ADVERTISEMENT

ವರ್ಗಾವಣೆ ಬೆದರಿಕೆ ಆರೋಪ: ವಿಚಾರಣೆ ನಡೆಯಲಿ ಬಿಡಿ -ನ್ಯಾ.ಸಂದೇಶ್

ವರ್ಗಾವಣೆ ಬೆದರಿಕೆ ಆರೋಪ: ಆದೇಶದಲ್ಲಿ ದಾಖಲು--– ಮತ್ತೆ ಗುಡುಗಿದ ನ್ಯಾಯಮೂರ್ತಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 19:31 IST
Last Updated 11 ಜುಲೈ 2022, 19:31 IST
ಎಚ್‌.ಪಿ. ಸಂದೇಶ್
ಎಚ್‌.ಪಿ. ಸಂದೇಶ್   

ಬೆಂಗಳೂರು: ‘ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯತ್ನ ನಡೆದಿದೆ. ನನಗೆ ವರ್ಗಾವಣೆ ಬೆದರಿ ಕೆಯೂ ಇದೆ. ಈ ಬಗ್ಗೆ ವಿಚಾರಣೆ ನಡೆಯಲಿ ಬಿಡಿ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರು ಮತ್ತೊಮ್ಮೆ ಗುಡುಗಿದ್ದಾರೆ.

₹ 5 ಲಕ್ಷ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಪಿ.ಎಸ್‌. ಮಹೇಶ್‌ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್.ಪಿ.ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಮುಂದುವರಿಸಿತು.

ವಿಚಾರಣೆ ವೇಳೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪರ ವಕೀಲ ಪಿ.ಎನ್. ಮನಮೋಹನ್, ‘ಎಸಿಬಿ ಮತ್ತು ಎಸಿಬಿಯ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ತಾವು ಈ ಹಿಂದಿನ ವಿಚಾರಣೆ ವೇಳೆ ಮುಕ್ತ ಕಲಾಪದಲ್ಲಿ ಮಾಡಿರುವ ಮೌಖಿಕ ಟೀಕೆ-ಟಿಪ್ಪಣಿಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ (ಎಸ್ಎಲ್‌ಪಿ) ಸಲ್ಲಿಸಲಾಗಿದೆ. ಆದ್ದರಿಂದ, ಸುಪ್ರೀಂ ಕೋರ್ಟ್ ಆದೇಶ ಬರುವ ತನಕ ಈ ಪ್ರಕರಣದ ವಿಚಾರಣೆ ಮುಂದೂಡ ಬೇಕು’ ಎಂದು ಮನವಿ ಮಾಡಿದರು.

ADVERTISEMENT

ಇದಕ್ಕೆ ನ್ಯಾಯಮೂರ್ತಿ ಸಂದೇಶ್, ‘ಆಯ್ತು. ಆದರೆ, ಕೆಲವೊಂದು ಅಂಶ ಗಳನ್ನು ದಾಖಲು ಮಾಡುತ್ತೇನೆ’ ಎಂದು ಆದೇಶದಲ್ಲಿ ದಾಖಲಿಸಲು ಮುಂದಾ ದರು.

ಇದೇ ವೇಳೆ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಪರ ಹಾಜರಾಗಿದ್ದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ‘ನೀವು ಸೀಮಂತ್ ಕುಮಾರ್ ಸಿಂಗ್ ವಿರುದ್ಧ ಕೆಲವೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದೀರಿ. ಅವರು ಹುದ್ದೆಯಲ್ಲೇ ಇರಬಾರದು ಎಂಬಂತೆ ಹೇಳಿದ್ದೀರಿ. ಹೈಕೋರ್ಟ್ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು.

‘ನನ್ನ ಕಕ್ಷಿದಾರರು ಹೈಕೋರ್ಟ್‌ಗೆ ಅರ್ಜಿಯನ್ನೇ ಸಲ್ಲಿಸಿಲ್ಲ. ಕಡೇ ಪಕ್ಷ ನೋಟಿಸ್ ಕೂಡಾ ನೀಡಿಲ್ಲ. ಹೀಗಿರು ವಾಗ ಅರ್ಜಿ ಸಲ್ಲಿಸದೇ ಇರುವ ವ್ಯಕ್ತಿಯ ಬಗ್ಗೆ ಬೇರೊಂದು ಪ್ರಕರಣದಲ್ಲಿ ತಾವು ಹೇಗೆ ಸೇವಾ ದಾಖಲೆ ಕೇಳುತ್ತೀರಿ. ಆ ರೀತಿಯ ಹಕ್ಕು ಎಲ್ಲಿದೆ’ ಎಂದೂ ಪ್ರಶ್ನಿಸಿದರು.

