ADVERTISEMENT

ತ್ರಿವೇಣಿ ಚಿತ್ರಮಂದಿರದಲ್ಲಿ ಕಟೌಟ್ ತೆಗೆಯುವಾಗ ಭದ್ರತಾ ಸಿಬ್ಬಂದಿ ದುರ್ಮರಣ

ಗಾಂಧಿನಗರದ ತ್ರಿವೇಣಿ ಚಿತ್ರಮಂದಿರಲ್ಲಿ ಅವಘಡ; ವ್ಯವಸ್ಥಾಪಕನ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 14:10 IST
Last Updated 6 ಡಿಸೆಂಬರ್ 2020, 14:10 IST
ಗಾಂಧಿನಗರದಲ್ಲಿರುವ ತ್ರಿವೇಣಿ ಚಿತ್ರಮಂದಿರ
ಗಾಂಧಿನಗರದಲ್ಲಿರುವ ತ್ರಿವೇಣಿ ಚಿತ್ರಮಂದಿರ   

ಬೆಂಗಳೂರು: ಗಾಂಧಿನಗರದಲ್ಲಿರುವ ತ್ರಿವೇಣಿ ಚಿತ್ರಮಂದಿರದಲ್ಲಿ ಭಾನುವಾರ ಬೆಳಿಗ್ಗೆ ಸಿನಿಮಾ ಕಟೌಟ್ ತೆಗೆಯುವ ವೇಳೆ ಕಾಲು ಜಾರಿ ಬಿದ್ದು ಚಂದ್ರಪ್ಪ (68) ಎಂಬುವರು ದುರ್ಮರಣಕ್ಕೀಡಾಗಿದ್ದಾರೆ.

‘ಆರ್‌.ಟಿ. ನಗರದ ನಿವಾಸಿಯಾಗಿದ್ದ ಚಂದ್ರಪ್ಪ, ಚಿತ್ರಮಂದಿರದಲ್ಲಿ ಹಲವು ವರ್ಷಗಳಿಂದ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಸಾವಿಗೆ ಕಾರಣರಾದ ಆರೋಪದಡಿ ಚಿತ್ರಮಂದಿರದ ವ್ಯವಸ್ಥಾಪಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ವಿಚಾರಣೆ ನಡೆಸಬೇಕಿದೆ’ ಎಂದು ಉಪ್ಪಾರಪೇಟೆ ಪೊಲೀಸರು ಹೇಳಿದರು.

‘ಸುಲ್ತಾನ್‌ಪಾಳ್ಯದ ರಾಜು ಸೆಕ್ಯುರಿಟಿ ಏಜೆನ್ಸಿ ಮೂಲಕ ಚಂದ್ರಪ್ಪ ಕೆಲಸ ಮಾಡುತ್ತಿದ್ದರು. ಅವರಿಗೆ ಭದ್ರತೆ ಜವಾಬ್ದಾರಿ ಮಾತ್ರ ವಹಿಸಲಾಗಿತ್ತು. ಚಿತ್ರಮಂದಿರದ ವ್ಯವಸ್ಥಾಪಕರು, ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಚಂದ್ರಪ್ಪ ಅವರಿಂದ ಕಟೌಟ್ ತೆಗೆಸುತ್ತಿದ್ದರು’ ಎಂದೂ ತಿಳಿಸಿದರು.

ADVERTISEMENT

ಕಟೌಟ್ ತೆಗೆಯಲು ₹ 600

‘ತ್ರಿವೇಣಿ ಚಿತ್ರಮಂದಿರದ ಎದುರು ಸಿನಿಮಾ ಕಟೌಟ್‌ ಇದ್ದು, ಅದಕ್ಕೆ ಪೋಸ್ಟರ್‌ಗಳನ್ನು ಅಂಟಿಸಲಾಗುತ್ತದೆ. ಸಿನಿಮಾದ ಕಟೌಟ್ ತೆಗೆಯಲು ವ್ಯವಸ್ಥಾಪಕರು ಮುಂದಾಗಿದ್ದರು. ಆದರೆ, ಅದನ್ನು ತೆಗೆಯಲು ಕೆಲಸಗಾರರು ಸಿಕ್ಕಿರಲಿಲ್ಲ. ‘ಕಟೌಟ್‌ ತೆಗೆದರೆ ₹ 600 ನೀಡುತ್ತೇನೆ’ ಎಂದು ಚಂದ್ರಪ್ಪ ಅವರಿಗೆ ಹೇಳಿದ್ದರು. ಅದಕ್ಕೆ ಅವರು ಸಹ ಒಪ್ಪಿದ್ದರು’ ಎಂದೂ ಪೊಲೀಸರು ಹೇಳಿದರು.

‘ಚಂದ್ರಪ್ಪ ಅವರಿಗೆ ವಯಸ್ಸಾಗಿತ್ತು. ಕಟೌಟ್‌ ಮೇಲೆ ಹತ್ತಿ ಪೋಸ್ಟರ್ ತೆಗೆಯುತ್ತಿದ್ದ ವೇಳೆಯಲ್ಲಿ ಕಾಲು ಜಾರಿ ಬಿದ್ದಿದ್ದರು. ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿತ್ತು. ಅದರಿಂದಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದೂ ತಿಳಿಸಿದರು.

‘ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದೇ ಚಂದ್ರಪ್ಪ ಸಾವಿಗೆ ಕಾರಣವೆಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.