ADVERTISEMENT

ವಿದ್ಯುತ್‌ ಕಣ್ಣಾಮುಚ್ಚಾಲೆ: ಗ್ರಾಹಕರು ಹೈರಾಣ 

ಕಲ್ಲಿದ್ದಲು ಕೊರತೆ, ತಾಂತ್ರಿಕ ಕಾರಣದಿಂದ ವಿದ್ಯುತ್ ಉತ್ಪಾದನೆ ಕಡಿಮೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2023, 21:46 IST
Last Updated 13 ಆಗಸ್ಟ್ 2023, 21:46 IST
   

ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯದ ಹಲವೆಡೆ ಅನಿಯಮಿತ ವಿದ್ಯುತ್ ಕಡಿತದಿಂದಾಗಿ ಗ್ರಾಹಕರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ.

ಕೆಲವೆಡೆ ದುರಸ್ತಿ ನೆಪದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದರೆ, ಮತ್ತೆ ಕೆಲವಡೆ ಮಳೆ, ಗಾಳಿ ಇಲ್ಲದಿದ್ದರೂ ಪದೇ ಪದೇ ವಿದ್ಯುತ್‌ ವ್ಯತ್ಯಯ ಸಾಮಾನ್ಯವಾಗಿದೆ. ‌ವಿದ್ಯುತ್ ಸಮಸ್ಯೆಯಿಂದ ಬೆಳೆಗಳಿಗೆ ನೀರುಣಿಸುವುದು ಕಷ್ಟವಾಗಿದೆ. 

‘ಕಲ್ಲಿದ್ದಲು ಕೊರತೆ ಹಾಗೂ ತಾಂತ್ರಿಕ ಕಾರಣದಿಂದ ರಾಜ್ಯದ ಶಾಖೋತ್ಪನ್ನ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ಮೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲ ವಿದ್ಯುತ್‌ ಶಕ್ತಿ ಕಂಪನಿಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಲೋಡ್‌ ಶೆಡ್ಡಿಂಗ್ ಶುರುವಾಗಿದೆ. ಇನ್ನೂ ನಾಲ್ಕೈದು ದಿನ ಇದೇ ಪರಿಸ್ಥಿತಿ ಮುಂದುವರಿಯಬಹುದು’ ಎನ್ನುತ್ತಾರೆ ಶಿವಮೊಗ್ಗದ ಮೆಸ್ಕಾಂ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ADVERTISEMENT

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಕಡಿಮೆಯಾಗಿ ಸೆಖೆ ಹೆಚ್ಚುತ್ತಿರುವ ಮಧ್ಯೆಯೇ ಅನಿಯಮಿತ ವಿದ್ಯುತ್ ಕಡಿತ ಹೆಚ್ಚಾಗಿದೆ. ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಹೀಗೆ ಮನಸ್ಸಿಗೆ ಬಂದಂತೆ 10ರಿಂದ 15 ನಿಮಿಷ‌, ಒಮ್ಮೊಮ್ಮೆ ಒಂದರಿಂದ ಎರಡು ಗಂಟೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ.

ಎರಡು ದಿನಗಳಿಂದ ರಾಯಚೂರು ನಗರದಲ್ಲಿ ನಿತ್ಯ ಸಂಜೆ ಒಂದೂವರೆ ತಾಸು ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಜೆಸ್ಕಾಂ ಅಧಿಕಾರಿಗಳು ಯಾವುದೇ ಮುನ್ಸೂಚನೆಯನ್ನೂ ನೀಡುತ್ತಿಲ್ಲ. 

ಬೇಡಿಕೆಯಷ್ಟು ಉತ್ಪಾದನೆ: ಆರ್‌ಟಿಪಿಎಸ್‌ನ ಒಟ್ಟು 8 ವಿದ್ಯುತ್ ಘಟಕಗಳ ಪೈಕಿ 5 ವಿದ್ಯುತ್ ಘಟಕಗಳಿಂದ ಉತ್ಪಾದನೆ ಆಗುತ್ತಿದೆ. ಒಟ್ಟು 1,720 ಮೆಗಾವಾಟ್‌ ಉತ್ಪಾದನೆ ಆಗಬೇಕಿರುವಲ್ಲಿ 600 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ.

210 ಮೆಗಾವಾಟ್‌ 2ನೇ ವಿದ್ಯುತ್ ಘಟದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ವಾರ್ಷಿಕ ನಿರ್ವಹಣೆಗಾಗಿ 250 ಮೆಗಾವಾಟ್‌ 8ನೇ ವಿದ್ಯುತ್ ಘಟಕ ಉತ್ಪಾದನೆ ಬಂದ್ ಮಾಡಲಾಗಿದೆ.

