ADVERTISEMENT

ಪ್ರವೇಶ, ಅನುದಾನ ಕೊರತೆ: 2 ಎಂಜಿನಿಯರಿಂಗ್ ಕಾಲೇಜು ಬಂದ್

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 19:30 IST
Last Updated 15 ಆಗಸ್ಟ್ 2019, 19:30 IST

ಬೆಳಗಾವಿ: ಬೆಂಗಳೂರಿನ ಯಲ್ಲಮ್ಮ ದಾಸಪ್ಪ ತಾಂತ್ರಿಕ ಸಂಸ್ಥೆ ಹಾಗೂ ಶ್ರೀವಿದ್ಯಾ ವಿನಾಯಕ ತಾಂತ್ರಿಕ ಸಂಸ್ಥೆ ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲಾಗಿದೆ. ಅನುದಾನ ಕೊರತೆ ಹಾಗೂ ಪ್ರವೇಶಾತಿಯಲ್ಲಿ ಕುಸಿತ ಕಂಡುಬಂದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

‘ಈ ಎಂಜಿನಿಯರಿಂಗ್ ಕಾಲೇಜುಗಳನ್ನು ಯಾವ ಕಾರಣದಿಂದ ಮುಚ್ಚುತ್ತಿದ್ದಾರೆ ಎಂದು ಗೊತ್ತಿಲ್ಲ. 2019–20ನೇ ಶೈಕ್ಷಣಿಕ ಸಾಲಿನಿಂದ ಮುಚ್ಚುತ್ತೇವೆ ಎಂದು ಮನವಿ ಸಲ್ಲಿಸಿ ಅನುಮತಿ ಪಡೆದಿದ್ದರು. ನಾವು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಕೂಡ ಕೊಟ್ಟಿದ್ದೇವೆ. ಹೀಗಾಗಿ, ಎಐಸಿಟಿಇ (ಅಖಿಲ ಭಾರತ ತಾಂತ್ರಿಕ ಪರಿಷತ್ತು) ಸೂಚನೆ ಮೇರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದಿಂದ ಆ ಕಾಲೇಜುಗಳಲ್ಲಿ ಸೀಟುಗಳ ಹಂಚಿಕೆ ಪ್ರಕ್ರಿಯೆ ನಡೆಸಿರಲಿಲ್ಲ. ಈ ಸಾಲಿನಲ್ಲಿ ಪ್ರವೇಶಾತಿ ನಡೆದಿಲ್ಲ’ ಎಂದು ಕುಲಪತಿ ಡಾ.ಕರಿಸಿದ್ದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಎರಡೂ ಕಾಲೇಜುಗಳಲ್ಲಿ 350 ವಿದ್ಯಾರ್ಥಿಗಳು ಇರುವ ಮಾಹಿತಿ ಇದೆ. ಅವರಿಗೆ ಬೆಂಗಳೂರಿನ ಅಥವಾ ಅವರು ಕೇಳಿದ ಬೇರೆ (ಮಾನ್ಯತೆ ಪಡೆದವುಗಳಲ್ಲಿ ಮಾತ್ರ) ಕಾಲೇಜುಗಳಲ್ಲಿ ಸೀಟು ಕೊಡಲಾಗುವುದು. ಈಗಾಗಲೇ ಪೋಷಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಬೆಂಗಳೂರಿನಲ್ಲೇ ಕೌನ್ಸೆಲಿಂಗ್ ನಡೆಸಿ, ಒಪ್ಪಿಗೆ ಪಡೆಯಲಾಗಿದೆ. ಪತ್ರಗಳನ್ನು (ಅಲಾಟ್‌ಮೆಂಟ್) ಕಳುಹಿಸುವುದಷ್ಟೇ ಬಾಕಿ ಇದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.