ADVERTISEMENT

ಎಂಟನೇ ಪರಿಚ್ಛೇದಕ್ಕೆ ತುಳು: ನಿರ್ದಿಷ್ಟ ಮಾನದಂಡವಿಲ್ಲ - ಸಚಿವ ಕಿಶನ್‌ ರೆಡ್ಡಿ

ರಾಜ್ಯಸಭೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವ ಕಿಶನ್‌ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2023, 17:29 IST
Last Updated 10 ಆಗಸ್ಟ್ 2023, 17:29 IST
ಸಚಿವ ಕಿಶನ್‌ ರೆಡ್ಡಿ
ಸಚಿವ ಕಿಶನ್‌ ರೆಡ್ಡಿ   

ನವದೆಹಲಿ: ತುಳು ಸೇರಿದಂತೆ ಯಾವುದೇ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಯಾವುದೇ ನಿರ್ದಿಷ್ಟ ಮಾನದಂಡಗಳಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. 

ರಾಜ್ಯಸಭೆಯಲ್ಲಿ ಸದಸ್ಯ ಪಿ.ಸಂತೋಷ್‌ ಕುಮಾರ್‌ ಗುರುವಾರ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಜಿ.ಕಿಶನ್‌ ರೆಡ್ಡಿ, ‘ತುಳು ಸೇರಿದಂತೆ ಹಲವು ಭಾರತೀಯ ಭಾಷೆಗಳನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕಾಲಕಾಲಕ್ಕೆ ಬೇಡಿಕೆಗಳು ಬಂದಿವೆ. ಪಹ್ವಾ ಮತ್ತು ಸೀತಾಕಾಂತ್ ಮೊಹಾಪಾತ್ರ ಸಮಿತಿಗಳ ಮೂಲಕ ನಿರ್ದಿಷ್ಟ ಮಾನದಂಡಗಳನ್ನು ನಿಗದಿಪಡಿಸುವ ಪ್ರಯತ್ನಗಳನ್ನು ನಡೆಸಲಾಗಿತ್ತು. ಆದರೆ, ಆ ಪ್ರಯತ್ನ ಪೂರ್ಣಗೊಳ್ಳಲಿಲ್ಲ’ ಎಂದು ತಿಳಿಸಿದರು. 

‘ಉಪಭಾಷೆಗಳು ಮತ್ತು ಭಾಷೆಗಳ ವಿಕಸನವು ಕ್ರಿಯಾತ್ಮಕ ಪ್ರಕ್ರಿಯೆಯಾಗಿದ್ದು, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಳಿಂದ ಪ್ರಭಾವಿತವಾಗಿರುತ್ತವೆ.  ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಲು ಭಾಷೆಗಳಿಗೆ ಯಾವುದೇ ಮಾನದಂಡ ನಿಗದಿಪಡಿಸುವುದು ಕಷ್ಟಕರ. ಜನರ ಬೇಡಿಕೆ ಹಾಗೂ ಭಾವನೆಗಳ ಕುರಿತು ಸರ್ಕಾರಕ್ಕೆ ಅರಿವಿದೆ. ಅಂತಹ ವಿನಂತಿಗಳನ್ನು, ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು. 

ADVERTISEMENT

ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯು ತುಳು ಸೇರಿದಂತೆ ಎಲ್ಲ ಭಾಷೆಗಳ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದೆ. ಈ ಸಂಸ್ಥೆಗೆ 2020–21ರಲ್ಲಿ ₹54.88 ಕೋಟಿ, 2021–22ರಲ್ಲಿ ₹57.88 ಕೋಟಿ ಹಾಗೂ 2022–23ರಲ್ಲಿ ₹60 ಕೋಟಿ ಅನುದಾನ ನೀಡಲಾಗಿದೆ ಎಂದು ಅವರು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.