ADVERTISEMENT

ರುಂಡ–ಮುಂಡ ಬೇರ್ಪಡಿಸಿದ್ದ ಇಬ್ಬರು ಮಹಿಳೆಯರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 14:25 IST
Last Updated 4 ಆಗಸ್ಟ್ 2022, 14:25 IST
ಮಹಿಳೆಯರ ಕೊಲೆ ಪ್ರಕರಣ ಭೇದಿಸಿದ ಪೊಲೀಸ್‌ ತಂಡಕ್ಕೆ ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕ ಪ್ರವೀಣ್ ಮಧುಕರ್ ಪವಾರ್ ಮೆಚ್ಚುಗೆಯ ಪತ್ರ ವಿತರಿಸಿದರು. ಶ್ರೀರಂಗಪಟ್ಟಣ ಡಿವೈಎಸ್‌ಪಿ ಸಂದೇಶ್‌ ಕುಮಾರ್‌, ಎಎಸ್ಪಿ ಎಂ.ವೇಣುಗೋಪಾಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಇದ್ದಾರೆ
ಮಹಿಳೆಯರ ಕೊಲೆ ಪ್ರಕರಣ ಭೇದಿಸಿದ ಪೊಲೀಸ್‌ ತಂಡಕ್ಕೆ ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕ ಪ್ರವೀಣ್ ಮಧುಕರ್ ಪವಾರ್ ಮೆಚ್ಚುಗೆಯ ಪತ್ರ ವಿತರಿಸಿದರು. ಶ್ರೀರಂಗಪಟ್ಟಣ ಡಿವೈಎಸ್‌ಪಿ ಸಂದೇಶ್‌ ಕುಮಾರ್‌, ಎಎಸ್ಪಿ ಎಂ.ವೇಣುಗೋಪಾಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಇದ್ದಾರೆ   

ಮಂಡ್ಯ: ಇಬ್ಬರು ಮಹಿಳೆಯರನ್ನು ಕೊಲೆ ಮಾಡಿ ರುಂಡ, ಮುಂಡ ಬೇರ್ಪಡಿಸಿ ನಾಲೆಯಲ್ಲಿ ಬಿಸಾಡಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೂನ್‌ 8ರಂದು ಪಾಂಡವಪುರ ತಾಲ್ಲೂಕು ಬೇಬಿ ಗ್ರಾಮದ ಕೆರೆಯ ಕಾಲುವೆಯಲ್ಲಿ ಒಂದು ಶವ ಪತ್ತೆಯಾಗಿದ್ದರೆ, ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಬಳಿಯ ಸಿಡಿಎಸ್‌ ನಾಲೆಯಲ್ಲಿ ಇನ್ನೊಂದು ಶವ ಪತ್ತೆಯಾಗಿತ್ತು. ದೇಹಗಳ ಮುಂಡ ಭಾಗ ಮಾತ್ರ ಪತ್ತೆಯಾಗಿದ್ದು ರುಂಡ ಸಿಕ್ಕಿರಲಿಲ್ಲ. ಎರಡೂ ಕೊಲೆಗಳು ಒಂದೇ ರೀತಿಯಲ್ಲಿ ನಡೆದಿದ್ದ ಕಾರಣ ಪೊಲೀಸರು ವಿವಿಧ ದಿಕ್ಕುಗಳಲ್ಲಿ ತನಿಖೆ ನಡೆಸುತ್ತಿದ್ದರು.

‘ರಾಮನಗರ ಜಿಲ್ಲೆಯ ಕೋಡಿಹಳ್ಳಿ ಕಾಲೊನಿಯ ವ್ಯಕ್ತಿ ಹಾಗೂ ಪಾಂಡವಪುರ ತಾಲ್ಲೂಕಿನ ಹರವು ಗ್ರಾಮದ ಮಹಿಳೆಯನ್ನು ತುಮಕೂರಿನ ಡಾಬಸ್‌ಪೇಟೆಯಲ್ಲಿ ಬಂಧಿಸಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಕಾಣೆಯಾದ ಮಹಿಳೆಯೊಬ್ಬರ ಪ್ರಕರಣ ಬೆನ್ನುಹತ್ತಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ’ ಎಂದು ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕ ಪ್ರವೀಣ್ ಮಧುಕರ್ ಪವಾರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಆರೋಪಿಗಳು ಮಹಿಳೆಯರಿಗೆ ಕೆಲಸ ಕೊಡಿಸುವುದಾಗಿ ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡುತ್ತಿದ್ದರು. ಇಲ್ಲಿಯವರೆಗೂ ಇವರು 3 ಕೊಲೆ ಮಾಡಿದ್ದಾರೆ, ಇನ್ನೂ 5 ಕೊಲೆ ಮಾಡಲು ಯೋಜನೆ ರೂಪಿಸಿದ್ದರು ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ. ಹಣ ಹಾಗೂ ಅಕ್ರಮ ಸಂಬಂಧ ಕೊಲೆಗೆ ಕಾರಣವಾಗಿದೆ’ ಎಂದರು.

‘ಮೃತದೇಹಗಳ ರುಂಡ, ಮುಂಡ ಬೇರ್ಪಡಿಸಿದ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿತ್ತು. ರಾಜ್ಯ, ಹೊರರಾಜ್ಯಗಳಲ್ಲಿ 1,116ಕ್ಕೂ ಹೆಚ್ಚು ಮಹಿಳೆಯರ ನಾಪತ್ತೆ ಪ್ರಕರಣಗಳನ್ನು ಪರಿಶೀಲನೆ ಮಾಡಲಾಗಿದೆ. ರಾಜ್ಯದಾದ್ಯಂತ 10 ಸಾವಿರ ಕರಪತ್ರ ಹಂಚಿ ಕೊಲೆಯಾದ ಮಹಿಳೆಯರ ಮಾಹಿತಿ ಕೋರಲಾಗಿತ್ತು. ₹ 1 ಲಕ್ಷ ಬಹುಮಾನವನ್ನೂ ಘೋಷಣೆ ಮಾಡಲಾಗಿತ್ತು’ ಎಂದರು.

‘ಗಾರ್ಮೆಂಟ್‌ ಹಾಗೂ ಹೋಂ ನರ್ಸಿಂಗ್‌ ಕೆಲಸ ಕೊಡಿಸುವುದಾಗಿ ಮೈಸೂರಿಗೆ ಕರೆಸಿಕೊಂಡು ಮಹಿಳೆಯರ ಕತ್ತು ಬಿಗಿದು ಕೊಲೆ ಮಾಡಲಾಗಿತ್ತು. ಮಹಿಳೆಯರ ಚಿನ್ನಾಭರಣ ದೋಚಿ ಮಾರಾಟ ಮಾಡಿದ್ದರು. ನಂತರ ರುಂಡ, ಮುಂಡ ಬೇರ್ಪಡಿಸಿ ತಂದು ಕಾಲುವೆಯಲ್ಲಿ ಬಿಸಾಡಿದ್ದರು. ಅತ್ಯಂತ ಕ್ಲಿಷ್ಟಕರ ಪ್ರಕರಣವನ್ನು ಭೇದಿಸಿರುವ ಪೊಲೀಸ್‌ ಸಿಬ್ಬಂದಿಗೆ ₹ 1 ಲಕ್ಷ ಬಹುಮಾನ ನೀಡಲಾಗುವುದು’ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌, ಎಎಸ್ಪಿ ವೇಣುಗೋಪಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.