ADVERTISEMENT

ತುಳು ರಾಜ್ಯದ ಎರಡನೇ ಅಧಿಕೃತ ಭಾಷೆ: ಸಂಪುಟದಲ್ಲಿ ಚರ್ಚೆ- ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 17:49 IST
Last Updated 7 ಸೆಪ್ಟೆಂಬರ್ 2025, 17:49 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ರಾಜ್ಯದ ಎರಡನೇ ಅಧಿಕೃತ ಭಾಷೆ ತುಳು ಎಂದು ಘೋಷಿಸಬೇಕು ಎಂಬ ಬೇಡಿಕೆಯ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಭಾನುವಾರ ಇಲ್ಲಿ ನಡೆದ ಅಷ್ಟೆಮಿದ ಐಸಿರಿ ತುಳುವ ತರ್ಲ್ ಸಾಸಿರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇತ್ತೀಚೆಗೆ ಕುಂದಾಪುರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಆ ಕಾರ್ಯಕ್ರಮ, ಈ ಕಾರ್ಯಕ್ರಮದಲ್ಲಿ ಸೇರಿರುವ ಜನ ನೋಡಿದರೆ ಮುಂದೆ ನೀವೆಲ್ಲರೂ ನಮ್ಮನ್ನು ಬೆಂಗಳೂರಿನಿಂದ ಖಾಲಿ ಮಾಡಿಸುತ್ತೀರೇನೋ ಎಂದು ಭಯವಾಗುತ್ತಿದೆ. ನಿಮ್ಮ ಈ ಶಕ್ತಿ, ಉತ್ಸಾಹ ನೋಡಿ ನನಗೆ ಈ ಅನುಮಾನ ಕಾಡುತ್ತಿದೆ’ ಎಂದು ಚಟಾಕಿ ಹಾರಿಸಿದರು.

ADVERTISEMENT

‘ಕರಾವಳಿ ಜನ ಇಡೀ ದೇಶಕ್ಕೆ ಕರ್ನಾಟಕದ ಮೂಲಕ ಸಂಸ್ಕೃತಿ ಹಾಗೂ ಶಿಕ್ಷಣ, ಧಾರ್ಮಿಕ ಶಕ್ತಿ, ಬ್ಯಾಂಕಿಂಗ್‌ ವ್ಯವಸ್ಥೆ ಕೊಟ್ಟಿದ್ದಾರೆ. ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಇದ್ದೀರಿ. ಕರಾವಳಿ ಭಾಗ, ದಕ್ಷಿಣ ಕನ್ನಡದ ಜನ ವಿದ್ಯಾವಂತರು, ಬುದ್ಧಿವಂತರು, ಪ್ರಜ್ಞಾವಂತರು. ನಿಮ್ಮ ಜೊತೆ ನಾನು ಇದ್ದೇನೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ. ಡಿ.ಕೆ. ಶಿವಕುಮಾರ್ ನಿಮ್ಮವ ಎಂದು ಭಾವಿಸಿ. ನಾನು ನಿಮ್ಮ ಪರವಾಗಿದ್ದೇನೆ. ನೀವು ನನಗೆ ಬೆಂಬಲವಾಗಿರಿ. ನಾನು ನಿಮ್ಮ ಆಶೀರ್ವಾದವನ್ನಷ್ಟೇ ಕೇಳುತ್ತಿದ್ದೇನೆ’ ಎಂದರು.

‘ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗದ ಜನರು ಉದ್ಯೋಗಕ್ಕಾಗಿ ವಲಸೆ ಹೋಗದಂತೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲು ಆ ಭಾಗದ ಶಾಸಕರು, ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಜೊತೆ ನಾನು ಚರ್ಚೆ ಮಾಡಿದ್ದೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.