ಪವನ ಶಕ್ತಿ ಮತ್ತು ಜಲ ವಿದ್ಯುತ್ ಘಟಕಗಳಲ್ಲಿ ಹೆಚ್ಚು ಉತ್ಪಾದನೆ ಆಗುತ್ತಿದೆ. ಇದರಿಂದಾಗಿ, ಆರ್‌ಟಿಪಿಎಸ್ ವಿದ್ಯುತ್ ಘಟಕಗಳಲ್ಲಿ  ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಯಾದಗಿರಿ ಜಿಲ್ಲೆಯಲ್ಲಿ ಪವನ ಮತ್ತು ಸೌರವಿದ್ಯುತ್‌ ಉತ್ಪಾದನೆಯಲ್ಲಿ ಕುಂಠಿತವಾಗಿಲ್ಲ. ಆದರೂ ದುರಸ್ತಿ ನೆಪದಲ್ಲಿ ಆಗಾಗ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ.

ಕೊಪ್ಪಳ ಜಿಲ್ಲೆಯಲ್ಲಿ ಮೇಲಿಂದ ಮೇಲೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಕಲಬುರಗಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಆಗಾಗ ಕಡಿತವಾಗುತ್ತಲೇ ಇದೆ.

ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಅನಧಿಕೃತವಾಗಿ ಬೆಳಿಗ್ಗೆ ಎರಡು ತಾಸು ಹಾಗೂ ಸಂಜೆ ಎರಡು ತಾಸು ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ.

ಮೆಸ್ಕಾಂ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆ ವಾರದಿಂದ ಈಚೆಗೆ ಹೆಚ್ಚಿದೆ.

‘ದಿನದಲ್ಲಿ ಇಂತಿಷ್ಟೇ ಗಂಟೆ ವಿದ್ಯುತ್ ಪೂರೈಕೆ ಸ್ಥಗಿತ ಮಾಡಲಾಗುವುದು ಎಂದು ಮೊದಲೇ ಹೇಳಲು ಆಗುವುದಿಲ್ಲ. ಪೂರೈಕೆ ಕಡಿಮೆಯಾದಾಗ ವಿದ್ಯುತ್ ಕಡಿತ ಮಾಡುವಂತೆ ಗ್ರಿಡ್‌ಗಳಿಂದ ಸೂಚನೆ ಬರುತ್ತಿದೆ. ಆ ಸಂದರ್ಭದಲ್ಲಿ ಕಡಿತ ಮಾಡಲಾಗುತ್ತಿದೆ’ ಎಂದು ಚಿಕ್ಕಮಗಳೂರು ಜಿಲ್ಲೆಯ ಮೆಸ್ಕಾಂ ಅಧಿಕಾರಿಗಳು ತಿಳಿಸಿದರು.

ಅನಿಯಮಿತವಾಗಿ ಲೋಡ್‌ಶೆಡ್ಡಿಂಗ್‌ ಮಾಡುತ್ತಿರುವುದನ್ನು ಒಪ್ಪಿಕೊಂಡ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಡಿ.,‘ರಾಯಚೂರು ಹಾಗೂ ಬಳ್ಳಾರಿಯ ಉಷ್ಣ ವಿದ್ಯುತ್‌ ಸ್ಥಾವರಗಳಿಂದ ಮೆಸ್ಕಾಂಗೆ ವಿದ್ಯುತ್‌ ಪೂರೈಕೆಯಲ್ಲಿ ಕೊರತೆ ಉಂಟಾಗುತ್ತಿದೆ. ಗ್ರಿಡ್‌ ವಿಫಲಗೊಳ್ಳುವುದನ್ನು ತಪ್ಪಿಸಲು ಅನಿಯಮಿತ ಲೋಡ್‌ಶೆಡ್ಡಿಂಗ್‌ ಮಾಡುವುದು ಅನಿವಾರ್ಯ’ ಎಂದರು.

ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮೂರ‍್ನಾಲ್ಕು ದಿನಗಳಿಂದ ಮುನ್ಸೂಚನೆ ನೀಡದೆ ಪದೇ ಪದೇ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಲೋಡ್‌ ಶೆಡ್ಡಿಂಗ್‌ ವಿರೋಧಿಸಿ ರೈತರು ಮತ್ತು ರೈತ ಸಂಘಟನೆಗಳು ಬೀದಿಗಿಳಿದು ಹೋರಾಟಕ್ಕೂ ಸಜ್ಜಾಗಿದ್ದಾರೆ. 

