ADVERTISEMENT

ತುಳು ಶಿಕ್ಷಣ: ತಪ್ಪಿದ ‘ಪಿಯು’ ಕೊಂಡಿ

6ರಿಂದ10, ಪದವಿಯಿಂದ ಪಿಎಚ್‌.ಡಿ ತನಕ ಮಾತ್ರ ಅವಕಾಶ: ಪಿಯುಗೆ ಇಲ್ಲ

ಹರ್ಷವರ್ಧನ ಪಿ.ಆರ್.
Published 23 ಜೂನ್ 2019, 19:45 IST
Last Updated 23 ಜೂನ್ 2019, 19:45 IST
   

ಮಂಗಳೂರು: ಪಿಯು ತರಗತಿಗಳಲ್ಲಿ ತುಳು ವಿಷಯ ಇಲ್ಲದ ಕಾರಣ ಎಸ್ಸೆಸ್ಸೆಲ್ಸಿಯಲ್ಲಿ ತೃತೀಯ ಭಾಷೆಯಾಗಿತುಳು ಕಲಿತ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.

2009ರ ಕರ್ನಾಟಕ ಸರ್ಕಾರದ ಆದೇಶದಂತೆ 2010ರಲ್ಲಿ ಆರನೇ ತರಗತಿಗೆ ತೃತೀಯ ಭಾಷೆ (ಐಚ್ಛಿಕ)ಯಾಗಿ ತುಳು ಕಲಿಕೆಯು ಆರಂಭಗೊಂಡಿತ್ತು.2014–15ರ ಮೊದಲ ತಂಡದಲ್ಲಿ 18 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, ತೇರ್ಗಡೆ ಹೊಂದಿದ್ದರು. ಈ ವರ್ಷ (2018–19) ಶೇ100 ಫಲಿತಾಂಶ ಬಂದಿದ್ದು, 660 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 63 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ. ಈ ತನಕ ಒಟ್ಟು 1,403 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಪ್ರಸ್ತುತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 42 ಶಾಲೆಗಳಲ್ಲಿ 6ರಿಂದ 10ನೇ ತರಗತಿ ತನಕ ತುಳುವನ್ನು ತೃತೀಯ ಭಾಷೆ (ಐಚ್ಛಿಕ)ಯಾಗಿ ಬೋಧಿಸಲಾಗುತ್ತಿದ್ದು, 2,035 ವಿದ್ಯಾರ್ಥಿಗಳಿದ್ದಾರೆ. ವರ್ಷದಿಂದ ವರ್ಷಕ್ಕೆ ತುಳು ಕಲಿಕೆಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಈ ವಿದ್ಯಾರ್ಥಿಗಳು ಪಿಯು ತರಗತಿಯಲ್ಲಿ ಬೇರೆ ಭಾಷೆಯನ್ನು ಆಯ್ದುಕೊಳ್ಳಬೇಕಾಗಿದೆ.

ADVERTISEMENT

ಪದವಿಯಲ್ಲಿ ತುಳುವನ್ನು ಒಂದು ವಿಷಯವಾಗಿ ಅಧ್ಯಯನ ಮಾಡಲು ಮಂಗಳೂರು ವಿಶ್ವವಿದ್ಯಾಲಯವು ಅವಕಾಶ ಕಲ್ಪಿಸಿಕೊಟ್ಟಿದೆ. ಅಲ್ಲದೇ, 2017–18ನೇ ಸಾಲಿನಿಂದ ವಿಶ್ವವಿದ್ಯಾಲಯವು ತುಳು ಸ್ನಾತಕೋತ್ತರ ಪದವಿ (ಎಂ.ಎ.)ಯನ್ನೂ ಆರಂಭಿಸಿದೆ. ಈ ಹಿಂದೆ ತುಳು ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್‌ ಕೋರ್ಸ್‌ಗೆ ಅವಕಾಶ ಕಲ್ಪಿಸಿತ್ತು. ಆಂಧ್ರಪ್ರದೇಶದ ಕುಪ್ಪಂನಲ್ಲಿರುವ ದ್ರಾವಿಡಿಯನ್ ವಿಶ್ವವಿದ್ಯಾಲಯವು 2007ರಲ್ಲೇ ತುಳು ವಿಭಾಗವನ್ನು ಆರಂಭಿಸಿದೆ. ಕೇರಳದ ಕಣ್ಣೂರು ವಿಶ್ವವಿದ್ಯಾಲಯವು ತುಳು ಸರ್ಟಿಫಿಕೇಟ್ ಕೋರ್ಸ್‌ ಆರಂಭಿಸಿದೆ. ಹೀಗಾಗಿ, ತುಳು ಅಧ್ಯಯನಕ್ಕೆ ಅವಕಾಶ ಹೆಚ್ಚಿದ್ದು, ಪಿಯು ತರಗತಿಗಳು ಮಾತ್ರ ಇಲ್ಲದಾಗಿದೆ.

‘ತುಳುವಿನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆಯುತ್ತಿದ್ದಾರೆ. ಭಾಷಾ ಅಲ್ಪಸಂಖ್ಯಾತರಿಗೆ ಸರ್ಕಾರ ಉನ್ನತ ವ್ಯಾಸಂಗ, ಸಂಸ್ಥೆ– ಉದ್ಯಮಗಳಲ್ಲೂ ಮೀಸಲಾತಿ ನೀಡಿದೆ. ‘ತುಳು’ ಕರಾವಳಿಯ ಸರ್ವಧರ್ಮೀಯರ ಅಸ್ಮಿತೆಯಾಗಿದೆ. ಈ ಎಲ್ಲ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ತುಳು ಕಲಿಕೆಗೆ ಬೇಡಿಕೆ ಹೆಚ್ಚಾಗುತ್ತಿದೆ’ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ವಿವರಿಸಿದರು.

‘2009ರಲ್ಲಿ ಅಕಾಡೆಮಿಯ ಅಧ್ಯಕ್ಷರು ಹಾಗೂ ತಂಡದ ಸತತ ಪ್ರಯತ್ನದ ಫಲವಾಗಿ ತುಳು ಶಿಕ್ಷಣದಲ್ಲಿ ಸೇರ್ಪಡೆಗೊಂಡಿತು. ಅಲ್ಲಿಂದ ಇಲ್ಲಿಯ ತನಕ ಅಕಾಡೆಮಿಯೇ ತುಳು ಶಿಕ್ಷಕರ ಗೌರವಧನ ನೀಡುತ್ತಿದೆ. ಸದ್ಯ 42 ಶಿಕ್ಷಕರಿದ್ದು, ವಾರ್ಷಿಕವಾಗಿ ಸುಮಾರು ₹ 15 ಲಕ್ಷದಷ್ಟು ಖರ್ಚು ಅಕಾಡೆಮಿಗೆ ಬೀಳುತ್ತಿದೆ. ಹೀಗಾಗಿ, ಶಿಕ್ಷಣ ಇಲಾಖೆಯ ಅತಿಥಿ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ತುಳು ಶಿಕ್ಷಕರ ನೇಮಕ ಹಾಗೂ ಪದವಿ ಪೂರ್ವ ತರಗತಿಯಲ್ಲಿ ತುಳು ಕಲಿಕೆಗೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಬೇಕಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.