ಇದಕ್ಕೆ ನ್ಯಾ.‌ ಸಂದೇಶ್, ‘ನೀವು ವಾದ ಮಂಡಿಸುವ ಮೊದಲು ಮಧ್ಯಂತರ ಅರ್ಜಿ ಸಲ್ಲಿಸಿ. ನಿಮಗೆ ಈಗ ಪ್ರತಿನಿಧಿಸುವ ಅಧಿಕೃತತೆ ಇಲ್ಲದಿರುವುದ ರಿಂದ ವಾದ ಮಂಡಿಸಲು ಸಾಧ್ಯವಿಲ್ಲ. ನೀವು ಅರ್ಜಿ ಸಲ್ಲಿಸಿದರೆ ಮಾತ್ರ ನಿಮ್ಮ ವಾದವನ್ನು ಪರಿಗಣಿಸಲು ಸಾಧ್ಯ’ ಎಂದರು.

‘ಈ ಪ್ರಕರಣದಲ್ಲಿ ನಾನು ಎಸಿಬಿ ಕಾರ್ಯವೈಖರಿಯ ಬಗ್ಗೆ ಮುಕ್ತ ಕಲಾಪ ದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಕಾರಣ ನನಗೆ ಬೆದರಿಕೆ ಇದೆ’ ಎಂದು ಸಂದೇಶ್ ಪುನರುಚ್ಚರಿಸಿದರು.

ನ್ಯಾಯಮೂರ್ತಿ ಕಿವಿಯಲ್ಲಿ ಹೇಳಿದ್ದೇನು?

‘ಆವತ್ತು ಜುಲೈ 1. ಕರ್ನಾಟಕದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಋತುರಾಜ್ ಅವಸ್ಥಿ ಅವರ ನಿವೃತ್ತಿಯ ಹಿನ್ನೆಲೆಯಲ್ಲಿ ಹೈಕೋರ್ಟ್ ನಲ್ಲಿ ಬೀಳ್ಕೊಡುಗೆ ವ್ಯವಸ್ಥೆ ಮಾಡಲಾಗಿತ್ತು. ಅಂದು ಡಿನ್ನರ್ ವೇಳೆ ಹಾಲಿ ನ್ಯಾಯಮೂರ್ತಿಯೊಬ್ಬರು ನನ್ನ ಪಕ್ಕ ಬಂದು ಕುಳಿತು, ದೆಹಲಿಯಿಂದ ನನಗೆ ಒಂದು ಕರೆ ಬಂದಿದೆ. ಕರೆ ಮಾಡಿದವರು ನಿಮ್ಮ ಬಗ್ಗೆ ವಿಚಾರಿಸಿದರು ಎಂದು ಹೇಳಿದರು’

ಅದಕ್ಕೆ, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲವಲ್ಲ ಎಂದೆ. ಆದರೆ, ಆ ನ್ಯಾಯಮೂರ್ತಿ ವಿಷಯವನ್ನು ಅಲ್ಲಿಗೇ ನಿಲ್ಲಿಸಲಿಲ್ಲ. ಎಸಿಬಿಯ ಎಡಿಜಿಪಿ ಉತ್ತರ ಭಾರತದವರು. ಪವರ್ ಫುಲ್ ಆಗಿದ್ದಾರೆ ಎಂದು ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಯೊಬ್ಬರ ವರ್ಗಾವಣೆ ಉದಾಹರಿಸಿದರು’ ಎಂದು ಸಂದೇಶ್ ವಿವರಿಸಿದರು.