ಯಾವ ಸಮಯದಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತದೆ ಎಂದು ಸುಳಿವು ನೀಡದೆ ದಿನಕ್ಕೆ ಮೂರ‍್ನಾಲ್ಕು ತಾಸು ವಿದ್ಯುತ್ ಲೋಡ್‌ ಶೆಡ್ಡಿಂಗ್‌ ಮಾಡಲಾಗುತ್ತಿದೆ. ಯಾವ ಹೊತ್ತಿನಲ್ಲಿ ವಿದ್ಯುತ್‌ ಕೈ ಕೊಡುತ್ತದೆ ಎಂದು ಗೊತ್ತಾಗದೆ ಜನರು, ರೈತರು, ಉದ್ಯಮಿಗಳು ಹೈರಾಣಾಗಿದ್ದಾರೆ. 

ತುಮಕೂರು ಜಿಲ್ಲೆಯಲ್ಲಿ ಮೂರ‍್ನಾಲ್ಕು ದಿನಗಳಿಂದ ಗಂಟೆಗೊಮ್ಮೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಪ್ರಮುಖವಾಗಿ ಬೆಳಿಗ್ಗೆ 6ರಿಂದ 9 ಗಂಟೆ ಸಮಯದಲ್ಲಿ ಹಾಗೂ ಸಂಜೆ 4ರಿಂದ 6 ಗಂಟೆ ಇಲ್ಲವೆ, ಸಂಜೆ 6ರಿಂದ ರಾತ್ರಿ 9 ಗಂಟೆ ನಡುವೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. 

ಕೋಲಾರ ಜಿಲ್ಲೆಯಲ್ಲಿ ನಿತ್ಯ ಒಂದೂವರೆಯಿಂದ ಮೂರು ತಾಸು ವಿದ್ಯುತ್‌ ಕಡಿತಗೊಳಿಸಲಾ‌ಗುತ್ತಿದೆ. ಕೋಲಾರ ನಗರದಲ್ಲಿ ಸಂಜೆ 6ರಿಂದ ರಾತ್ರಿ 10 ಗಂಟೆವರೆಗೆ (ಬಹುಬೇಡಿಕೆ ಸಮಯ) ಸುಮಾರು ಒಂದೂವರೆ ತಾಸು ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆಗಸ್ಟ್‌ ಮೊದಲ ವಾರದಿಂದ ದುರಸ್ತಿ ಹೆಸರಲ್ಲಿ ಪ್ರತಿ ದಿನ ಸಂಜೆ ಎರಡು ತಾಸು ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ವಿದ್ಯುತ್‌ ಕಡಿತ ಮಾಡಿರುವ ಬಗ್ಗೆ ವಿಚಾರಣೆ ಮಾಡಿದರೆ ದುರಸ್ತಿ ನೆಪ ಹೇಳುತ್ತಾರೆ. 

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರೆ ಯಾವುದೇ ದುರಸ್ತಿ ನಡೆಯುತ್ತಿರುವುದಿಲ್ಲ ಎಂದು ದೊಡ್ದಡಬಳ್ಳಾಪುರದ ನೇಕಾರ ಲಕ್ಷ್ಮಿನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು. 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಾರದಿಂದ ವಿದ್ಯುತ್ ಕಡಿತ ತೀವ್ರವಾಗಿದೆ. ವಿದ್ಯುತ್ ಕಡಿತ ವಿರೋಧಿಸಿ ಶನಿವಾರ ರೈತ ಸಂಘದ ಕಾರ್ಯಕರ್ತರು ನಗರದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ಸಹ ನಡೆಸಿದರು. 

ಜಿಲ್ಲೆಯ ಜನರು ಪ್ರಮುಖವಾಗಿ ಕೃಷಿ ಅವಲಂಬಿಸಿದ್ದಾರೆ. ರೇಷ್ಮೆ, ತರಕಾರಿ, ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಈಗ ಹಣ್ಣು, ಹೂ, ತರಕಾರಿ ಬೆಳೆಗಳಿಗೆ ಬೆಲೆ ಮತ್ತು ಬೇಡಿಕೆ ಇದೆ. ಆದರೆ, ವಿದ್ಯುತ್ ಸಮಸ್ಯೆಯಿಂದ ಬೆಳೆಗಳಿಗೆ ನೀರುಣಿಸುವುದು ಕಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.