ADVERTISEMENT

ರೆಡ್ಡಿ ವಿರುದ್ಧ ಟ್ವಿಟರ್‌ ಸಮರ ಸಾರಿದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 20:15 IST
Last Updated 30 ಅಕ್ಟೋಬರ್ 2018, 20:15 IST
‍ಪ್ರತಾಪ ಸಿಂಹ ಬರೆದ ಪುಸ್ತಕ
‍ಪ್ರತಾಪ ಸಿಂಹ ಬರೆದ ಪುಸ್ತಕ   

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯ ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಟ್ವೀಟ್‌ಗಳ ಸಮರ ಸಾರಿದ್ದಾರೆ.

‘ಸಿದ್ದರಾಮಯ್ಯ ಅನ್ಯಾಯವಾಗಿ ನನ್ನನ್ನು ನಾಲ್ಕು ವರ್ಷ ಜೈಲಿಗೆ ತಳ್ಳಿದರು’ ಎಂಬುದಾಗಿ ಜರ್ನಾದನ ರೆಡ್ಡಿ ನೀಡಿರುವ ಹೇಳಿಕೆಗೆ ಮಂಗಳವಾರ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್‌ ಮೂಲಕ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ– ವಿರುದ್ಧ ಚರ್ಚೆ ಆರಂಭಗೊಂಡಿದೆ.

ಸಿದ್ದರಾಮಯ್ಯ ಟ್ವೀಟ್‌ಗಳು ಹೀಗಿವೆ:

ADVERTISEMENT

*ಸಿದ್ದರಾಮಯ್ಯ ಅನ್ಯಾಯವಾಗಿ ನನ್ನನ್ನು ನಾಲ್ಕು ವರ್ಷ ಜೈಲಿಗೆ ಹಾಕಿದರು ಎಂದು ಕಣ್ಣೀರು ಹಾಕುತ್ತಿರುವ ಜನಾರ್ದನ ರೆಡ್ಡಿಯವರೇ ನಿಮ್ಮ ಪಕ್ಷದ ಸಂಸದರೇ(ಪ್ರತಾಪಸಿಂಹ) ಬರೆದಿರುವ ಈ ಪುಸ್ತಕ ಓದಿ, ಜೈಲಿಗೆ ಹೋಗುವ ಪಾಪ ಏನು ಮಾಡಿದ್ದೀರಿ ಎಂಬುದು ಗೊತ್ತಾಗುತ್ತದೆ.

*ಜನಾರ್ದನ ರೆಡ್ಡಿಯವರೇ ನಿಮ್ಮ ಚರ್ಚೆಯಲ್ಲಿ ನಾನು ಕೇಳಬೇಕೆಂದಿದ್ದ ಪ್ರಶ್ನೆಗಳನ್ನು ನಿಮ್ಮ ಸಂಸದರೇ ಕೇಳಿದ್ದಾರೆ. ಚರ್ಚೆಗೆ ಬರುವುದಕ್ಕೆ ಮೊದಲು ಅವರ ಪುಸ್ತಕ ಓದಿಕೊಂಡಿ ಬನ್ನಿ.

*ಶಿವಮೊಗ್ಗ ಹೋರಾಟದ ನೆಲ, ಇಲ್ಲಿನ ಮಣ್ಣಿನಲ್ಲಿ, ಇಲ್ಲಿನ ಜನರ ರಕ್ತದಲ್ಲಿ ಅಂತಹ ಹೋರಾಟದ ಕಿಚ್ಚು ಇದೆ. ಇದು ಒಂದು ಲೋಕಸಭಾ ಕ್ಷೇತ್ರದ ಚುನಾವಣೆ ಎಂದು ತಿಳಿದುಕೊಳ್ಳಬೇಡಿ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಕಿತ್ತೊಗೆಯುವ ಹೋರಾಟ ಶಿವಮೊಗ್ಗದ ನೆಲದಿಂದ ಆರಂಭಗೊಳ್ಳಲಿ.

ಸಿ.ಟಿ.ರವಿ ತಿರುಗೇಟು:ಸಿದ್ದರಾಮಯ್ಯ ಅವರಿಗೆ ಶಾಸಕ ಸಿ.ಟಿ.ರವಿ ಟ್ವೀಟ್‌ ಮೂಲಕ ತಿರುಗೇಟು ನೀಡಿದ್ದಾರೆ.

*ಜನಾರ್ದನ ರೆಡ್ಡಿ ಬಗ್ಗೆ ಏಕೆ ಮಾತನಾಡುತ್ತೀರಿ ಸಿದ್ದರಾಮಯ್ಯ ಅವರೇ. ಚಾಮುಂಡೇಶ್ವರಿ ಕ್ಷೇತ್ರದ ಸಜ್ಜನ ಮತದಾರರು ಅಹಂಕಾರಿ ಮತ್ತು ಹಿಂದೂ ವಿರೋಧಿ ಮುಖ್ಯಮಂತ್ರಿಯನ್ನು ಸೋಲಿಸಿದ ಬಗ್ಗೆ ಯಾಕೆ ಮಾತನಾಡುವುದಿಲ್ಲ. ರಾಜಕಾರಣದಲ್ಲಿ ಉಳಿದುಕೊಳ್ಳಲು ನೀವು ನಿರ್ಲಜ್ಜೆಯಿಂದ ತಂದೆ–ಮಗನಿಗೆ ಸ್ವಾಭಿಮಾನ ಒತ್ತೆ ಇಟ್ಟ ಬಗ್ಗೆ ಏಕೆ
ಮಾತನಾಡುವುದಿಲ್ಲ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.