‘ನ್ಯಾಯಮೂರ್ತಿ ಈ ರೀತಿ ಹೇಳಿದ್ದು ಸರಿಯೇ’ ಎಂದು ಪ್ರಶ್ನಿಸಿದ ಅವರು, ‘ಹೀಗಾಗಿಯೇ ನಾನು ಮುಕ್ತ ಕಲಾಪದಲ್ಲಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಅಷ್ಟಕ್ಕೂ ನನಗೆ ಆ ರೀತಿ ಹೇಳಿರುವ ನ್ಯಾಯಮೂರ್ತಿ ಬಗ್ಗೆ ಎಲ್ಲಿ ಹೇಳಬೇಕೋ ಅಲ್ಲಿ ನಾನು ಎಲ್ಲವನ್ನೂ ಬಿಚ್ಚಿಟ್ಟಿದ್ದೇನೆ. ಇಲ್ಲಿ ನಾನು ಆ ನ್ಯಾಯಮೂರ್ತಿಯ ಹೆಸರು ಹೇಳುವ ಅಗತ್ಯವಿಲ್ಲ. ಯಾರಿಗೆ ತಿಳಿಸಿದ್ದೇನೆಯೊ ಅವರು ಕ್ರಮ‌ ಕೈಗೊಳ್ಳುತ್ತಾರೆ’ ಎಂದು ಸ್ಪಷ್ಟಪಡಿಸಿದರು.

ಸಿಬಿಐಗೆ ಪ್ರಶ್ನೆ: ‘ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಆಗಿದ್ದ ಸೀಮಂತ್‌ ಕುಮಾರ್ ಸಿಂಗ್‌ ಮನೆ
ಮೇಲೆ ಅಕ್ರಮ ಗಣಿಗಾರಿಕೆ ಆರೋಪದ ಪ್ರಕರಣದಲ್ಲಿ ನಡೆದಿದ್ದ ಸಿಬಿಐ ದಾಳಿ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ತನಿಖಾ ವರದಿಯನ್ನು ಸಲ್ಲಿಸಿ’ ಎಂದು ಕಳೆದ ವಿಚಾರಣೆ ವೇಳೆ ನ್ಯಾಯಪೀಠ ಎಸಿಬಿಗೆ ನಿರ್ದೇಶನ ನೀಡಿತ್ತು.‌

ಇದರ ಅನುಸಾರ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್ ನ್ಯಾಯಪೀಠಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ವರದಿಯನ್ನು ಸಲ್ಲಿಸಿದರು.

ಅಕ್ರಮ ಗಣಿಗಾರಿಕೆ ವೇಳೆಎಸಿಬಿಯ ಎಡಿಜಿಪಿಯಾಗಿರುವ ಸೀಮಂತ್ ಸಿಂಗ್ ಅಂದು ಮಾಮೂಲಿ‌ ಪಡೆಯುತ್ತಿದ್ದರು ಎಂದು ಕಾನ್‌ಸ್ಟೇಬಲ್ ಒಬ್ಬರು ಆರೋಪಿಸಿದ್ದರು. ಈ ಕುರಿತು ಸಿಬಿಐ ವಿಚಾರಣೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದು ರಾಜ್ಯ
ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿದೆ. ಆದ್ದರಿಂದ, ಈ ಕುರಿತು ತನಿಖೆ ನಡೆಯಬೇಕಿದೆ ಎಂದು ತಿಳಿಸಲಾಗಿತ್ತು’ ಎಂದು ಪ್ರಸನ್ನಕುಮಾರ್ ನ್ಯಾಯಪೀಠಕ್ಕೆ ವಿವರಿಸಿದರು.

ಇದಕ್ಕೆ ನ್ಯಾಯಮೂರ್ತಿಗಳು, ‘ನಿಮ್ಮ ಈ ವರದಿಗೆ ಏನು ಉತ್ತರ ಬಂತು’ ಎಂದು ಮರು ಪ್ರಶ್ನಿಸಿದರು.

ಈ ಪ್ರಶ್ನೆಗೆ ಪ್ರಸನ್ನಕುಮಾರ್, ‘ಯಾವುದೇ ಉತ್ತರ ಬಂದಿಲ್ಲ. ಕಂದಾಯ, ಅರಣ್ಯ, ಪೊಲೀಸ್ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳು ಆ ಸಮಯದಲ್ಲಿ ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ವಿಫಲವಾಗಿದ್ದವು’ ಎಂದು ವಿವರಿಸಿದರು.

ಎಲ್ಲವನ್ನೂ ಆದೇಶದಲ್ಲಿ ದಾಖಲಿಸಿದ ನ್ಯಾಯಪೀಠ, ಅರ್ಜಿದಾರ ಮಹೇಶ್ ಜಾಮೀನು ಕೋರಿಕೆಯನ್ನು
ಇದೇ 13ರಂದು ವಿಚಾರಣೆ ನಡೆಸಲಾಗುವುದು ಎಂದು ಪ್ರಕರಣ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.