ಮಂಡ್ಯ: ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ವಿಶ್ವವಿಖ್ಯಾತ ವೈರಮುಡಿ ಉತ್ಸವ ಮಾರ್ಚ್ 24ರಂದು ನಡೆಯಲಿದ್ದು ಸಿದ್ಧತೆಗಳು ಆರಂಭಗೊಂಡಿವೆ.
ಕಳೆದ ವರ್ಷ ಕೋವಿಡ್ ಲಾಕ್‌ಡೌನ್ ಜಾರಿಯಲ್ಲಿದ್ದ ಕಾರಣ ವೈರಮುಡಿ ಉತ್ಸವ ಸರಳವಾಗಿ ನಡೆದಿತ್ತು. ದೇವಾಲಯದ ಒಳಗೆ ಸ್ಥಾನೀಕರು ಸಾಂಕೇತಿಕವಾಗಿ ಉತ್ಸವ ಆಚರಿಸಿದ್ದರು. ಆದರೆ ಈ ಬಾರಿ ವೈಭವಯುತವಾಗಿ ಉತ್ಸವ ಆಚರಣೆ ಮಾಡಲು ನಿರ್ಧರಿಸಲಾಗಿದೆ.
ಜಿಲ್ಲಾ ಖಜಾನೆಯಲ್ಲಿರುವ ವಜ್ರಖಚಿತ ತಿರುವಾಭರಣಗಳ ಪೆಟ್ಟಿಗೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಸಂಜೆ ಚೆಲುವನಾರಾಯಣಸ್ವಾಮಿಯ ಮುಡಿಗೇರಿಸಲಾಗುತ್ತದೆ. ರಾತ್ರಿಯಿಡೀ ದೇವಾಲಯದ ಸುತ್ತಲೂ ಮೆರವಣಿಗೆ ನಡೆಸಲಾಗುತ್ತದೆ.
‘ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ್ 19ರಂದೇ ಆರಂಭಗೊಳ್ಳುತ್ತವೆ. ಮಾರ್ಚ್ 24ರಂದು ವೈರಮುಡಿ ಧಾರಣೆ, ಮಾರ್ಚ್ 31ರಂದು ಬ್ರಹ್ಮೋತ್ಸವ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.