ADVERTISEMENT

ಮೇಕೆದಾಟು ಮುತ್ತಿಗೆಗೆ ಮುಂದಾದ ತಮಿಳುನಾಡು ರೈತರು

ಗಡಿಯಲ್ಲಿ ನಾಕಾಬಂದಿ: ರಾಜ್ಯ ಪ್ರವೇಶಿಸದಂತೆ ತಡೆದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 16:56 IST
Last Updated 28 ಮಾರ್ಚ್ 2021, 16:56 IST

ಕನಕಪುರ: ಮೇಕೆದಾಟು ಜಲಾಶಯ ನಿರ್ಮಾಣ ವಿರೋಧಿಸಿ ಪ್ರತಿಭಟಿಸಲು ಬರುತ್ತಿದ್ದ ತಮಿಳುನಾಡು ರೈತ ಸಂಘಟನೆಗಳ ಸದಸ್ಯರನ್ನು ರಾಜ್ಯದ ಪೊಲೀಸರು ಭಾನುವಾರ ಕನಕಪುರ ಗಡಿಯಲ್ಲಿಯೇ ತಡೆದರು.

ಕುಡಿಯುವ ನೀರು ಮತ್ತು ವಿದ್ಯುತ್‌ ಉತ್ಪಾದನೆ ಉದ್ದೇಶಕ್ಕಾಗಿ ಜಲಾಶಯ ನಿರ್ಮಾಣಕ್ಕೆ ಕರ್ನಾಟಕ ಮುಂದಾಗಿದೆ. ಇದನ್ನು ವಿರೋಧಿಸಿ ಅಣೆಕಟ್ಟೆ ನಿರ್ಮಾಣ ಸ್ಥಳದಲ್ಲಿ ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕಲು ಮುಖಂಡರು ಕರೆ ಕೊಟ್ಟಿದ್ದರು.

ಈ ಮಾಹಿತಿ ತಿಳಿದ ಪೊಲೀಸರು ಬೆಳಿಗ್ಗೆಯಿಂದಲೇ ತಮಿಳುನಾಡಿನ ಒಬ್ಬ ಹೋರಾಟಗಾರನೂ ರಾಜ್ಯದ ಗಡಿ ಪ್ರವೇಶಿದಂತೆ ತಡೆದರು. ತಮಿಳುನಾಡು ಗಡಿ ಭಾಗದ ಕನಕಪುರ ತಾಲ್ಲೂಕಿನ ವಿವಿಧ 9 ಕಡೆ ನಾಕಾಬಂದಿ ಹಾಕಲಾಗಿತ್ತು. ಇದರಿಂದಾಗಿ ಮೇಕೆದಾಟಿಗೆ ಬಂದ ಪ್ರವಾಸಿಗರೂ ತಪಾಸಣೆಗೆ ಒಳಗಾಗಿ ತೊಂದರೆ ಅನುಭವಿಸಿದರು.

ADVERTISEMENT

‘ಸತ್ಯಮಂಗಲ ಮಾರ್ಗವಾಗಿ ಕರ್ನಾಟಕಕ್ಕೆ ಬರಲು ಪ್ರಯತ್ನಿಸಿದ ತಮಿಳುನಾಡು ರೈತರನ್ನು ಸತ್ಯಮಂಗಲದಲ್ಲಿ ಅಲ್ಲಿನ ಪೊಲೀಸರು ಭಾನುವಾರ ಬೆಳಿಗ್ಗೆ ಬಂಧಿಸಿ ಸಂಜೆ ಬಿಡುಗಡೆಗೊಳಿಸಿದ್ದಾರೆ. ಒಬ್ಬ ಪ್ರತಿಭಟನಕಾರನೂ ಕರ್ನಾಟಕಕ್ಕೆ ಬಂದಿಲ್ಲ. ತಾಲ್ಲೂಕಿನಾದ್ಯಂತ ಬಿಗಿಭದ್ರತೆ ಕೈಗೊಳ್ಳಲಾಗಿದೆ’ ಎಂದು ಕನಕಪುರ ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ. ಕೃಷ್ಣ ತಿಳಿಸಿದರು.

‌ಚನ್ನಪಟ್ಟಣ ಡಿವೈಎಸ್ಪಿ‌ ನೇತೃತ್ವದಲ್ಲಿ 5 ಇನ್ ಸ್ಪೆಕ್ಟರ್, 12
ಎಸ್ ಐ, 25 ಎಎಸ್ ಐ ಹಾಗೂ 106 ಕಾನ್‌ಸ್ಟೆಬಲ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.