿಸುತ್ತಿದ್ದಾರೆ.

ಇಷ್ಟಾಗುತ್ತಿದ್ದಂತೆ ಕೆಲ ಅಬಕಾರಿ ಇನ್‌ಸ್ಪೆಕ್ಟರ್‌ಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮೊರೆ ಹೋದಾಗ, ಕೆಎಟಿ ‘ಮರು ನಿಯುಕ್ತಿ ಕೋರಿ ಅರ್ಜಿದಾರರು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು’ ಎಂದು ಆದೇಶ ನೀಡಿತ್ತು. ಇದರನ್ವಯ ಅರ್ಜಿದಾರರು ಮನವಿ ಸಲ್ಲಿಸಿದ್ದರೂ ಸರ್ಕಾರ ಮನವಿ ತಿರಸ್ಕರಿಸಿತ್ತು.

ಈ ಕ್ರಮವನ್ನು ಪ್ರಶ್ನಿಸಿ 20 ಅಬಕಾರಿ ಇನ್‌ಸ್ಪೆಕ್ಟರ್‌ಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್ ಸೆಪ್ಟೆಂಬರ್ 28 ರಂದು ‘ಅರ್ಜಿದಾರರು 15 ದಿನಗಳಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಈ ಮನವಿ ಪರಿಗಣಿಸಿ ಸರ್ಕಾರ ಅವರು ಎಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೋ ಅದೇ ಸ್ಥಳಕ್ಕೆ ಮರು ನಿಯುಕ್ತಿ ಮಾಡಬೇಕು’ ಎಂದು ಆದೇಶಿಸಿತ್ತು.

ಇದೀಗ ಅಬಕಾರಿ ಇಲಾಖೆ ಆಯುಕ್ತರು ಹೈಕೋರ್ಟ್‌ನಿಂದ ಆದೇಶ ತಂದವರನ್ನು ಮಾತ್ರ ವರ್ಗಾವಣೆ ಮಾಡುತ್ತೇವೆ. ಉಳಿದವರನ್ನು ಮರು ನಿಯುಕ್ತಿಗೊಳಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ನ್ಯಾಯಾಲಯದ ತೀರ್ಪು ಸಾರ್ವತ್ರಿಕವಾಗಿರುತ್ತವೆ. ಹೀಗಾಗಿ ಅದನ್ನು ಎಲ್ಲರಿಗೂ ಅನ್ವಯಿಸಬೇಕಿತ್ತು. ಆದರೆ ಹಿರಿಯ ಅಧಿಕಾರಿಗಳು ನಮ್ಮ ನಮ್ಮ ನಡುವೆಯೇ ತಾರತಮ್ಯ ಮಾಡುತ್ತಿದ್ದಾರೆ ಎಂದು ಉಳಿದ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.